ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕರಗ ಉತ್ಸವ ಇಂದು

ಧರ್ಮರಾಯ ದೇವಸ್ಥಾನಕ್ಕೆ ಮಲ್ಲಿಗೆ ಹೂವಿನಿಂದ ಶೃಂಗಾರ
Last Updated 15 ಏಪ್ರಿಲ್ 2022, 21:04 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಕಾರಣದಿಂದ ಎರಡು ವರ್ಷ ಸರಳವಾಗಿ ನಡೆದಿದ್ದ ಐತಿಹಾಸಿಕ ಕರಗ ಉತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಲಿದ್ದು, ಉತ್ಸವಕ್ಕೆ ಕ್ಷಣಗಣನೆಆರಂಭವಾಗಿದೆ.

ರಥೋತ್ಸವ ಮತ್ತುಧ್ವಜಾರೋಹಣ ನೆರವೇರಿಸುವ ಮೂಲಕ ಏ.4ರಂದು ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಅಂದಿನಿಂದ ಪ್ರತಿದಿನ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತಿವೆ. ಇಡೀ ಉತ್ಸವದ ಕೇಂದ್ರ ಬಿಂದು ಆಗಿರುವ ಕರಗ ಶಕ್ತ್ಯೋತ್ಸವವು ಚೈತ್ರ ಪೂರ್ಣಿಮೆಯ ಶನಿವಾರ
ರಾತ್ರಿ 12.30ಕ್ಕೆ ನಡೆಯಲಿದೆ.

ಧರ್ಮರಾಯಸ್ವಾಮಿ ದೇವಸ್ಥಾನವನ್ನು ಮಲ್ಲಿಗೆ ಹೂವಿನಿಂದ ಶೃಂಗರಿಸಲಾಗಿದೆ. ಕರಗ ಸಾಗುವ ದಾರಿಯುದ್ದಕ್ಕೂ ಸ್ವಚ್ಚಗೊಳಿಸಿ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಎ.ಜ್ಞಾನೇಂದ್ರ ಅವರು ಈ ಬಾರಿ ಕರಗ ಹೊರಲಿದ್ದಾರೆ.

ಹಲಸೂರುಪೇಟೆ ಆಂಜನೇಯ ಸ್ವಾಮಿ ಮತ್ತು ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿದ ನಂತರ ನಗರ್ತಪೇಟೆಯ ವೇಣುಗೋಪಾಲಸ್ವಾಮಿ, ಸಿದ್ದಣ್ಣಗಲ್ಲಿಯ
ಭೈರೇದೇವರ ದೇವಸ್ಥಾನ, ಕಬ್ಬನ್‌ ಪೇಟೆಯ ರಾಮಸೇವಾ ಮಂದಿರ, ಮಕ್ಕಳ ಬಸವನಗುಡಿ, ಗಾಣಿಗರಪೇಟೆಯ ಚನ್ನರಾಯಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನದ ಮೂಲಕ ನಗರದ ನಾಲ್ಕೂ ದಿಕ್ಕುಗಳಲ್ಲಿ ಕರಗ ಸಂಚರಿಸಲಿದೆ.

ಕರಗ ಉತ್ಸವ ನೋಡಲು 1 ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ. ಹಜರತ್ ತವಕ್ಕಲ್ ಮಸ್ತಾನ್ ಷಾ ದರ್ಗಾಕ್ಕೆ ಕರಗ ಭೇಟಿ ನೀಡುವುದು ಪ್ರತೀತಿಯಾಗಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೆಲವರು ಬೆದರಿಕೆ ಹಾಕಿದ್ದರು. ಈ ಸಲವೂ ಕರಗ ಅಲ್ಲಿಗೆ ತೆರಳಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಹಸೀ ಕರಗ

ಕರಗ ಉತ್ಸವದಲ್ಲಿ ಮುಖ್ಯ ಭಾಗವಾದ ‘ಹಸೀ ಕರಗ’ ಉತ್ಸವ ಗುರುವಾರ ತಡರಾತ್ರಿಯಿಂದ ಶುಕ್ರವಾರ ಬೆಳಿಗ್ಗೆ ತನಕ ನಡೆಯಿತು.

ಪೂಜಾರಿ ಮನೆತನದವರು ದೊಡ್ಡ ತೇರಿನ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ದೇವರ ಮೂರ್ತಿಗಳಿಗೆ ಅಲಂಕಾರ ಮಾಡಿ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಕಬ್ಬನ್ ಉದ್ಯಾನದಲ್ಲಿನ ಸಂಪಂಗಿಕೆರೆ ಅಂಗಳದ ಶಕ್ತಿ ಪೀಠಕ್ಕೆ ತೆರಳಿದರು. ಬಳಿಕ ನಡೆದ ಹಸೀ ಕರಗ ಉತ್ಸವವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು.

ಸಂಚಾರ ನಿಷೇಧ: ಪರ್ಯಾಯ ಮಾರ್ಗ

ಶನಿವಾರ ಶಕ್ತ್ಯೋತ್ಸವ ನಡೆಯುವುದರಿಂದ ಕೆಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗಗಳನ್ನು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಶನಿವಾರ ಸಂಜೆ 4 ಗಂಟೆಯಿಂದ ಭಾನುವಾರ ಬೆಳಿಗ್ಗೆ 8 ಗಂಟೆ ತನಕ ಸಂಚಾರ ನಿರ್ಬಂಧ ಇರಲಿದೆ. ಸಿಟಿ ಮಾರುಕಟ್ಟೆ ಕಡೆಯಿಂದ ಬಂದು ಎಸ್‌ಜೆಪಿ ಜಂಕ್ಷನ್‌ನಲ್ಲಿ ಪಿ.ಕೆ.ಲೇನ್ ಮೂಲಕ ಓಟಿಸಿ ರಸ್ತೆಯ ಮಾರ್ಗವಾಗಿ ಎನ್‌.ಆರ್.ರಸ್ತೆ ಹಾಗೂ ಸುಣ್ಣಕಲ್ಲುಪೇಟೆಗೆ ಹೋಗಲು ಎಡ ತಿರುವ ಪಡೆಯುತ್ತಿದ್ದ ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಇದಕ್ಕೆ ಪರ್ಯಾಯವಾಗಿ ಎಲ್ಲಾ ವಾಹನಗಳು ನೇರವಾಗಿ ಪುರಭವನ ವೃತ್ತಕ್ಕೆ ಹೋಗಿ ಎನ್‌.ಆರ್. ರಸ್ತೆ ಮೂಲಕ ಮುಂದೆ ಸಾಗಬೇಕು.

‌ಪಿ.ಕೆ.ಲೇನ್‌, ಓಟಿಸಿ, ನಗರ್ತಪೇಟೆ ರಸ್ತೆ, ಎಸ್.ಪಿ.ರಸ್ತೆ ಮತ್ತು ಎಸ್‌.ಪಿ. ರಸ್ತೆಯ ಅಡ್ಡ ರಸ್ತೆಗಳು ಹಾಗೂ ಸುಣ್ಣಕಲ್ಲುಪೇಟೆ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ‌ಅದಕ್ಕೆ ಬದಲಾಗಿ ಪುರಭವನ, ರವೀಂದ್ರ ಕಲಾಕ್ಷೇತ್ರ, ಮೈ ಶುಗರ್ ಕಟ್ಟಡ, ಎನ್‌.ಆರ್‌. ರಸ್ತೆ ಎಡಭಾಗ, ಕುಂಬಾರ ಗುಂಡಿ ರಸ್ತೆಯ ಎಡಭಾಗ, ಜೆ.ಸಿ. ರಸ್ತೆಯ ವಡಭಾಗ, ಎಸ್‌ಜೆಪಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಬಿ.ಆರ್.ರವಿಕಾಂತೇಗೌ‌ಡ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT