ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ರಸ್ತೆಯಲ್ಲಿ ಆಂಬುಲೆನ್ಸ್‌ ಬಂದರೆ ದೇವರೇ ಗತಿ !

ಬೆಳ್ಳಂದೂರು ಸುತ್ತ–ಮುತ್ತಲಿನ ಹದಗೆಟ್ಟ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಹರಸಾಹಸ
Last Updated 25 ಜುಲೈ 2020, 16:07 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ರಸ್ತೆಯ ಸುತ್ತ–ಮುತ್ತ ರಸ್ತೆಗಳು ತೀರಾ ಹದಗೆಟ್ಟಿವೆ. ಭಾರಿ ವಾಹನಗಳು ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಆಂಬುಲೆನ್ಸ್‌ ಸಂಚಾರಕ್ಕೂ ತೊಂದರೆಯಾಗಿದ್ದು, ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

‘ಬೆಳ್ಳಂದೂರಿನ ಓನರ್ಸ್‌ ಕೋರ್ಟ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರನ್ನು ಕರೆದೊಯ್ಯಲು ಬಂದ ಆಂಬುಲೆನ್ಸ್‌ ಚಲಾಯಿಸಲು ಚಾಲಕ ಹರಸಾಹಸ ಪಡಬೇಕಾಯಿತು. ಬಡಾವಣೆಯ ನಿವಾಸಿಗಳ ಕಲ್ಲುಗಳನ್ನು ಹಾಕಿ ಆಂಬುಲೆನ್ಸ್‌ ಹೋಗುವುದಕ್ಕೆ ನೆರವಾದರು. ನಗರಲದಲ್ಲಿ, ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಇಂತಹ ರಸ್ತೆಗಳಲ್ಲಿ ಆಂಬುಲೆನ್ಸ್ ಹೇಗೆ ಸಾಗಬೇಕು’ ಎಂದು ಬೆಳ್ಳಂದೂರಿನ ವಿಷ್ಣುಪ್ರಸಾದ್‌ ಪ್ರಶ್ನಿಸುತ್ತಾರೆ.

ಬೆಳ್ಳಂದೂರು, ಕಸವನಹಳ್ಳಿ, ಸರ್ಜಾಪುರ ಮುಖ್ಯರಸ್ತೆಗಳನ್ನು ಸ್ವಲ್ಪ ಮಟ್ಟಿಗೆ ದುರಸ್ತಿ ಮಾಡಿದ್ದಾರೆ. ಆದರೆ,ಹರಳೂರು ಶುಭ್‌ ಎನ್‌ಕ್ಲೇವ್, ಕಸವನಹಳ್ಳಿಯಲ್ಲಿನ ತುಳಸಿ ಲೇಔಟ್, ಓನರ್ಸ್‌ ಕೋರ್ಟ್‌, ಕೆಪಿಸಿ ಲೇಔಟ್, ಸಿಎಸ್‌ಬಿ ಲೇಔಟ್, ಮೊದಲಿಯಾರ್‌ ಲೇಔಟ್ ಮತ್ತಿತರ ಬಡಾವಣೆಗಳಲ್ಲಿನ ಒಳ ರಸ್ತೆಗಳು ತೀರಾ ಹದಗೆಟ್ಟಿವೆ. ಆರು ತಿಂಗಳಿನಿಂದ ಇದೇ ಸ್ಥಿತಿ ಇದೆ ಎಂದು ಸ್ಥಳೀಯರು ದೂರುತ್ತಾರೆ.

‘ಕಸ ಒಯ್ಯುವುದಕ್ಕೂ ಯಾರೂ ಬರುತ್ತಿಲ್ಲ. ರಸ್ತೆಗಳ ಅವ್ಯವಸ್ಥೆ ಬಗ್ಗೆ ದೂರು ನೀಡಿದರೆ, ಅಧಿಕಾರಿಗಳೆಲ್ಲರೂ ಕೊರೊನಾ ನಿಯಂತ್ರಣದ ಕರ್ತವ್ಯದಲ್ಲಿದ್ದೇವೆ ಎನ್ನುತ್ತಾರೆ. ಜೀವಗಳಿಗಿಂತ ರಸ್ತೆ ದುರಸ್ತಿಯೇ ಮುಖ್ಯವೇ ಎಂದು ಪ್ರಶ್ನಿಸುತ್ತಾರೆ. ಆರು ತಿಂಗಳ ಹಿಂದೆ ಕೊರೊನಾ ಬಿಕ್ಕಟ್ಟು ಇತ್ತೇ’ ಎಂದು ಕಸವನಹಳ್ಳಿಯ ರಮೇಶ್‌ ಪ್ರಶ್ನಿಸುತ್ತಾರೆ.

ಜಲಮಂಡಳಿ ಕಾಮಗಾರಿ ಕಾರಣ:

‘ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಮಂಡಳಿಯು ಒಳಚರಂಡಿ ಮತ್ತು ನೀರು ಪೂರೈಕೆ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಇದಕ್ಕಾಗಿ ರಸ್ತೆ ಅಗೆಯಲಾಗಿದ್ದರಿಂದ ಸಮಸ್ಯೆಯಾಗಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಪರಮೇಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಭಾಗದಲ್ಲಿ ನಿತ್ಯ ಸರಾಸರಿ 25 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲಲ್ಲಿ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಲಾಗಿದೆ. ಕೆಲವೆಡೆ ಸೀಲ್‌ಡೌನ್‌ ಮಾಡಲಾಗಿದೆ. ಬಿಬಿಎಂಪಿಯ ಸಿಬ್ಬಂದಿಯೇ ಈ ಕಾರ್ಯ ನಿರ್ವಹಿಸಬೇಕು. ಹಾಗಾಗಿ ರಸ್ತೆ ದುರಸ್ತಿ ಸ್ವಲ್ಪ ವಿಳಂಬವಾಗಿದೆ’ ಎಂದು ಅವರು ಹೇಳಿದರು.

‘ಜಲಮಂಡಳಿಯು 480 ಕಿ.ಮೀ.ಗಳಷ್ಟು ಉದ್ದದ ರಸ್ತೆಗಳನ್ನು ಅಗೆದು, ₹5 ಕೋಟಿ ಮಾತ್ರ ಕೊಟ್ಟಿದೆ. 110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಯಡಿ ಈ ಕ್ಷೇತ್ರದಲ್ಲಿ 30 ಹಳ್ಳಿಗಳು ಬರುತ್ತವೆ. ಅಲ್ಲೆಲ್ಲ ರಸ್ತೆಗಳನ್ನು ಅಗೆಯಲಾಗಿದೆ. ಬಿಬಿಎಂಪಿಯಿಂದ ₹133 ಕೋಟಿ ಮಂಜೂರಾಗಿದ್ದು, ರಸ್ತೆ ದುರಸ್ತಿ ಕಾಮಗಾರಿಯನ್ನು ಶೀಘ್ರದಲ್ಲಿಯೇ ಚುರುಕುಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT