ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ವಿರುದ್ಧ ಪಿತೂರಿ: ಬಿಡಿಎ ಅಧ್ಯಕ್ಷ ಆರೋಪ

ಆಯುಕ್ತರ ವಿರುದ್ಧ ಕಿಡಿಕಾರಿದ ಎಸ್‌.ಟಿ.ಸೋಮಶೇಖರ್‌
Last Updated 23 ಮಾರ್ಚ್ 2019, 19:01 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ವಿರುದ್ದ ಪಿತೂರಿ‌ ನಡೆಯುತ್ತಿದೆ. ನಾನು ಹೇಳುವ ಯಾವ ಕೆಲಸವನ್ನೂ ಆಯುಕ್ತ ರಾಕೇಶ್‌ ಸಿಂಗ್‌ ಅವರು ಮಾಡುತ್ತಿಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್‌.ಟಿ.ಸೋಮಶೇಖರ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ತಮ್ಮ ವಿರುದ್ದ ಮಾತನಾಡಿದವರ ಯಾವ ಕೆಲಸವನ್ನೂ ಅವರು ಮಾಡಿಕೊಡುವುದಿಲ್ಲ. ಆದರೆ, ಚಿತ್ರನಟಿಯೊಬ್ಬರು ಹೇಳುವ ಕೆಲಸವನ್ನು ಮಾತ್ರ ಮಾಡಿಕೊಡುತ್ತಾರೆ. ಖಾಸಗಿ ಹೋಟೆಲ್‌ಗೆ ಬಿಡಿಎ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತಾರೆ. ಬಾಲು ಎಂಬ ಏಜೆಂಟ್ ಮೂಲಕ ಕೆಲಸ ಮಾಡುತ್ತಿದ್ದಾರೆ. 10 ಕಡತಗಳನ್ನು ವಿಲೇವಾರಿ ಮಾಡಲು ಅಶೋಕ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ ಬಗ್ಗೆ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿದೆ’ ಎಂದು ಆಯುಕ್ತರ ವಿರುದ್ಧ ಆರೋಪ ಮಾಡಿದರು.

‘ಆಯುಕ್ತರ ವರ್ಗಾವಣೆಗೆ ನಾನು ಯಾವತ್ತೂ ಒತ್ತಡ ಹೇರಿಲ್ಲ. ಬದಲಾಗಿ ಕಾಯಂ ಆಯುಕ್ತರನ್ನು ಒದಗಿಸಿ ಎಂದು ಸರ್ಕಾರವನ್ನು ಕೇಳಿದ್ದೇನೆ’ ಎಂದರು.

‘ರಾಮಲಿಂಗಮ್ ನಿರ್ಮಾಣ ಸಂಸ್ಥೆಗೂ ನನಗೂ ಯಾವ ಸಂಬಂಧವೂ ಇಲ್ಲ. ಆ ಕಂಪನಿಗೆ ಟೆಂಡರ್‌ ನೀಡುವಂತೆ ನಾನು ಒತ್ತಡವನ್ನೂ ಹಾಕಿಲ್ಲ. ಆ ಸಂಸ್ಥೆಗೆ ಮಂಜೂರಾಗಿದ್ದ ಟೆಂಡರ್‌ ಸಂಬಂಧ ಕಾಮಗಾರಿಯ ಕಾರ್ಯಾದೇಶ ನೀಡುವಂತೆ ಹೇಳಿದ್ದು ಹೌದು. ಆ ಕಂಪನಿ ಕಪ್ಪುಪಟ್ಟಿಗೆ ಸೇರಿಲ್ಲ. ಒಂದು ವೇಳೆ ಸೇರಿದ್ದರೆ, ಆ ಬಗ್ಗೆ ಆಯುಕ್ತರು ನನಗೆ ಮಾಹಿತಿ ನೀಡಬೇಕಾಗಿತ್ತು’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಆಯುಕ್ತರ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಅಧ್ಯಕ್ಷರು, ‘ಆಯುಕ್ತರು ನಡೆಸಿರುವ ₹ 100 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರಗಳ ದಾಖಲೆ ನನ್ನ ಬಳಿ ಇದೆ. ಸಮಯ ಬಂದರೆ, ಬಿಡುಗಡೆ ಮಾಡುತ್ತೇನೆ. ಅದಕ್ಕೂ ಮುನ್ನ ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದರು.

ಪ್ರತಿಕ್ರಿಯಿಸಲು ಬಯಸುವುದಿಲ್ಲ: ರಾಕೇಶ್‌ ಸಿಂಗ್‌

‘ಬಿಡಿಎ ಅಧ್ಯಕ್ಷರು ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ’ ಎಂದು ಆಯುಕ್ತ ರಾಕೇಶ್‌ ಸಿಂಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನನ್ನ ಕಾರ್ಯವೈಖರಿ ಹೇಗೆ ಎಂಬುದು ಜನರಿಗೆ ಗೊತ್ತಿದೆ. ಅಧ್ಯಕ್ಷರು ನನ್ನ ತಂದೆಯ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ನನಗೆ ನಿಜಕ್ಕೂ ಈ ಬಗ್ಗೆ ಗೊತ್ತಿಲ್ಲ. ಅವರಿಗೆ ಗೊತ್ತಿದ್ದರೆ ಅವರೇ ಸ್ಪಷ್ಟಪಡಿಸಲಿ’ ಎಂದರು.

‘ಒಂದು ವೇಳೆ ನಾನು ಕೆಲಸ ಮಾಡಿಕೊಡದೇ ಇರುತ್ತಿದ್ದರೆ, ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗೆ ದೂರು ನೀಡಬಹುದಿತ್ತು. ಗುತ್ತಿಗೆದಾರರು ಮತ್ತು ರಾಜಕಾರಣಿಗಳ ನಡುವೆ ಸಂಬಂಧ ಇರುತ್ತದೋ ಇಲ್ಲವೋ ಎಂಬುದು ಜನರಿಗೆ ಗೊತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT