ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಆನ್‌ಲೈನ್‌ ತೆರಿಗೆ ಪಾವತಿಗೆ ಅವಕಾಶ

ಆರ್ಥಿಕ ವರ್ಷ ಆರಂಭವಾಗಿ ಎರಡೂವರೆ ತಿಂಗಳ ಬಳಿಕ ಲೋಪ ಸರಿಪಡಿಸಿದ ಬಿಡಿಎ
Last Updated 26 ಜೂನ್ 2021, 21:22 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2021–22ನೇ ಸಾಲಿನ ಆಸ್ತಿ ತೆರಿಗೆಯ ಆನ್‌ಲೈನ್ ಪಾವತಿಗೆ ಕೊನೆಗೂ ಅವಕಾಶ ಕಲ್ಪಿಸಿದೆ.

2021–22ನೇ ಆರ್ಥಿಕ ವರ್ಷ ಆರಂಭವಾಗಿ ಎರಡೂವರೆ ತಿಂಗಳ ಬಳಿಕವೂ ತನ್ನ ವೆಬ್‌ಸೈಟ್‌ನಲ್ಲಿ (bdabangalore.org) ಆನ್‌ಲೈನ್‌ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಿರಲಿಲ್ಲ. ಬಿಡಿಎ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿನ ನಿವೇಶನದಾರರು ತೆರಿಗೆ ಪಾವತಿಸಲು ವೆಬ್‌ಸೈಟ್‌ ತೆರೆದಾಗ, ‘ಕೋವಿಡ್‌ನಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಕಚೇರಿಯಲ್ಲಿ ಶೇ 50ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ತಿ ತೆರಿಗೆ ಪರಿಷ್ಕರಣೆಗೊಳಿಸಿ ಅಂತರ್ಜಾಲದಲ್ಲಿ ತೆರಿಗೆ ಪಾವತಿಸಲು ಶೀಘ್ರದಲ್ಲೇ ಅನುವು ಮಾಡಿಕೊಡಲಾಗುತ್ತದೆ’ ಎಂಬ ಸಂದೇಶ ಕಾಣಿಸಿಕೊಳ್ಳುತ್ತಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯು ಇದೇ 23ರ ಸಂಚಿಕೆ ಯಲ್ಲಿ ‘ಬಿಡಿಎ: ಆಸ್ತಿ ತೆರಿಗೆ ಪಾವತಿಗೆ ಇನ್ನೂ ತೆರೆದಿಲ್ಲ ಕಿಂಡಿ’ ಎಂಬ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಲೋಪಗಳನ್ನು ಸರಿಪಡಿಸಿ, ವೆಬ್‌ಸೈಟ್‌ ಮೂಲಕವೇ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಿದೆ.

ಕೋವಿಡ್ ನಡುವೆಯೇ ಶುಲ್ಕ ಹೆಚ್ಚಳ:ಬಿಡಿಎ ಕೋವಿಡ್‌ ಸಂಕಷ್ಟದ ಕಾಲದಲ್ಲೇ ನಾಗರಿಕ ಸೇವೆಗಳ ಶುಲ್ಕವನ್ನು ಕಳೆದ ಸಾಲಿನಲ್ಲಿ ಹೆಚ್ಚಳ ಮಾಡಿತ್ತು. ಖಾತಾ ಶುಲ್ಕ, ಫ್ಲ್ಯಾಟ್‌ ಖರೀದಿಯ ಅರ್ಜಿ ಶುಲ್ಕ, ನೋಂದಣಿ ಶುಲ್ಕ, ನಿವೇಶನ ಖರೀದಿ ಅರ್ಜಿ ಶುಲ್ಕ, ಖಾಲಿ ನಿವೇಶನಗಳಿಗೆ ವಿಧಿಸುವ ದಂಡನಾ ಶುಲ್ಕಗಳೆಲ್ಲವನ್ನೂ ಏಕಾಏಕಿ ಶೇ 200ರಿಂದ ಶೇ 250ರಷ್ಟು ಹೆಚ್ಚಿಸುವ ಪ್ರಸ್ತಾಪಕ್ಕೆ 2020ರ ಆ.28ರಂದು ನಡೆದಿದ್ದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. 2020ರ ಅ.6ರಿಂದಲೇ ಪರಿಷ್ಕೃತ ದರಗಳನ್ನು ಜಾರಿಗೆ ತರಲು ಬಿಡಿಎ ನಿರ್ಣಯ ಕೈಗೊಂಡಿತ್ತು. ಈ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಆ ಬಳಿಕ ಪರಿಷ್ಕೃತ ಆಸ್ತಿ ತೆರಿಗೆಯನ್ನು ಆರ್ಥಿಕ ವರ್ಷದ ಮಧ್ಯದಲ್ಲಿ ಜಾರಿಗೆ ತರುವ ‍ಪ್ರಸ್ತಾವನೆಯನ್ನು ಪ್ರಾಧಿಕಾರವು ಕೈಬಿಟ್ಟಿತ್ತು. ಆದರೆ, ಖಾತಾ ಶುಲ್ಕ, ಅರ್ಜಿ ಶುಲ್ಕ, ನೋಂದಣಿ ಶುಲ್ಕಗಳ ಪರಿಷ್ಕೃತ ದರಗಳನ್ನು 2021ರ ಅಕ್ಟೋಬರ್‌ನಿಂದಲೇ ಜಾರಿಗೆ ತಂದಿತ್ತು.

ಆಸ್ತಿ ತೆರಿಗೆ ಹಾಗೂ ನಿರ್ವಹಣಾ ಶುಲ್ಕವನ್ನು ಬಿಡಿಎ 2021–22ನೇ ಆರ್ಥಿಕ ವರ್ಷದಲ್ಲಿ ಜಾರಿಗೆ ತಂದಿದೆ. ಬಿಡಿಎ ವೆಬ್‌ಸೈಟ್‌ನಲ್ಲಿ ಆಸ್ತಿ ತೆರಿಗೆಗೆ ಸಂಬಂಧಿಸಿದ ಕಿಂಡಿಯಲ್ಲೂ ಪರಿಷ್ಕೃತ ದರವನ್ನು ಅಳವಡಿಸಲಾಗಿದೆ. ಹಾಗಾಗಿ ನಿವೇಶನದಾರರು ಪ್ರಸಕ್ತ ಸಾಲಿನಿಂದ ಆಸ್ತಿ ತೆರಿಗೆ ಹೆಚ್ಚಳದ ಹೊರೆ ಹೊರಬೇಕಾಗಿದೆ.

ಅಂಕಿಅಂಶ
ಅಂಕಿಅಂಶ

‘ನಿರ್ವಹಣೆ ಶುಲ್ಕ ರದ್ದುಪಡಿಸಿ’

ಬಡಾವಣೆಯಲ್ಲಿ ಯಾವುದೇ ಸೌಕರ್ಯ ಕಲ್ಪಿಸದೆಯೇ ಆಸ್ತಿ ತೆರಿಗೆ ಮತ್ತು ನಿರ್ವಹಣೆ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

ಆಸ್ತಿ ತೆರಿಗೆ ಹಾಗೂ ನಿರ್ವಹಣೆ ಶುಲ್ಕಗಳನ್ನು ರದ್ದುಪಡಿಸಬೇಕು ಎಂದು ಕೋರಿ ವೇದಿಕೆಯು ಬಿಡಿಎ ಆಯುಕ್ತರಿಗೆ ಮನವಿ ಸಲ್ಲಿಸಿದೆ.

‘ಬಡಾವಣೆಯಲ್ಲಿ ಉದ್ಯಾನವಿಲ್ಲ. ಆಟದ ಮೈದಾನವಿಲ್ಲ. ರಸ್ತೆಗಳಿಲ್ಲ. ನೀರು ಪೂರೈಕೆ ಆರಂಭವಾಗಿಲ್ಲ. ವಿದ್ಯುತ್‌ ಸಂಪರ್ಕ ಒದಗಿಸಿಲ್ಲ. ಒಳಚರಂಡಿ ಸಂಪರ್ಕವಿಲ್ಲ. ಇಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಲ್ಲ. ಈ ಹಂತದಲ್ಲೇ ನಿರ್ವಹಣೆ ಶುಲ್ಕ ವಿಧಿಸುವ ತರ್ಕ ಅರ್ಥವಾಗುತ್ತಿಲ್ಲ. ಯಾವುದೇ ಮೂಲಸೌಕರ್ಯ ಒದಗಿಸದೆಯೇ ನಿವೇಶನ ಹಂಚಿಕೆ ಮಾಡಿದ್ದೇ ತಪ್ಪು. ಅದಲ್ಲದೇ, ಬಿಡಿಎ ಅಧಿಕಾರಿಗಳು ತಪ್ಪಾಗಿ ಕೆಂಪೇಗೌಡ ಬಡಾವಣೆಯನ್ನೂ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಸಿದ್ದಾರೆ’ ಎಂದು ವೇದಿಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT