ಬೆಂಗಳೂರು: ಬ್ಯಾಡರಹಳ್ಳಿ ಬಳಿಯ ತಿಗಳರಪಾಳ್ಯದ ಮನೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದು, ಅದೇ ಮನೆಯಲ್ಲೇ ಒಂಭತ್ತು ತಿಂಗಳ ಕೂಸಿನ ಮೃತದೇಹ ಸಹ ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
‘ಭಾರತಿ (51), ಅವರ ಮಕ್ಕಳಾದ ಸಿಂಚನಾ (34), ಸಿಂಧೂರಾಣಿ (33) ಹಾಗೂ ಮಧುಸಾಗರ್ (25) ಆತ್ಮಹತ್ಯೆ ಮಾಡಿಕೊಂಡವರು. ಸಿಂಧೂರಾಣಿ ಅವರ ಕೂಸು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಐದೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.
‘ಐವರ ಮೃತದೇಹ ಸಿಕ್ಕ ಮನೆಯಲ್ಲೇ ಸಿಂಚನಾ ಅವರ ಮಗಳಾದ ಎರಡೂವರೆ ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ. ಪ್ರಜ್ಞೆ ತಪ್ಪಿ ಉಸಿರಾಡುತ್ತಿದ್ದ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ’ ಎಂದೂ ತಿಳಿಸಿದರು.
‘ಮಾಸಪತ್ರಿಕೆಯೊಂದನ್ನು ನಡೆಸುತ್ತಿದ್ದ ಮಂಡ್ಯದ ಹಲ್ಲೇಗೆರೆ ಶಂಕರ್ ಅವರ ಪತ್ನಿ ಭಾರತಿ, ಮಕ್ಕಳು ಹಾಗೂ ಮೊಮ್ಮಕ್ಕಳ ಜೊತೆ ತಿಗಳರಪಾಳ್ಯದಲ್ಲಿ ವಾಸವಿದ್ದರು. ಬೇರೆ ಊರಿನಲ್ಲಿದ್ದ ಶಂಕರ್, ನಾಲ್ಕು ದಿನಗಳಿಂದ ಪತ್ನಿಗೆ ನಿರಂತರವಾಗಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಗಾಬರಿಗೊಂಡ ಅವರು ಶುಕ್ರವಾರ ಸಂಜೆ ಮನೆಗೆ ಬಂದು ಕಿಟಕಿ ತೆರೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಕಂಡಿದ್ದವು’ ಎಂದೂ ಹೇಳಿದರು.
‘ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳ ವಿಡಿಯೊ ಚಿತ್ರೀಕರಿಸಿದ್ದ ಶಂಕರ್, ಅದನ್ನು ಪೊಲೀಸರಿಗೆ ಕಳುಹಿಸಿದ್ದರು. ಸ್ಥಳಕ್ಕೆ ಹೋದ ಪೊಲೀಸರು, ಬಾಗಿಲು ಮುರಿದು ಮೃತದೇಹಗಳನ್ನು ಸಾಗಿಸಿದ್ದಾರೆ’ ಎಂದೂ ತಿಳಿಸಿದರು.
ಹಾಸಿಗೆ ಮೇಲೆ ಕೂಸು: ‘ಭಾರತಿ, ಸಿಂಚನಾ, ಸಿಂಧೂರಾಣಿ ಹಾಗೂ ಮಧುಸಾಗರ್ ಅವರು ಪ್ರತ್ಯೇಕ ಕೊಠಡಿಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಸಿನ ಮೃತದೇಹ ಮನೆಯ ಹಾಸಿಗೆ ಮೇಲೆ ಪತ್ತೆಯಾಗಿದೆ’ ಎಂದೂ ಡಿಸಿಪಿ ಮಾಹಿತಿ ನೀಡಿದರು.
‘ಹಸಿವಿನಿಂದ ಬಳಲಿ ಕೂಸು ಮೃತಪಟ್ಟಿರುವ ಅನುಮಾನವಿದೆ. ಇದರ ನಡುವೆಯೇ ಬದುಕಿರುವ ಬಾಲಕಿ ಸದ್ಯ ಆಸ್ಪತ್ರೆಯಲ್ಲಿದ್ದು, ಆಕೆಯ ಹೇಳಿಕೆ ಪಡೆದ ನಂತರವೇ ಮತ್ತಷ್ಟು ಮಾಹಿತಿ ಸಿಗಲಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದೂ ತಿಳಿಯಲಿದೆ’ ಎಂದೂ ವಿವರಿಸಿದರು.
ವಿಶೇಷ ತಂಡ ರಚನೆ: ‘ನಾಲ್ಕು ದಿನಗಳ ಹಿಂದೆಯೇ ಎಲ್ಲರೂ ಮೃತಪಟ್ಟಿರುವುದು ಗೊತ್ತಾಗುತ್ತಿದೆ. ಈ ಬಗ್ಗೆ ಅಕ್ಕ–ಪಕ್ಕದ ಯಾರಿಗೂ ಅನುಮಾನ ಬಂದಿಲ್ಲ. ಶಂಕರ್ ಮನೆಗೆ ಬಂದಿದ್ದಾಗಲೇ ಎಲ್ಲರಿಗೂ ವಿಷಯ ಗೊತ್ತಾಗಿದೆ’ ಎಂದೂ ಡಿಸಿಪಿ ಹೇಳಿದರು.
‘ಸಿಂಧೂರಾಣಿ ಹಾಗೂ ಸಿಂಚನಾ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ಹೆರಿಗೆಗಾಗಿ ಸಿಂಧೂರಾಣಿ ಇತ್ತೀಚೆಗೆ ತವರು ಮನೆಗೆ ಬಂದು ಉಳಿದುಕೊಂಡಿದ್ದರು. ಸಿಂಚನಾ ಸಹ ಬಂದಿದ್ದರು. ಇವರೆಲ್ಲರ ಆತ್ಮಹತ್ಯೆಗೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಮನೆಯಲ್ಲೂ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದೂ ಡಿಸಿಪಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.