ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗೂರು ರಸ್ತೆಗೆ ಟಿಡಿಆರ್ ಕಂಟಕ: ರಸ್ತೆ ವಿಸ್ತರಣೆ ಯೋಜನೆ ಮತ್ತೆ ನನೆಗುದಿಗೆ

ಪರಿಹಾರ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ
Last Updated 6 ಅಕ್ಟೋಬರ್ 2020, 20:32 IST
ಅಕ್ಷರ ಗಾತ್ರ

ಬೆಂಗಳೂರು: ಬೇಗೂರು ಮುಖ್ಯ ರಸ್ತೆ ಅಭಿವೃದ್ಧಿ ಯೋಜನೆಗೆ ಟಿಡಿಆರ್‌ (ಅಭಿವೃದ್ಧಿ ಹಕ್ಕುಗಳ ಹಸ್ತಾಂತರ ಪತ್ರ) ಪ್ರಸ್ತಾಪವೇ ಕಂಟಕವಾಗಿ ಕಾಡಿದ್ದು, ಯೋಜನೆ ಮತ್ತೊಮ್ಮೆ ನನೆಗುದಿಗೆ ಬಿದ್ದಿದೆ.

ಬೊಮ್ಮನಹಳ್ಳಿ ವಿವೇಕಾನಂದ ವೃತ್ತದಿಂದ ಬೇಗೂರು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಹೊಂಗಸಂದ್ರ, ಕೋಡಿಚಿಕ್ಕನಹಳ್ಳಿ, ದೇವರ ಚಿಕ್ಕನಹಳ್ಳಿ, ಮೈಕೊ ಬಡಾವಣೆ, ವಿಶ್ವಪ್ರಿಯ ಬಡಾವಣೆ, ಜಿಗಣಿ, ಆನೇಕಲ್, ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿಗೂ ಸಂಪರ್ಕ ಕಲ್ಪಿಸುತ್ತದೆ.

3.5 ಕಿ.ಮೀ. ಇರುವ ಈ ರಸ್ತೆ ಯಲ್ಲಿಸಂಚಾರ ದಟ್ಟಣೆಯ ಅವಧಿಯಲ್ಲಿ ಸಾಗಲು ಅರ್ಧ– ಮುಕ್ಕಾಲು ಗಂಟೆಯೇ ಬೇಕಾಗುತ್ತದೆ.ದ್ವಿಮುಖ ಸಂಚಾರದ ಈ ರಸ್ತೆಯಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಕೊಂಡರೆ ಗಂಟೆಗಟ್ಟಲೆ ನರಳಬೇಕಾದ ಸ್ಥಿತಿ ಇದೆ. ಈ ಕಾರಣಕ್ಕಾಗಿಯೇ ರಸ್ತೆ ವಿಸ್ತರಣೆಯಾಗಬೇಕು ಎಂಬ ಬೇಡಿಕೆ 20 ವರ್ಷಗಳಿಂದ ಇದೆ. ಆಗಾಗ ಈ ಪ್ರಸ್ತಾಪ ಮುನ್ನೆಲೆಗೆ ಬಂದು ಇನ್ನೇನು ಕಾಮಗಾರಿ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಒಂದಿಲ್ಲೊಂದು ಕಂಟಕಗಳು ಎದುರಾಗುತ್ತಲೇ ಇವೆ.

ರಸ್ತೆ ವಿಸ್ತರಣೆಗೆ ಯೋಜನೆ ರೂಪಿಸಿ ಅನುಮೋದನೆ ನೀಡಿದ ಬಿಬಿಎಂಪಿ, ಅಗತ್ಯ ಇರುವ ಜಾಗ ಸ್ವಾಧೀನ ಪಡಿಸಿಕೊಂಡು ಮಾಲೀಕರಿಗೆ ಟಿಡಿಆರ್ ನೀಡಲು ಮುಂದಾಗಿತ್ತು. ಆದರೆ, ಟಿಡಿಆರ್ ಪಡೆಯಲು ಜಾಗದ ಮಾಲೀಕ ರಲ್ಲಿ ಕೆಲವರು ಒಪ್ಪುತ್ತಿಲ್ಲ. ಹೀಗಾಗಿ ರಸ್ತೆ ಅಭಿವೃದ್ಧಿ ಯೋಜನೆ ನನೆಗುದಿಗೆ ಬಿದ್ದಿದೆ. ಸದ್ಯಕ್ಕೆ ವಾಹನಗಳ ಸಂಚಾರಕ್ಕೆ ಅಲ್ಲಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ.

‘ಸ್ವಾಧೀನ ಪಡಿಸಿಕೊಳ್ಳಬೇಕಿದ್ದ ಭೂಮಿಯ ಪೈಕಿ ಬಹುತೇಕ ಜಾಗ ರಾಜ ಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೇರಿದ್ದಾಗಿದೆ. ಟಿಡಿಆರ್ ಪಡೆಯಲು ಹಲವರು ಒಪ್ಪಿ ದರೂ ಅದಕ್ಕೆ ಕೆಲವರು ಅಡ್ಡಗಾಲು ಹಾಕಿ ಯೋಜನೆ ಹಾಳಾಗುವಂತೆ ಮಾಡಿದ್ದಾರೆ’ ಎಂದು ಸ್ಥಳೀಯರು ದೂರುತ್ತಾರೆ.

ಸದ್ಯ 40 ಅಡಿ ರಸ್ತೆ ಇದ್ದು, ಅದನ್ನು 80 ಅಡಿಗೆ ವಿಸ್ತರಿಸಬೇಕು ಎಂಬ ಪ್ರಸ್ತಾಪ ಇದೆ. ರಸ್ತೆ ವಿಸ್ತರಣೆ ಆಗಲಿದೆ ಎಂಬ ಕಾರಣಕ್ಕೆ ಹಲವರು ಹಿಂದಕ್ಕೆ ಕಟ್ಟಡಗಳನ್ನು ಕಟ್ಟಿಕೊಂಡು ಮುಂದೆ ಜಾಗ ಬಿಟ್ಟಿದ್ದಾರೆ. ಹೊಸ ಕಟ್ಟಡ ಕಟ್ಟುವ ಯೋಚನೆ ಇರುವ ಹಲವರು ರಸ್ತೆ ವಿಸ್ತರಣೆ ಯೋಜನೆಯನ್ನೇ ಕಾಯು ತ್ತಿದ್ದಾರೆ.

‘ಹಲವು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲೇ ಜೀವನ ನಡೆಸುತ್ತಿದ್ದೇವೆ. ರಸ್ತೆ ವಿಸ್ತರಣೆ ಆಗುವುದೋ ಇಲ್ಲವೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿ
ಸಬೇಕು’ ಎಂದು ಟೈಲರ್ ಅಂಗಡಿ ನಡೆಸುವ ಸುಶೀಲಮ್ಮ ಹೇಳಿದರು.

‘ರಸ್ತೆ ವಿಸ್ತರಣೆ ಆಗಲೇಬೇಕು’

‘ವಿವೇಕಾನಂದ ವೃತ್ತದಿಂದ ಬೇಗೂರು ಕೆರೆ ತನಕವಾದರೂ ರಸ್ತೆ ವಿಸ್ತರಣೆ ಆಗಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೊಂದರೆ ಆಗಲಿದೆ’ ಎಂದು ಬೇಗೂರು ವಾರ್ಡ್‌ನ ಈ ಹಿಂದಿನ ಸದಸ್ಯ ಎಂ. ಆಂಜನಪ್ಪ ಹೇಳಿದರು.

‘ಮೊದಲು ₹40 ಕೋಟಿ ಯೋಜನೆ ಪ್ರಸ್ತಾಪಿಸಲಾಗಿತ್ತು. ಕೆಲ ವರ್ಷಗಳ ಬಳಿಕ ₹60 ಕೋಟಿ ಯೋಜನೆಗೆ ಬಿಬಿಎಂಪಿ ಅನುಮೋದನೆ ನೀಡಿದೆ. ಆದರೆ, ಭೂಸ್ವಾಧೀನವೇ ದೊಡ್ಡ ತಲೆನೋವಾಗಿದೆ. ಟಿಡಿಆರ್ ಪಡೆಯಲು ಕೆಲವರು ಒಪ್ಪುತ್ತಿಲ್ಲ. ಮಾಲೀಕರು ಕೇಳುವ ದರದಲ್ಲಿ ಪರಿಹಾರ ನೀಡಲು ಸರ್ಕಾರ ಸಿದ್ಧವಿಲ್ಲ. ಹೀಗಾಗಿ ಸಮಸ್ಯೆ ದಿನೇ ದಿನೇ ಉಲ್ಬಣಿಸುತ್ತಿದೆ. ಸರ್ಕಾರ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.

₹500 ಕೋಟಿ ಬಿಡುಗಡೆಗೆ ಒತ್ತಾಯ

‘ಜಾಗದ ಮಾಲೀಕರು ಟಿಡಿಆರ್ ಪಡೆಯಲು ಒಪ್ಪದ ಕಾರಣ ಪರಿಹಾರ ನೀಡಲು ₹500 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡಿದ್ದೇನೆ’ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ ತಿಳಿಸಿದರು.

‘ಲಾಕ್‌ಡೌನ್ ಬಳಿಕ ಆರ್ಥಿಕ ಸ್ಥಿತಿ ಸುಧಾರಿಸದ ಕಾರಣ ಹಣ ಬಿಡುಗಡೆಗೆ ಕಷ್ಟವಾಗುತ್ತಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದರು. ಆದರೂ, ಈ ರಸ್ತೆ ವಿಸ್ತರಣೆ ಆಗಲೇಬೇಕಿರುವ ಕಾರಣ ಒತ್ತಡ ಹೇರುತ್ತಿದ್ದೇನೆ’ ಎಂದು ಹೇಳಿದರು.

ಅಂಕಿ–ಅಂಶ

3.6 ಕಿಲೋ ಮೀಟರ್ – ವಿಸ್ತರಣೆಯಾಗಬೇಕಿರುವ ರಸ್ತೆಯ ಉದ್ದ

80 ಅಡಿ – ವಿಸ್ತರಣೆ ಮಾಡಲು ಉದ್ದೇಶಿಸಿರುವ ರಸ್ತೆಯ ಅಗಲ

₹60 ಕೋಟಿ – ಬಿಬಿಎಂಪಿ ಅನುಮೋದನೆ ನೀಡಿರುವ ಮೊತ್ತ

750 – ಜಾಗ ಬಿಟ್ಟುಕೊಡಬೇಕಿರುವ ಆಸ್ತಿಗಳ ಮಾಲೀಕರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT