ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬಿಡಿಎ ಹೊಸ ಬಡಾವಣೆಗೆ 2,000 ಎಕರೆ

33 ಹಳ್ಳಿ ವ್ಯಾಪ್ತಿಯಲ್ಲಿ ಲೇಔಟ್‌; ಸಾರ್ವಜನಿಕ– ಖಾಸಗಿ ಸಹಭಾಗಿತ್ವ: ಜಯರಾಮ್‌
ನವೀನ್ ಮಿನೇಜಸ್
Published 14 ಮಾರ್ಚ್ 2024, 0:26 IST
Last Updated 14 ಮಾರ್ಚ್ 2024, 0:26 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೂರ್ವ ಹಾಗೂ ಉತ್ತರ ಭಾಗದ 33 ಹಳ್ಳಿಗಳ ವ್ಯಾಪ್ತಿಯ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಹೊಸ ಬಡಾವಣೆಯನ್ನು ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ಈ 33 ಹಳ್ಳಿಗಳಲ್ಲಿ ಕೆಲವು ಗ್ರಾಮಗಳ ಪ್ರದೇಶಗಳು ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ವ್ಯಾಪ್ತಿಯಲ್ಲಿವೆ. ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮುನ್ನ 22 ಸರ್ವೇಯರ್‌ಗಳ ತಂಡವನ್ನು ರಚಿಸಿರುವ ಬಿಡಿಎ, ವಾಸ್ತವ ನೆಲೆಗಟ್ಟಿನ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಖಾಲಿ ಇರುವ ಪ್ರದೇಶ ಎಷ್ಟಿದೆ ಎಂಬ ಮಾಹಿತಿ ಸೇರಿದಂತೆ ಕಂದಾಯ ದಾಖಲೆಗಳ ಪ್ರಕಾರ ಗ್ರಾಮ ನಕ್ಷೆ, ಗಡಿಯ ವಿವರಗಳನ್ನು ವರದಿ ಒಳಗೊಳ್ಳಲಿದೆ.

‘ಭೂಮಿ ಕಳೆದುಕೊಳ್ಳುವವರಿಗೆ ಪ್ರತಿ ಎಕರೆಗೆ ₹1.3 ಕೋಟಿ ನೀಡಲಾಗುತ್ತದೆ. ಇದು ಹೆಚ್ಚು ಆಕರ್ಷಕವಾಗಿಲ್ಲದ ಕಾರಣ, ಪಿಪಿಪಿ ಮಾದರಿ ಅನುಸರಿಸಲಾಗುತ್ತದೆ. ಹೀಗಾಗಿ, ಶೇ 40ರಷ್ಟು ಅಭಿವೃದ್ಧಿ ನಿವೇಶನಗಳನ್ನು (ಪ್ರತಿ ಒಂದು ಎಕರೆ ಭೂಮಿಗೆ 9,583 ಚದರ ಅಡಿ) ಭೂ ಮಾಲೀಕರಿಗೆ ನೀಡಲಾಗುತ್ತದೆ’ ಎಂದು ಬಿಡಿಎ ಆಯುಕ್ತ ಎನ್‌. ಜಯರಾಮ್‌ ತಿಳಿಸಿದರು.

‘ಅಭಿವೃದ್ಧಿ ನಿವೇಶನಗಳ ದರ ಪ್ರತಿ ಚದರ ಅಡಿಗೆ ₹5 ಸಾವಿರದಿಂದ ₹6 ಸಾವಿರವಾಗುತ್ತದೆ. ನಗದು ಪರಿಹಾರದಲ್ಲಿ ಭೂಮಾಲೀಕರು ಪಡೆಯುವುದಕ್ಕಿಂತ ಐದು ಪಟ್ಟು ಹೆಚ್ಚನ್ನು ಈ ಮೂಲಕ ಗಳಿಸಲಿದ್ದಾರೆ’ ಎಂದರು.

ಡಾ. ಶಿವರಾಮಕಾರಂತ ಬಡಾವಣೆಯ ಪೂರ್ವ ಮತ್ತು ಉತ್ತರ ಭಾಗದಲ್ಲಿ ಬಡಾವಣೆಯನ್ನು ವಿಸ್ತರಿಸಲು ಅಧ್ಯಕ್ಷ ಎನ್‌.ಎ. ಹ್ಯಾರೀಸ್‌ ನೇತೃತ್ವದಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಬಿಡಿಎಯ ಈ ಯೋಜನೆ ಚುನಾವಣೆ ವರ್ಷದಲ್ಲಿ ಪ್ರಕಟವಾಗಿದ್ದು, ಇದು ಮತಗಳನ್ನು ಆಕರ್ಷಿಸುವ ತಂತ್ರವಾಗಿದೆ. ಬಿಡಿಎ ನೀಡುವ ಪರಿಹಾರ ಮಾರುಕಟ್ಟೆ ದರಕ್ಕಿಂತ ಸಾಕಷ್ಟು ಪಟ್ಟು ಹಿಂದಿದೆ. ಇದಲ್ಲದೆ, ಎರಡೂವರೆ ವರ್ಷದಿಂದ 2,500 ಎಕರೆ ಪ್ರದೇಶದ ಶಿವರಾಮ ಕಾರಂತ ಬಡಾವಣೆಗಾಗಿ ಭೂಹಕ್ಕು ಕಳೆದುಕೊಂಡಿರುವ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ಇನ್ನು ಹೊಸ ಬಡಾವಣೆ ಹೇಗೆ ಮಾಡಲು ಸಾಧ್ಯ’ ಎಂಬ ಪ್ರಶ್ನೆ ಎದುರಾಗಿದೆ.

‘ಬಿಡಿಎ ಯೋಜನೆ ರೈತರು ಮತ್ತು ದಲಿತರ ಹಿತಾಸಕ್ತಿಯ ವಿರುದ್ಧವಾಗಿದೆ. ಶಿವರಾಮ ಕಾರಂತ ಬಡಾವಣೆಗೆ ಬಿಡಿಎ ಭೂಸ್ವಾಧೀನ ಮಾಡಿಕೊಂಡ ಮೇಲೆ ರೈತರ ಜೀವನ ದುಸ್ತರವಾಗಿದೆ. ಪರಿಹಾರ ನೀಡದ ಬಿಡಿಎ, ರೈತರ ನಿತ್ಯಜೀವನವನ್ನು ಹಾಳು ಮಾಡಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಮಾವಳ್ಳಿಪುರ ಶ್ರೀನಿವಾಸ್‌ ದೂರಿದರು.

ಪೂರ್ವದಲ್ಲಿನ 22 ಹಳ್ಳಿಗಳು

ಬೆಲ್ಲಹಳ್ಳಿ, ಕನ್ನೂರು, ಬಿದರಹಳ್ಳಿ, ಹಿರಂದಹಳ್ಳಿ, ಚಿಮ್ಮಸಂದ್ರ, ಬಿಳಿಶಿವಾಲೆ, ಅನಗಪುರ, ವಡೇರಹಳ್ಳಿ, ರಾಮಪುರ, ಗೊರವಿಗೆರೆ, ಕೋಟಂ ನಲ್ಲೂರು, ಅಮಾನಿ ದೊಡ್ಡಕೆರೆ, ಸಾರಕ್ಕಿ ಗೊಟ್ಟಹಳ್ಳಿ, ದೊಡ್ಡಗುಂಟೇನಬ್ಬೆ, ಕಾಜಿಸೊಣ್ಣೇನಹಳ್ಳಿ, ಕನ್ನಮಂಗಲ, ಪೂಜೇನ ಅಗ್ರಹಾರ, ಭಕ್ತರಹಳ್ಳಿ, ಮಲ್ಲಸಂದ್ರ, ಕಾಡುಗೋಡಿ, ಶೀಗೇಹಳ್ಳಿ, ಕೊರಳೂರು, ಬೈಲಕೆರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT