ಶನಿವಾರ, ನವೆಂಬರ್ 26, 2022
23 °C

ಹೆಸರಘಟ್ಟ: ಉಳಿದೀತೆ ಹಸಿರು ಪಟ್ಟ? ವಿಶೇಷ ವರದಿ

ಸಚ್ಚಿದಾನಂದ ಕುರಗುಂದ. Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈವಿಧ್ಯಮಯ ಮತ್ತು ವಿಭಿನ್ನ ಜಾತಿಯ ಪಕ್ಷಿ ಮತ್ತು ಪ್ರಾಣಿಗಳ ಸಂಕುಲಕ್ಕೆ ಆಶ್ರಯ ತಾಣವಾಗಿರುವ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಮೀಸಲು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬೇಕು ಎನ್ನುವ ಪರಿಸರವಾದಿಗಳ ಒತ್ತಾಸೆಗೆ ಸರ್ಕಾರ ದಿಟ್ಟ ನಿಲುವು ಪ್ರದರ್ಶಿಸದೆ ಮೀನಮೇಷ ಎಣಿಸುತ್ತಿದೆ.

ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಈ ಪ್ರದೇಶವನ್ನು ಸಮೃದ್ಧ ಹಸಿರು ತಾಣವನ್ನಾಗಿಯೇ ಉಳಿಸಿ, ಬೆಳೆಸಬೇಕು. ಇದು ಕೇವಲ ಹಸಿರು ಪ್ರದೇಶವಷ್ಟೇ ಅಲ್ಲ, ಸಮೃದ್ಧ ’ಆಮ್ಲಜನಕ ತಾಣ’ವೂ ಹೌದು ಎಂದು ಪರಿಸರವಾದಿಗಳು ಪ್ರತಿಪಾದಿಸುತ್ತಾರೆ.

ಮುಖ್ಯಮಂತ್ರಿ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ರಾಜ್ಯ ವನ್ಯಜೀವಿ ಮಂಡಳಿ ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಮಂಡಳಿಯ ಸಭೆಯಲ್ಲಿ ಈ ವಿಷಯ ಕುರಿತಾದ ಕಾರ್ಯಸೂಚಿಯಲ್ಲಿ ಹಲವು ಬಾರಿ ಪ್ರಸ್ತಾಪವಾಗಿದೆ. ಆದರೆ, ಈ ವಿಷಯ ಚರ್ಚೆಗೆ ಕೈಗೆತ್ತಿಕೊಳ್ಳುವ ಮುನ್ನವೇ ಸಭೆಯನ್ನು ಮುಂದೂಡಿದ್ದೇ ಹೆಚ್ಚು. ಜನಪ್ರತಿನಿಧಿಗಳ ಒತ್ತಡದಿಂದಲೂ ಹಸಿರು ಉಳಿಸುವ ಕಾರ್ಯಕ್ಕೆ ವಿಘ್ನಗಳೇ ಹೆಚ್ಚಾಗಿವೆ.

’ಸಂರಕ್ಷಿತ ಪ್ರದೇಶವಾಗಿ ಘೋಷಿಸಿದರೆ ಮಾತ್ರ ಈ ಹುಲ್ಲುಗಾವಲು ಪ್ರದೇಶವನ್ನು ಉಳಿಸಿಕೊಳ್ಳಲು ಸಾಧ್ಯ. ಈ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಿಸಬೇಕು ಎನ್ನುವ ಪ್ರಸ್ತಾವವೂ ಈ ಹಿಂದೆ ಚರ್ಚೆಯಾಗಿತ್ತು. ಇದೇ ರೀತಿ ಮನಃಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಕಾಂಕ್ರೀಟ್‌ ಕಾಡು ನಿರ್ಮಾಣವಾಗಹುದು‘ ಎನ್ನುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ.

ಹೆಸರಘಟ್ಟ ಸುತ್ತಮುತ್ತಲಿನ ಒಟ್ಟು 5,010 ಎಕರೆ ಪ್ರದೇಶವನ್ನು ‘ಗ್ರೇಟರ್‌ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಪ್ರದೇಶ’ ಎಂದು ಘೋಷಿಸುವ ಪ್ರಸ್ತಾವ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಗೆ ಸಲ್ಲಿಕೆಯಾಗಿತ್ತು. ಈ ಪ್ರಸ್ತಾವವನ್ನು ಮಂಡಳಿಯು 2021ರ ಜನವರಿ 19ರಂದು ನಡೆದ ಸಭೆಯಲ್ಲಿ ತಿರಸ್ಕರಿಸಿತ್ತು. ಈ ನಿರ್ಧಾರ ಪ್ರಶ್ನಿಸಿ ಬೆಂಗಳೂರಿನ ವಿಜಯ್‌ ನಿಶಾಂತ್‌, ದೇವನಹಳ್ಳಿಯ ಎಂ.ಆರ್‌. ಸೀತಾರಾಮ್‌, ಕೋಡಿಹಳ್ಳಿಯ ಮಹೇಶ್‌ ಭಟ್ಟ, ಬೆಂಗಳೂರಿನ ಶ್ರೀನಿವಾಸನ್‌ ರಾಮಕೃಷ್ಣನ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ವನ್ಯಜೀವಿ (ರಕ್ಷಣೆ) ಕಾಯ್ದೆ–1972ರ ಸೆಕ್ಷನ್‌ 36ಎ ಅಡಿಯಲ್ಲಿ ಸಂರಕ್ಷಿತ ಮೀಸಲು ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಕೋರಿದ್ದರು. ಈ ಪ್ರಸ್ತಾವದ ಕುರಿತು ಪುನಃ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್‌ ಮಂಡಳಿಗೆ ನಿರ್ದೇಶನ ನೀಡಿತ್ತು. 

‘ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಈ ಪ್ರದೇಶವು ಸಮೃದ್ಧ ಸಸ್ಯ ಸಂಪತ್ತನ್ನು ಹೊಂದಿದ್ದು, ಇಲ್ಲಿ ಅನೇಕ ಪ್ರಭೇದಗಳ ಪ್ರಾಣಿ, ಪಕ್ಷಿ ಮತ್ತು ಕೀಟಗಳಿವೆ. ಇದೊಂದು ಅತ್ಯುತ್ತಮ ಹುಲ್ಲುಗಾವಲು. ಚಳಿಗಾಲದಲ್ಲಿ ಹಿಮಾಲಯ ಮತ್ತು ಮಧ್ಯ ಏಷ್ಯಾದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ’ ಎಂಬ ಅಂಶವನ್ನು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿತ್ತು.

ಸೆಪ್ಟೆಂಬರ್‌ 5ರಂದು ನಡೆಯಬೇಕಾಗಿದ್ದ ವನ್ಯಜೀವಿ ಮಂಡಳಿ ಸಭೆಯ ಕಾರ್ಯಸೂಚಿಯಲ್ಲಿ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ ಘೋಷಣೆ ಕುರಿತು ಕಾರ್ಯಸೂಚಿಯಲ್ಲಿ ಪ್ರಸ್ತಾವವಿತ್ತು. ಆದರೆ, ಈ ಸಭೆ ನಡೆಯಲಿಲ್ಲ.

ಶಿವಕೋಟೆ, ಹುರುಳಿಚಿಕ್ಕನಹಳ್ಳಿ, ಅರಕೆರೆ, ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಹುಲ್ಲುಗಾವಲು ಪ್ರದೇಶವು ರೈತರ ದನಕರುಗಳಿಗೆ ಮೇವಿನ ತಾಣವಾಗಿದೆ. ಇದನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲೆಯೂ ಇದೆ ಎಂದು ಸ್ಥಳೀಯರು ಹೇಳುತ್ತಾರೆ. 

ಆನ್‌ಲೈನ್‌ ಅಭಿಯಾನಕ್ಕೆ ಬೆಂಬಲ: ಹೆಸರಘಟ್ಟ ಹುಲ್ಲುಗಾವಲು ರಕ್ಷಿಸಿ, ಪರಿಸರ ಉಳಿಸಿ ಎನ್ನುವ ಅಭಿಯಾನಕ್ಕೂ ಮತ್ತಷ್ಟು ಬಲ ದೊರೆತಿದೆ. ಎಲ್ಲ ವರ್ಗದ ಜನರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ಸಹಿ ಹಾಕಿದ್ದಾರೆ.

 

---

 

ವೈವಿಧ್ಯಮಯ ಪ್ರದೇಶ

* ಬೆಂಗಳೂರಿನಲ್ಲಿ ಉಳಿದಿರುವ ಕೊನೆಯ ಹುಲ್ಲುಗಾವಲು ಆವಾಸಸ್ಥಾನ.

* 1,912 ಎಕರೆ ಒಟ್ಟು ಕೆರೆಯ ಪ್ರದೇಶ

* ವಿವಿಧ ಜಾತಿಯ ಗಿಡ–ಮರಗಳು

* 235ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು,

* 400 ಪ್ರಭೇದದ ಕೀಟಗಳು ಮತ್ತು ಚಿಟ್ಟೆಗಳು - 356 ಎಕರೆ ಹುಲ್ಲುಗಾವಲು ಪ್ರದೇಶ

 

 ‘ಹುಲ್ಲುಗಾವಲು ಪ್ರದೇಶದಿಂದ ರೈತರಿಗೆ ಅನುಕೂಲ’

‘ಹುಲ್ಲುಗಾವಲು ಪ್ರದೇಶಕ್ಕೆ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶವಾಗಲು ಅವಕಾಶ ನೀಡಬಾರದು. ಅಂತರ್ಜಲ ಹೆಚ್ಚಾಗಬೇಕಾದರೆ ಅರಣ್ಯ, ಹುಲ್ಲುಗಾವಲು ಪ್ರದೇಶಗಳು ಸಮೃದ್ಧವಾಗಿರಬೇಕು. ಪಶ್ಚಿಮ ಘಟ್ಟದಲ್ಲಿ ಇಡೀ ವರ್ಷ ನೀರು ಲಭ್ಯವಾಗುತ್ತದೆ. ಕಾಡು ಹಾಳಾಗಿರುವ ಪ್ರದೇಶದಲ್ಲಿ ನಾಲ್ಕು ತಿಂಗಳು ಮಾತ್ರ ದೊರೆಯುತ್ತದೆ. ಹುಲ್ಲುಗಾವಲು ಸಂರಕ್ಷಣೆಯಿಂದ ರೈತರಿಗೂ ಅನುಕೂಲಗಳಿದ್ದು, ಕೃಷಿ ಉತ್ಪನ್ನಗಳ ಇಳುವರಿಯೂ ಹೆಚ್ಚುತ್ತದೆ. ಜತೆಗೆ, ಕೀಟಗಳು ಸಹ ಹೆಚ್ಚಾಗಿರುತ್ತವೆ. ಇಂತಹ ಕೀಟಗಳಿಂದ ಬೆಳೆಗಳ ರಕ್ಷಣೆಗೂ ಅನುಕೂಲವಾಗುತ್ತದೆ. ಪ್ರಧಾನಮಂತ್ರಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದಾರೆ. ಇಂತಹ ಹುಲ್ಲುಗಾವಲುಗಳನ್ನು ರಕ್ಷಿಸಿದರೆ ಮಾತ್ರ ರೈತರ ಬದುಕು ಹಸನುಗೊಳಿಸಲು ಸಾಧ್ಯ. ನೀರು ಮತ್ತು ಪರಾಗಸ್ಪರ್ಶದ ಕೀಟಗಳಿರುವ ಜಾಗಗಳಲ್ಲಿ ಕೃಷಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ. ಹುಲ್ಲುಗಾವಲು ಇರುವ ಪ್ರದೇಶಗಳಲ್ಲಿ ಪರಾಗಸ್ಪರ್ಶ ಹೆಚ್ಚಾಗಿರುತ್ತದೆ.ಇದರಿಂದ, ರೈತರ ಬೆಳೆಗಳ ಇಳುವರಿಗೂ ದ್ವಿಗುಣವಾಗುತ್ತದೆ. ಅಭಿವೃದ್ಧಿ ಎನ್ನುವುದು ಜನಪರವಾಗಿರಬೇಕು. ಪರಿಸರ ನಾಶ ಮಾಡಿ ಯಾವ ರೀತಿ ಅಭಿವೃದ್ಧಿ ಮಾಡಲು ಸಾಧ್ಯ. ನೀರು ಇಲ್ಲದೆಯೇ ಇದ್ದಾಗ ಏನು ಮಾಡಲು ಸಾಧ್ಯ. ಕೇವಲ ಬಿಲ್ಡರ್ಸ್‌ಗೆ ಅನುಕೂಲವಾಗುವ ಯೋಜನೆಗಳಿಂದ ಉಪಯೋಗವಾಗುವುದಿಲ್ಲ. ಜನರ ಬಗ್ಗೆ ಕಾಳಜಿ ಇರುವ ಯೋಜನೆ ರೂಪಿಸಬೇಕೇ ಹೊರತು ಲೂಟಿ ಮಾಡುವ ಯೋಜನೆ ರೂಪಿಸಬಾರದು. ಅನ್ಯ ಉದ್ದೇಶಗಳಿಗೆ ಈ ಪ್ರದೇಶವನ್ನು ಬಳಸಲು ಅವಕಾಶ ನೀಡಬಾರದು’.

ಡಾ. ಟಿ.ವಿ. ರಾಮಚಂದ್ರ, ಪರಿಸರ ವಿಜ್ಞಾನಿ

 

ಯಥಾಸ್ಥಿತಿ ಕಾಪಾಡಬೇಕು

‘ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಈಗಿರುವ ರೀತಿಯಲ್ಲೇ ಯಥಾಸ್ಥಿತಿ ಕಾಪಾಡಬೇಕು. ಬಫರ್‌ ಝೋನ್‌ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ದನ ಕರುಗಳನ್ನು ಇಲ್ಲಿ ಮೇಯಿಸಬಹುದು. ಈ ಪ್ರದೇಶಕ್ಕೆ ಬೇಲಿ ಹಾಕಿ ಎಂದು ಯಾರೂ ಹೇಳಿಲ್ಲ. ಹುಲ್ಲುಗಾವಲು ಪ್ರದೇಶವು ಇಂಗಾಲ ಅನ್ನು ಹೀರಿಕೊಳ್ಳುತ್ತದೆ ಮತ್ತು ಅಂತರ್ಜಲವೂ ಹೆಚ್ಚುತ್ತದೆ. ಭವಿಷ್ಯದ ದೃಷ್ಟಿಯಿಂದ ಈ ಪ್ರದೇಶವನ್ನು ರಕ್ಷಿಸಬೇಕು.

ಮಹೇಶ್‌ ಭಟ್ಟ, ಪರಿಸರವಾದಿ

‘ಇದು ವಿಭಿನ್ನ ಪ್ರದೇಶ’

ಬೆಂಗಳೂರು ಈಗ ಸುಮಾರು 1.5 ಕೋಟಿ ಜನಸಂಖ್ಯೆ ಹೊಂದಿದೆ. ನಗರದ ಉತ್ತರ ಭಾಗದಲ್ಲಿ ಯಾವುದೇ ರೀತಿಯ ವಿಶಾಲ ಪ್ರದೇಶದ ಹಸಿರು ಪ್ರದೇಶ ಇಲ್ಲ. ಇದು ಅತ್ಯಂತ ವಿಭಿನ್ನ ಸ್ಥಳ. ಹೀಗಾಗಿ, ಹೆಸರಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಮೀಸಲು ಪ್ರದೇಶವನ್ನಾಗಿ ಘೋಷಿಸಬೇಕು. ಇದರಿಂದ, ಈ ಅಂತರರಾಷ್ಟ್ರೀಯ ನಗರದಲ್ಲಿ ಉತ್ತಮ ಪರಿಸರದಲ್ಲಿ ಬದುಕಲು ಸಾಧ್ಯವಾಗುತ್ತದೆ. ಜತೆಗೆ, ಪ್ರವಾಹ, ಮಾಲಿನ್ಯ ಮತ್ತು ನೀರಿನ ಕೊರತೆಯಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಾಧ್ಯ. ಜನರ ಮತ್ತು ಪರಿಸರ ಹಾಗೂ ಭವಿಷ್ಯದ ಹಿತಾಸಕ್ತಿ ದೃಷ್ಟಿಯಿಂದ ಮುಖ್ಯಮಂತ್ರಿ ಅವರು ಉತ್ತಮ ನಿರ್ಧಾರ ಕೈಗೊಳ್ಳಬೇಕು.

ವಿಜಯ್‌ ನಿಶಾಂತ್‌, ವೃಕ್ಷ ಫೌಂಡೇಷನ್‌ ಅಧ್ಯಕ್ಷ

 

‘ಭವಿಷ್ಯದ ಪೀಳಿಗೆಗಾಗಿ ರಕ್ಷಿಸಬೇಕು’

‘ಹುಲ್ಲುಗಾವಲು ಪ್ರದೇಶದಿಂದ ರೈತರಿಗೆ ಅನುಕೂಲ. ಈ ಪ್ರದೇಶ ನಾಶವಾದರೆ ಭವಿಷ್ಯದ ಪೀಳಿಗೆಗೆ
ಸಂಕಷ್ಟ ಎದುರಿಸಬೇಕಾಗುತ್ತದೆ. ನಗರದಲ್ಲಿ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್ ಇದೆ. ಅದೇ ರೀತಿಯಲ್ಲಿ
ಹುಲ್ಲುಗಾವಲು ಪ್ರದೇಶ ಇದೆ. ಇದನ್ನು ನಾಶ ಮಾಡಿ, ಕಾಂಕ್ರೀಟ್‌ ಕಾಡು ನಿರ್ಮಿಸಿದರೆ ನಾವೇ ತೊಂದರೆ ಎದುರಿಸಬೇಕಾಗುತ್ತದೆ. ಈ ಪ್ರದೇಶದ ಸಂರಕ್ಷಣೆಗೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಉತ್ತಮ ವಾತಾವರಣಕ್ಕಾಗಿ ಬೆಂಗಳೂರಿನಿಂದ ಇಲ್ಲಿಗೆ ಸಾವಿರಾರು ಮಂದಿ ಬರುತ್ತಾರೆ. ರಿಯಲ್‌ ಎಸ್ಟೇಟ್‌ನವರಿಗೆ ಅನುಕೂಲ ಕಲ್ಪಿಸಲು ಪರಿಸರ ಹಾಳು ಮಾಡುವ ಕಾರ್ಯಕ್ಕೆ ಯಾರೂ ಮುಂದಾಗಬಾರದು.

ಬಿ.ವಿ. ಅಶ್ವತ್ಥ ನಾರಾಯಣಗೌಡ, ರೈತ ಸಂಘದ ಬೆಂಗಳೂರು ಉತ್ತರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ

ಆನ್‌ಲೈನ್‌ ಅಭಿಯಾನಕ್ಕೆ ಬೆಂಬಲ: ಹೆಸರಘಟ್ಟ ಹುಲ್ಲುಗಾವಲು ರಕ್ಷಿಸಿ, ಪರಿಸರ ಉಳಿಸಿ ಎನ್ನುವ ಅಭಿಯಾನಕ್ಕೂ ಮತ್ತಷ್ಟು ಬಲ ದೊರೆತಿದೆ. ಎಲ್ಲ ವರ್ಗದ ಜನರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ಸಹಿ ಹಾಕಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು