ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಸೂಚನೆ ಮರುಪರಿಶೀಲನೆ: ಬಿಬಿಎಂಪಿ

ನಾಯಿ ಸಾಕಲು ಪರವಾನಗಿ ಪ್ರಶ್ನಿಸಿದ ಅರ್ಜಿ
Last Updated 20 ಜೂನ್ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಯಿ ಸಾಕಲು ಪರವಾನಗಿ ಹೊಂದಬೇಕು ಎಂಬ ವಿಚಾರವನ್ನು ಭಾವನಾತ್ಮಕ ಹಾಗೂ ಕಾನೂನು ತಳಹದಿಯಲ್ಲಿ ನೋಡಬೇಕಿದ್ದು, ಈ ಕುರಿತ ಮಾರ್ಗಸೂಚಿಗಳ ಮರುಪರಿಶೀಲನೆ ಸಾಧ್ಯವೇ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಹೈಕೋರ್ಟ್‌ ಪ್ರಶ್ನಿಸಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿನ ನಿವಾಸಿಗಳು ನಾಯಿ ಸಾಕಲು ಪರವಾನಗಿ ಹೊಂದಿರಬೇಕು’ ಎಂಬ ಸರ್ಕಾರದ ಆದೇಶ ಪ್ರಶ್ನಿಸಿ ನಗರದ ಶಿಕ್ಷಕಿ ಇಂದಿರಾ ಗೋಪಾಲಕೃಷ್ಣ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ಈ ವಿಷಯದಲ್ಲಿ ಮಾರ್ಗಸೂಚಿಗಳನ್ನು ರಚಿಸಲು ಯಾವ ಕಾನೂನಿನ ಅಡಿಯಲ್ಲಿ ನಿಮಗೆ ಅಧಿಕಾರವಿದೆ ಎಂಬುದನ್ನು ತೋರಿಸಿ’ ಎಂದು ಬಿಬಿಎಂಪಿ ಪರ ವಕೀಲರನ್ನು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘ಮಾರ್ಗಸೂಚಿ ಆಕ್ಷೇಪಿಸಿ ನಗರದ ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಈಗಾಗಲೇ ಹಲವು ಮನವಿಗಳು ಬಂದಿವೆ. ಹೀಗಾಗಿ ಅಧಿಸೂಚನೆ ಮರುಪರಿಶೀಲಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ಕೋರಿಕೆ ಮಾನ್ಯ ಮಾಡಿದ ನ್ಯಾಯಪೀಠ, ಪ್ರಕರಣವನ್ನು ಗುರುವಾರಕ್ಕೆ (ಜೂ‌ನ್‌ 21) ಮುಂದೂಡಿತು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವಾಸಿಗಳು ನಾಯಿ ಸಾಕಲು ಪರವಾನಗಿ ಹೊಂದಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯು 2018ರಲ್ಲಿ ಅಧಿಸೂಚನೆ ಪ್ರಕಟಿಸಿ ಇದಕ್ಕಾಗಿ ಮಾರ್ಗಸೂಚಿ ಹೊರಡಿಸಿದೆ.

ಅರ್ಜಿದಾರರ ಆಕ್ಷೇಪ ಏನು?: ‘ಅಧಿಸೂಚನೆಯು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960ರ ಕಲಂ 3ರ ಉಲ್ಲಂಘನೆ. ಇದೊಂದು ವಿವೇಚನಾ ರಹಿತವಾಗಿ ಹೊರಡಿಸಿರುವ ಕಾನೂನು ಬಾಹಿರ ಕ್ರಮ. ಅಧಿಸೂಚನೆ ಹೊರಡಿಸುವ ಮುನ್ನ ವೃತ್ತಪತ್ರಿಕೆಗಳಲ್ಲಿ ಪ್ರಕಟಣೆ ನೀಡಿಲ್ಲ. ಸಾರ್ವಜನಿಕರಿಂದ ಆಕ್ಷೇಪ ಸಲ್ಲಿಕೆಯನ್ನೂ ಕೇಳಿಲ್ಲ. ಸಾಕು ನಾಯಿ ಮತ್ತು ಬೀದಿ ನಾಯಿಗಳಿಗೆ ರಕ್ಷಣೆ ನೀಡುವವರಿಗೆ ಇರುವ ಮಾರ್ಗಸೂಚಿಗಳನ್ನೂ ಪರಿಗಣಿಸಿಲ್ಲ. ಆದ್ದರಿಂದ ಅಧಿಸೂಚನೆ ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT