ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಂತಿಕೆಯಿಂದ ಕೊರಗ ಭಾಷೆ ಅಳಿವು: ಶ್ರೀಧರ ನಾಡ

Last Updated 18 ಡಿಸೆಂಬರ್ 2021, 20:54 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮುದಾಯದಲ್ಲಿನ ಮಡಿವಂತಿಕೆಯ ಧೋರಣೆಯೇ ಕೊರಗ ಭಾಷೆ ನಶಿಸಲು ಮೂಲ ಕಾರಣವಾಗಿದೆ’ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸದಸ್ಯ ಶ್ರೀಧರ ನಾಡ ವಿಷಾದಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಕೊರಗ’ ಭಾಷೆ ಕುರಿತು ಶನಿವಾರ ನಡೆದ ಗೋಷ್ಠಿಯಲ್ಲಿ ಮಾತನಾಡಿದರು.

ಜಾತಿಯ ಶ್ರೇಣೀಕರಣದಲ್ಲಿಯೂ ಕೊರಗ ಸಮುದಾಯ ತಳಹಂತದಲ್ಲಿದೆ. ಸಮಾಜದಲ್ಲಿ ಈ ಸಮುದಾಯವನ್ನು ಇಂದಿಗೂ ಅಸ್ಪೃಶ್ಯತೆಯಿಂದ ಕಾಣಲಾಗುತ್ತಿದೆ. ಮತ್ತೊಂದೆಡೆ ಕೊರಗರು ತಮ್ಮ ಭಾಷೆ ಬಗ್ಗೆ ನಿಗೂಢತೆ ಕಾಯ್ದುಕೊಂಡಿದ್ದಾರೆ. ಇತರೇ ಸಮುದಾಯದ ಜನರೊಟ್ಟಿಗಿರುವಾಗ ಕೊರಗ ಭಾಷೆ ಮಾತನಾಡಿದರೆ ಕೀಳುಮಟ್ಟದಲ್ಲಿ ನೋಡುವ ಪ್ರವೃತ್ತಿ ಇದೆ. ಇದರಿಂದ ಭಾಷೆಯ ಜೊತೆಗೆ ಆ ಜನರ ಬದುಕು ಕೂಡ ಅವನತಿಯತ್ತ ಸಾಗುತ್ತಿದೆ ಎಂದು ವಿಷಾದಿಸಿದರು.

ಪ್ರಾಂತೀಯವಾಗಿ ಕೊರಗ ಜನಾಂಗದಲ್ಲಿ ನಾಲ್ಕು ಉಪ ಪಂಗಡಗಳಿವೆ. ನಾಲ್ಕು ಉಪ ಭಾಷೆಗಳಿವೆ. ಈ ಪಂಗಡಗಳ ನಡುವೆ ಪ್ರಾದೇಶಿಕ ಭಿನ್ನತೆಯೂ ಇದೆ. ಈಗಾಗಲೇ, ಕುಂಟು ಕೊರಗ ಪಂಗಡದ ಭಾಷೆ ನಾಶವಾಗಿದೆ ಎಂದು ಹೇಳಿದರು.

ಕೊರಗ ಜನಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಇದು ಅವರ ಭಾಷೆಯ ಅಳಿವಿಗೆ ನಾಂದಿ ಹಾಡಿದೆ ಎಂದರು.

ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ವಿನಾಶದ ಅಂಚಿಗೆ ತಲುಪಿರುವ ಭಾಷೆಗಳ ಉಳಿವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿವೆ. ಕೊರಗ ಭಾಷೆಯೂ ಇದರಿಂದ ಹೊರತಲ್ಲ’ ಎಂದು ಹೇಳಿದರು.

1961ರಲ್ಲಿ ರಾಜ್ಯದಲ್ಲಿ ಕೊರಗರ ಜನಸಂಖ್ಯೆ 61 ಸಾವಿರ ಇತ್ತು. 2011ರ ಜನಗಣತಿ ಪ್ರಕಾರ 11 ಸಾವಿರಕ್ಕೆ ಇಳಿದಿದೆ. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಇದರ ಅರ್ಧದಷ್ಟು ಕಡಿಮೆಯಾಗಿದೆ. ಭಾಷೆ ಮಾತನಾಡುವವರು ಕಡಿಮೆಯಾದಂತೆ ಆ ಭಾಷೆಯೂ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT