ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ಆರ್.ವಿ. ರಸ್ತೆ ನಿಲ್ದಾಣ–ಯಲಚೇನಹಳ್ಳಿಗೆ ಉಚಿತ ಬಸ್‌ ಸೇವೆ
Last Updated 14 ನವೆಂಬರ್ 2019, 22:52 IST
ಅಕ್ಷರ ಗಾತ್ರ

ಬೆಂಗಳೂರು:ಬೊಮ್ಮಸಂದ್ರದಲ್ಲಿ ನಮ್ಮ ಮೆಟ್ರೊ ಎರಡನೇ ಹಂತದ ಎತ್ತರಿಸಿದ ಮಾರ್ಗದಲ್ಲಿ ವಯಡಕ್ಟ್‌ ಅಳವಡಿಕೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದರಿಂದ ಹಸಿರು ಮಾರ್ಗದ ಆರ್.ವಿ. ರಸ್ತೆ ಹಾಗೂ ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಗುರುವಾರ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ, ಪ್ರಯಾಣಿಕರು ತೊಂದರೆ ಅನುಭವಿಸಿದರು.

ಹಸಿರು ಮಾರ್ಗದ ಸೇವೆಯು ನಾಗಸಂದ್ರದಿಂದ ಆರ್‌.ವಿ. ರಸ್ತೆ ನಿಲ್ದಾಣಕ್ಕೆ ಸೀಮಿತಗೊಂಡಿತು.ಆರ್.ವಿ. ರಸ್ತೆಯಿಂದ ಯಲಚೇನಹಳ್ಳಿಯವರೆಗೆ 4 ಕಿ.ಮೀ. ಮಾರ್ಗದಲ್ಲಿ ಉಚಿತವಾಗಿ ಬಿಎಂಟಿಸಿ ಬಸ್‌ ಸೇವೆ ಒದಗಿಸಲಾಗಿತ್ತು.

ಮೆಟ್ರೊ ರೈಲುಗಳ ಸಂಖ್ಯೆ ಹಾಗೂ ಅವುಗಳ ತರಂಗಾಂತರ (ಎರಡು ರೈಲುಗಳ ಕಾರ್ಯಾಚರಣೆ ನಡುವಿನ ಅಂತರ) ಕೂಡ ಕಡಿಮೆ ಆಗಿತ್ತು. ಇದೆಲ್ಲದರಿಂದ ನಿಲ್ದಾಣಗಳು ಮತ್ತು ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ರೈಲು ಎದುರಿಗೇ ಹಾದು ಹೋದರೂ, ಹಲವರಿಗೆ ಪ್ರಯಾಣ ಭಾಗ್ಯ ಸಿಗುತ್ತಿರಲಿಲ್ಲ. ಸರದಿಯಲ್ಲಿ ಕಾಯಬೇಕಾಯಿತು.

ಸಾಮಾನ್ಯ ದಿನಗಳಲ್ಲಿ ಹಸಿರು ಮಾರ್ಗ (ನಾಗಸಂದ್ರ-ಯಲಚೇನಹಳ್ಳಿ)ದಲ್ಲಿ 21 ಬಾರಿ ರೈಲುಗಳು ಸಂಚರಿಸುತ್ತವೆ. ಆದರೆ, ಗುರುವಾರ ಈ ಸಂಖ್ಯೆ 18ಕ್ಕೆ ಇಳಿದಿತ್ತು. ಈ ಪೈಕಿ ಒಂದು ತುರ್ತು ಸಂದರ್ಭಗಳಿಗಾಗಿ ಮೀಸಲಿಡಲಾಗಿತ್ತು. ಇನ್ನು ಆರು ಬೋಗಿಗಳ ಆರು ಮೆಟ್ರೊ ರೈಲುಗಳ ಪೈಕಿ ಎರಡು ಮಾತ್ರ ಸಂಚರಿಸಿದವು. ಅದರಲ್ಲೂ ಒಂದು ಆರ್.ವಿ. ರಸ್ತೆಯಿಂದ ನಾಗಸಂದ್ರದ ಕಡೆಗೆ ಹೊರಟರೆ, ಮತ್ತೊಂದು ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿತ್ತು.

ಸಂಚಾರ ದಟ್ಟಣೆ:ಬೆಳಿಗ್ಗೆ ಮತ್ತು ಸಂಜೆ ದಟ್ಟಣೆ ವಿಪರೀತವಾಗಿತ್ತು. ಸೇವೆಯಲ್ಲಿ ವ್ಯತ್ಯಯ ಇರುವುದು ಮೊದಲೇ ಗೊತ್ತಿರುವುದರಿಂದ ಈ ಮಾರ್ಗದಲ್ಲಿ ಕೆಲಸಕ್ಕೆ ತೆರಳುವವರು ಅರ್ಧಗಂಟೆ ಮುಂಚಿತವಾಗಿ ಮನೆ ಬಿಟ್ಟರು. ಆರ್.ವಿ. ರಸ್ತೆ ಗಿಳಿದು, ಅಲ್ಲಿಂದ ಬಸ್, ಆಟೋ, ಬಾಡಿಗೆ ಬೈಕ್, ಕ್ಯಾಬ್‌ಗಳ ಮೊರೆಹೋದರು. ಅದೇ ರೀತಿ, ನಾಗಸಂದ್ರ ಕಡೆಗೆ ಹೊರಡುವವರೂ ಆರ್.ವಿ. ರಸ್ತೆಗೆ ಬಂದಿಳಿಯುತ್ತಿದ್ದರು. ಅಲ್ಲದೆ, ರಸ್ತೆ ಮಾರ್ಗದಲ್ಲಿ ವಾಹನದಟ್ಟಣೆ ಎಂದಿಗಿಂತ ಹೆಚ್ಚಾಗಿತ್ತು. ಇದೇ ಪರಿಸ್ಥಿತಿ ಇನ್ನೂ ಮೂರು ದಿನಗಳು (ನ.17ರ ರಾತ್ರಿಯವರೆಗೆ) ಮುಂದುವರಿಯಲಿದೆ.

‘ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳುವ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ಆದರೆ, ಇವತ್ತು ಬೆಳಿಗ್ಗೆ ಇದನ್ನು ಮರೆತುಬಿಟ್ಟಿದ್ದೆ’ ಎಂದು ಪ್ರಯಾಣಿಕ ವೈಶಾಖ್‌ ಅರವಿಂದ್‌ ಹೇಳಿದರು.

‘ರೈಲು ಬೋಗಿಗಳಿಗಿಂತಲೂ ಬಿಎಂಟಿಸಿ ಬಸ್‌ಗಳಲ್ಲಿ ಜನ ಕಡಿಮೆ ಇದ್ದರು’ ಎಂದು ಅವರು ಹೇಳಿದರು.

‘ಗುತ್ತಿಗೆ ಆಧಾರದ ಮೇಲೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) 20 ಬಸ್‌ಗಳನ್ನು ನೀಡಲಾಗಿತ್ತು. ಬಸ್‌ಗಳ ನಿರ್ವಹಣೆಯನ್ನು ಬಿಎಂಆರ್‌ಸಿಎಲ್‌ ಸಿಬ್ಬಂದಿಯೇ ನೋಡಿಕೊಂಡರು’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT