ಶನಿವಾರ, ಮೇ 15, 2021
23 °C
ತೀವ್ರ ಉಸಿರಾಟ ಸಮಸ್ಯೆ ಇರುವ ರೋಗಿಗಳಿಗೆ ತುರ್ತಾಗಿ ಸಿಗುತ್ತಿಲ್ಲ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ ಹಾಸಿಗೆ

ನೀಗದ ಹಾಸಿಗೆ ಬವಣೆ– ನಿಲ್ಲದ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ತುರ್ತು ಚಿಕಿತ್ಸೆಯ ಅಗತ್ಯ ಇರುವ ರೋಗಿಗಳು ಆಮ್ಲಜನಕ ಪೂರಣ ವ್ಯವಸ್ಥೆ ಇರುವ ಹಾಸಿಗೆಗಳನ್ನು ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ.

ರೋಗ ಲಕ್ಷಣ ಇಲ್ಲದ ಕೋವಿಡ್‌ ಸೋಂಕಿತರು ಮನೆಯಲ್ಲೇ ಚಿಕಿತ್ಸೆಗೆ ಒಳಗಾಗುವಂತೆ ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಮನೆಯಲ್ಲೇ ಆರೈಕೆಗೆ ಒಳಗಾಗುತ್ತಿರುವ ಅನೇಕರಲ್ಲಿ ಉಸಿರಾಟ ಸಮಸ್ಯೆ ಹಾಗೂ ರಕ್ತದಲ್ಲಿ ಆಮ್ಲಜನಕದ ಪ್ರಮಾಣದ ತೀವ್ರ ಕುಸಿತ ಕಾಣುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ರೋಗಿಗಳ ಬಂಧುಗಳು ಬಿಬಿಎಂಪಿ ಗೊತ್ತುಪಡಿಸಿರುವ ಸಹಾಯವಾಣಿ 1912ಕ್ಕೆ ಕರೆ ಮಾಡುತ್ತಿದ್ದಾರೆ. ಈ ಸಹಾಯವಾಣಿಗೆ ಕರೆ ಮಾಡಿದರೂ ತಕ್ಷಣ ಹಾಸಿಗೆ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಪಡಿಪಾಟಲು ಅನುಭವಿಸುತ್ತಿದ್ದಾರೆ. ಸಕಾಲದಲ್ಲಿ ಹಾಸಿಗೆ ಸೌಕರ್ಯ ಸಿಗದೆಯೇ ಸೋಂಕಿತರು ಕೊನೆಯುಸಿರೆಳೆಯುತ್ತಿದ್ದಾರೆ.

ಬಿಬಿಎಂಪಿ ಹಾಸಿಗೆ ಹಂಚಿಕೆಗೆ ರೂಪಿಸಿರುವ ಕೇಂದ್ರೀಕೃತ ಪೋರ್ಟಲ್‌ನ ಅಂಕಿ ಅಂಶಗಳನ್ನು ಭಾನುವಾರ ರಾತ್ರಿ 9.45ರ ವೇಳೆಗೆ ‘ಪ್ರಜಾವಾಣಿ’ ಪರಿಶೀಲಿಸಿತು. ಆಮ್ಲಜನಕ ಪೂರೈಕೆ ಇರುವ 411 ಹಾಸಿಗೆಗಳಷ್ಟೇ ಖಾಲಿ ಇದ್ದವು. ಇವುಗಳಲ್ಲಿ 394 ಎಚ್‌ಡಿ ಘಟಕಗಳದ್ದು. ಐಸಿಯುಗಳಲ್ಲಿ 11 ಹಾಗೂ ವೆಂಟಿಲೇಟರ್‌ ಸೌಕರ್ಯ ಇರುವ ಐಸಿಯುಗಳಲ್ಲಿ 6 ಹಾಸಿಗೆಗಳು ಮಾತ್ರ ಖಾಲಿ ಇದ್ದವು.

ಕೆಲವು ಪ್ರಕರಣಗಳಲ್ಲಿ ಜನ ಬಿಬಿಎಂಪಿ ಸಹಾಯವಾಣಿಯ ಮೊರೆ ಹೋಗದೆ ನೇರವಾಗಿ ಆಸ್ಪತ್ರೆಗಳಿಗೆ ತೆರಳಿ ದಾಖಲಾಗಲು ಪ್ರಯತ್ನಿಸುತ್ತಿದ್ದಾರೆ. ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಅಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಬೇಕು. ಬಿಬಿಎಂಪಿ ಸೂಚಿಸುವ ರೋಗಿಗಳಿಗೆ ಆಸ್ಪತ್ರೆ ಸಿಗದಿದ್ದರೆ ಸಮಸ್ಯೆ ‌ಆಗುತ್ತದೆ ಎಂಬ ಕಾರಣಕ್ಕೆ ಕೆಲ ಆಸ್ಪತ್ರೆಗಳು ನೇರವಾಗಿ ಬರುವ ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ಕೋವಿಡ್‌ ರೋಗಿಗಳು ಹಾಸಿಗೆ ಸಿಗದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

‘ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಇಲ್ಲ. ಯಾರೇ ಆದರೂ ಕೋವಿಡ್‌ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಬೇಕಾದರೆ 1912 ಸಹಾಯವಾಣಿಗೆ ಕರೆ ಮಾಡಿ ಹಾಸಿಗೆ ಕಾಯ್ದರಿಸಬೇಕು. ಎಲ್ಲರೂ ಸಹಾಯವಾಣಿ ಮೂಲಕ ಹಾಸಿಗೆ ಕಾಯ್ದಿರಿಸಿದರೆ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ’ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

‘ಬಿಬಿಎಂಪಿ ಸೂಚಿಸಿರುವ ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಏಕೆಂದರೆ ಹಂಚಿಕೆ ಮಾಡಲು ಬಿಬಿಎಂಪಿ ಬಳಿ ಹಾಸಿಗೆಗಳೇ ಇಲ್ಲ’ ಎನ್ನುತ್ತಾರೆ ಪಾಲಿಕೆಯ ಮಾಜಿ ಸದಸ್ಯ ಅಬ್ದುಲ್‌ ವಾಜಿದ್‌.

ನಗರದಲ್ಲಿ ಹತ್ತು ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸೊಂಕಿತರಾಗಿದ್ದಾರೆ. ಕಳೆದ ವರ್ಷ ಸೋಂಕು ಹರಡುವಿಕೆ ತೀವ್ರ ಗತಿ ತಲುಪಿದ ಸಂದರ್ಭಕ್ಕೆ ಹೋಲಿಸಿದರೆ ಇದು ಹತ್ತು ಪಟ್ಟು ಹೆಚ್ಚು.

‘ಸೋಂಕು ಇಷ್ಟೊಂದು ತೀವ್ರಗತಿಯಲ್ಲಿ ಹರಡುತ್ತಿರುವಾಗ ಮುಂದಿನ ಒಂದು ತಿಂಗಳ ಪರಿಸ್ಥಿತಿಯನ್ನು ಮುಂದಾಲೋಚನೆ ಮಾಡಿ ಸೌಕರ್ಯ ಕಲ್ಪಿಸಬೇಕಾಗುತ್ತದೆ. ಆದರೆ, ಬಿಬಿಎಂಪಿ ಈಗ ಸೋಂಕು ದೃಢಪಡುತ್ತಿರುವವರಿಗೇ ಹಾಸಿಗೆ ಹೊಂದಿಸಲು ಹರಸಾಹಸಪಡುತ್ತಿದೆ. ಭವಿಷ್ಯದ ದಿನಗಳನ್ನು ಯೋಚಿಸುವಾಗಲೇ ದಿಗಿಲಾಗುತ್ತದೆ’ ಎಂದು ವಾಜಿದ್‌ ಕಳವಳ ವ್ಯಕ್ತಪಡಿಸಿದರು.

‘ನಗರದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಕೈ ಮೀರುತ್ತಿದೆ. ಇದನ್ನು ಹತೋಟಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ವ್ಯವಸ್ಥಿತ ಯೋಜನೆ ರೂಪಿಸಬೇಕು’ ಎಂದು ಪಾಲಿಕೆಯ ಮಾಜಿ ಸದಸ್ಯ ಎಂ.ಶಿವರಾಜು ಒತ್ತಾಯಿಸಿದರು.

ಪತ್ನಿಯ ಮರಣ ಕಂಡು ತಾನೂ ಪ್ರಾಣ ಬಿಟ್ಟ ಪತಿ

ಪತ್ನಿಯ ಸಾವನ್ನು ಕಂಡು ಪತಿಯೂ ಕೊನೆಯುಸಿರೆಳೆದ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

ಗೃಹಲಕ್ಷ್ಮಿ ಬಡಾವಣೆಯ ನಿವಾಸಿ ಶ್ರೀನಿವಾಸ (59) ಹಾಗೂ ಅವರ ಪತ್ನಿ ವತ್ಸಲಾ (55) ಇಬ್ಬರಿಗೂ ಕೋವಿಡ್‌ ದೃಢಪಟ್ಟಿತ್ತು. ಅವರಿಬ್ಬರೂ ರಾಜಾಜಿನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ವತ್ಸಲಾ ಅವರು ಶನಿವಾರ ಕೊನೆಯುಸಿರೆಳೆದಿದ್ದರು. ಪತ್ನಿಯ ಅಗಲುವಿಕೆಯಿಂದ ತೀವ್ರವಾಗಿ ನೊಂದಿದ್ದ ಶ್ರೀನಿವಾಸ ಅವರು ಭಾನುವಾರ ಮೃತಪಟ್ಟರು.

‘ತಂದೆ ತಾಯಿ ಇಬ್ಬರ ಅಂತ್ಯಕ್ರಿಯೆಯನ್ನು ಮಗನೊಬ್ಬನೇ ನಿಭಾಯಿಸಬೇಕಾಗಿ ಬಂದಿದೆ. ತಾಯಿಯ ಅಂತ್ಯಕ್ರಿಯೆಯನ್ನು ಮಗ ಭಾನುವಾರ ನಡೆಸಿದ್ದಾರೆ. ತಂದೆಯ ಅಂತ್ಯಕ್ರಿಯೆಯನ್ನು ಸೋಮವಾರ ನಡೆಸಬೇಕಾಗಿದೆ. ನಾನು ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಿದೆ’ ಎಂದು ಶಂಕರಮಠ ವಾರ್ಡ್‌ನ ನಿಕಟಪೂರ್ವ ಪಾಲಿಕೆ ಸದಸ್ಯ ಎಂ.ಶಿವರಾಜು ತಿಳಿಸಿದರು.

‘ಶ್ರೀನಿವಾಸ ಅವರ ತಂದೆ ಕೃಷ್ಣ ಷಾ ಶಂಕರಮಠ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದವರು. ಅವರಿಗೆ 85 ವರ್ಷ. ಹಾಸಿಗೆ ಹಿಡಿದಿರುವ ಅವರೊಬ್ಬರನ್ನು ಹೊರತುಪಡಿಸಿ ಅವರ ಮನೆಯಲ್ಲಿ ಐವರಿಗೆ ಕೋವಿಡ್‌ ದೃಢಪಟ್ಟಿದೆ. ಅವರ ಕುಟುಂಬ ದಿಕ್ಕೇ ತೋಚದ ಸ್ಥಿತಿಯನ್ನು ತಲುಪಿದೆ.  ಇಂತಹ ಕುಟುಂಬಗಳ ಬವಣೆಗಳನ್ನು ಸರ್ಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಅವರು ಕೋರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು