ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳಬೇಕು’

Last Updated 25 ಏಪ್ರಿಲ್ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿ ಎಂದರೆ ನಕ್ಷೆ ಹಿಡಿದು ಗೆರೆ ಎಳೆಯುವುದಲ್ಲ. ಎಲ್ಲ ವರ್ಗದ ಜನರನ್ನೂ ಅಭಿವೃದ್ಧಿ ಒಳಗೊಳ್ಳಬೇಕು ಎಂದು ಪರಿಸರವಾದಿ ಲಿಯೊ ಸಾಲ್ಡಾನ ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ಸಭಾಂಗಣದಲ್ಲಿ ‘ಅವನಿ’ ಸಂಸ್ಥೆ ಆಯೋಜಿಸಿದ್ದ ‘ಭವಿಷ್ಯದ ಬೆಂಗಳೂರಿಗೆ ಬೇಕಾದ ಯೋಜನೆಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನಲ್ಲಿ ರಸ್ತೆ ಬದಿ ಎಳನೀರು ಮಾರಾಟ ಮಾಡುವವರು, ಆಟೊರಿಕ್ಷಾ ಚಾಲಕರು, ಪೌರ ಕಾರ್ಮಿಕರು, ಕಾರ್ಖಾನೆಗಳ ಕಾರ್ಮಿಕರು, ಕೂಲಿ ಕಾರ್ಮಿಕರು, ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಹೀಗಿ ಹಲವು ವರ್ಗದ ಜನರಿದ್ದಾರೆ. ಆದರೆ, ಎಲ್ಲರಿಗೂ ಕುಡಿಯುವ ನೀರು ಸೇರಿ ಮೂಲ ಸೌಕರ್ಯ ದೊರೆತಿದೆಯೇ’ ಎಂದು ಪ್ರಶ್ನಿಸಿದರು.

ಸದಾಶಿವನಗರ ಮತ್ತು ಬೊಮ್ಮನಹಳ್ಳಿಯನ್ನು ಗಮನಿಸಿದರೆ ವ್ಯತ್ಯಾಸ ಅರಿವಿಗೆ ಬರುತ್ತದೆ. ಹೀಗಾಗಿಯೇ, ಅಭಿವೃದ್ಧಿ ಎಲ್ಲರನ್ನೂ ಒಳಗೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.

ಯೋಜನೆಗಳನ್ನು ರೂಪಿಸುವಾಗ ಎಲ್ಲಾ ವರ್ಗ, ಸಮುದಾಯದ ಜನರ ಅಭಿಪ್ರಾಯಗಳನ್ನೂ ಕೇಳಬೇಕು. ಭೂಸ್ವಾಧೀನ ಸಂದರ್ಭದಲ್ಲೂ ಆ ಜನರಿಗೆ ಎಲ್ಲಾ ರೀತಿಯ ಮಾಹಿತಿಯನ್ನೂ ಅಧಿಕಾರಿಗಳು ಒದಗಿಸಬೇಕು. ಕಡೆ ಪಕ್ಷ 15 ದಿನಗಳಿಗೆ ಒಮ್ಮೆಯಾದರೂ ಸಭೆ ನಡೆಸಬೇಕು ಎಂದರು.

ಕಾವೇರಿ ನೀರು ಬೆಂಗಳೂರಿಗೆ ಸಾಕಾಗುತ್ತಿಲ್ಲ. ಕೆರೆಗಳು ನಾಶವಾಗಿವೆ, ಅಂತರ್ಜಲ ಮಟ್ಟ ಪಾತಾಳ ಸೇರಿದೆ. 3.50 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳು ಬೆಂಗಳೂರಿನಲ್ಲಿವೆ. ಅಂತರ್ಜಲ ಮಟ್ಟ ಹೆಚ್ಚಳಕ್ಕೆ ರಚನಾತ್ಮಕ ಯೋಜನೆಗಳನ್ನು ಆಡಳಿತ ನಡೆಸುವವರು ರೂಪಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಜನಜೀವನ ದುಸ್ತರವಾಗಿದೆ. ಬೆಂಗಳೂರನ್ನು ಯೋಜನಾರಹಿತವಾಗಿ ಬೆಳೆಸಿದರೆ ಅದೇ ಪರಿಸ್ಥಿತಿ ಇಲ್ಲಿಯೂ ಎದುರಾಗುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದರು.

ಮೊದಲ ಹಂತದ ಮೆಟ್ರೊ ಯೋಜನೆ ₹5,000 ಕೋಟಿಯಿಂದ ₹16,000 ಕೋಟಿಗೆ ಏರಿಕೆ ಆಯಿತು. ದೇಶದ ಶೇ 70ರಷ್ಟು ಸಂಪತ್ತು ಶೇ 1ರಷ್ಟು ಜನರ ಪಾಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಶೇ 95ರಷ್ಟು ಸಂಪತ್ತು ಅದೇ ಜನರ ಪಾಲಾಗಲಿದೆ ಎಂದೂ ಅವರು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT