ಶನಿವಾರ, ಏಪ್ರಿಲ್ 1, 2023
32 °C
ತಂತ್ರಜ್ಞಾನ ಲೋಕದ ಅನಾವರಣ: ಭಾಷೆ ಸಂಸ್ಕೃತಿ ಅಭಿವೃದ್ಧಿಗೆ ನೆರವಾಗುವ ಅನಿಮೇಷನ್‌ ಚಮತ್ಕಾರ

Bengaluru Tech Summit: ಶತ್ರು ಮೇಲೆ ನಿಗಾವಹಿಸುವ ಗೋಡೆಯಲ್ಲಿನ ರೇಡಾರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶತ್ರುಗಳ ಚಟುವಟಿಕೆ ಮೇಲೆ ನಿಗಾವಹಿಸುವ ಗೋಡೆಯಲ್ಲಿನ ರೇಡಾರ್‌, ಆರೋಗ್ಯ ರಕ್ಷಣೆಗೆ ಮಾಹಿತಿ ಒದಗಿಸುವ ಆ್ಯಪ್‌ಗಳು, ಅನಿಮೇಷನ್‌ ಮೂಲಕ ಧಾರಾವಾಹಿ ನಿರ್ಮಾಣ ಇಂತಹ ಹತ್ತಾರು ತಂತ್ರಜ್ಞಾನಗಳ ಲೋಕವೇ ‘ಬೆಂಗಳೂರು ಟೆಕ್‌ ಸಮ್ಮಿಟ್‌’ನಲ್ಲಿ ಅನಾವರಣಗೊಂಡಿದೆ.

‘ಟೆಕ್‌ ಸಮ್ಮಿಟ್‌’ ಅಂಗವಾಗಿ ಆಯೋಜಿಸಿರುವ ಪ್ರದರ್ಶನದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ರೇಡಾರ್‌ ಗಮನಸೆಳೆಯಿತು. ಇದು ಗೋಡೆಗಳ ಹಿಂದೆ ಇರುವ ಮನುಷ್ಯರು ಮತ್ತು ಅವರ ಸ್ಥಳ, ಚಟುವಟಿಕೆಗಳನ್ನು ಸೆನ್ಸರ್‌ ಮೂಲಕ ಗುರುತಿಸುತ್ತದೆ. ಇದರಿಂದ, ಶತ್ರುಗಳ ಕೈಗೊಳ್ಳಬಹುದಾದ ದಾಳಿಯನ್ನು ಎದುರಿಸಲು ಸಜ್ಜಾಗುವ ಜತೆಗೆ ಪ್ರತಿ ದಾಳಿ ಸಹ ನಡೆಸಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಅವಶೇಷಗಳ ಅಡಿಯಲ್ಲಿ ಸಂತ್ರಸ್ತರು ಸಿಲುಕಿದಾಗ ರಕ್ಷಣಾ ಕಾರ್ಯ ನಡೆಸಲು ಸಹ ಇದು ನೆರವಾಗಲಿದೆ. ಹೃದಯ ಬಡಿತ ಮತ್ತು ಉಸಿರಾಟವನ್ನು ಪತ್ತೆ ಮಾಡುವ ಮೂಲಕ ಈ ರೇಡಾರ್‌ ಸಂತ್ರಸ್ತರು ಇರುವ ನಿಖರ ಸ್ಥಳವನ್ನು ಗುರುತಿಸಲಿದೆ ಎಂದು ತಿಳಿಸಿದರು.

ಅನಿಮೇಷನ್‌ ಲೋಕ ತೆರೆದಿಟ್ಟ ಯುವಕರು: ಸ್ಥಳೀಯ ಭಾಷೆ, ಸಂಸ್ಕೃತಿಗೆ ಆದ್ಯತೆ ನೀಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಯುವಕರು ಆರಂಭಿಸಿರುವ ‘ಮೌಂಟೇನ್‌ ಫ್ಲವರ್‌’ ಕಂಪನಿ ಅನಿಮೇಷನ್‌ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಹುಬ್ಬಳ್ಳಿಯ ರವಿ ಬೇವಿನಗಿಡದ ಈ ಕಂಪನಿಯ ಸಂಸ್ಥಾಪಕರು ಮತ್ತು ಸಿಇಒ. ರಜತ್‌ ಮತ್ತು ಚೈತ್ರಾ ಅವರುಕಂಪನಿ ಮುನ್ನಡೆಸಲು ಕೈಜೋಡಿಸಿದ್ದಾರೆ. ಹಲವು ಸಿನಿಮಾ ಮತ್ತು ಧಾರಾವಾಹಿಗಳಿಗೆ ಅನಿಮೇಷನ್‌ ತಂತ್ರಜ್ಞಾನದ ನೆರವನ್ನು ಈ ಕಂಪನಿ ನೀಡಿದೆ.

‘ಇದು ಉತ್ತರ ಕರ್ನಾಟಕದ ಮೊದಲ ಅನಿಮೇಷನ್‌ ಪ್ರೊಡಕ್ಷನ್‌ ಸ್ಟುಡಿಯೊ. ಜೆರ್ಸಿ, ನಾನಿ ಸಿನಿಮಾಗಳಿಗೆ ನಾವೇ ಅನಿಮೇಷನ್‌ ತಂತ್ರಜ್ಞಾನ ನೆರವು ಒದಗಿಸಿದ್ದೇವೆ. ಈಗ ಸೋಮಾರಿ ರಾಮು, ನಾಟ್ಯ ಮಯೂರಿ, ಉಡಾಳ ಬಸ್ಯಾ ಧಾರವಾಹಿಗಳನ್ನು ನಿರ್ಮಿಸುತ್ತಿದೆ. ಇವುಗಳನ್ನು ಯೂಟ್ಯೂಬ್‌ ಮತ್ತು ಚಾನಲ್‌ಗಳ ಮೂಲಕ ಪ್ರದರ್ಶಿಸಲು ಉದ್ದೇಶಿಸಲಾಗಿದೆ’ ಎಂದು ಚೈತ್ರಾ ವಿವರಿಸಿದರು.

ತೆಂಗಿನ ಗರಿಗಳಲ್ಲಿ ಅರಳಿದ ಪೆನ್‌, ಸ್ಟ್ರಾ
ತೆಂಗಿನ ಒಣ ಗರಿಗಳನ್ನು ಬಳಸಿ ವಿಶಿಷ್ಟ ತಂತ್ರಜ್ಞಾನದ ಮೂಲಕ ತಯಾರಿಸಿದ ಪೆನ್‌ ಮತ್ತು ಸ್ಟ್ರಾಗಳು ಈಗ ಜನಪ್ರಿಯಗೊಳ್ಳುತ್ತಿವೆ. ಗ್ರಾಮೀಣ ಪ್ರದೇಶದ ಮಹಿಳೆಯರನ್ನೇ ಈ ಉದ್ಯಮದಲ್ಲಿ ತೊಡಗಿಸಿಕೊಳ್ಳಲಾಗಿದೆ.

‘ಸನ್‌ಬರ್ಡ್‌ ಸ್ಕ್ರಿಬ್ಬಲ್ಸ್‌’ ಈ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿದೆ. 2018ರಿಂದ ಮೈಸೂರಿನಲ್ಲಿ ಘಟಕವನ್ನು ಆರಂಭಿಸಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲೂ ಈ ಕಂಪನಿಯ ಘಟಕಗಳಿವೆ. ಇಟಲಿ ಸೇರಿದಂತೆ ಹಲವು ದೇಶಗಳಿಗೆ ಈ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ.

‘ಲೋಕಲ್‌ ಬ್ರ್ಯಾಂಡ್‌ ಗ್ಲೋಬಲ್‌ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಒಣಗರಿಗಳನ್ನು ಸಂಸ್ಕರಿಸಿ ಪೆನ್‌ ಮತ್ತು ಸ್ಟ್ರಾಗಳನ್ನು ತಯಾರಿಸಲಾಗುತ್ತಿದೆ. ಸಜೀವ್‌ ವರ್ಗೀಸ್‌ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಕಂಪನಿ ಸ್ಥಾಪಿಸಿದ್ದಾರೆ. ಸ್ವಸಹಾಯ ಸಂಘದ ಮಹಿಳೆಯರು ಈ ಉದ್ಯೋಗದಲ್ಲಿ ತೊಡಗಿದ್ದಾರೆ. ಮೈಸೂರಿನ ಘಟಕಕ್ಕೆ ನಬಾರ್ಡ್‌ ನೆರವು ನೀಡಿದೆ’ ಎಂದು ಕಂಪನಿಯ ಸಹ ಸಂಸ್ಥಾಪಕ ಸಂದೀಪ್‌ ತಿಳಿಸಿದ್ದಾರೆ.  ‘ಹೊಸದುರ್ಗ, ತುಮಕೂರು, ಅರಸಿಕೆರೆ ಸೇರಿ ಹಲವೆಡೆ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ರೈತರಿಗೂ ಆದಾಯ ಪಡೆಯಲು ಇದರಿಂದ ಅನುಕೂಲಗಳಾಗುತ್ತಿವೆ’ ಎಂದರು.

ಆಕರ್ಷಣೆಯ ಸಂಚಾರಿ ತಾರಾಲಯ
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗ್ರಹಗಳು, ನಕ್ಷತ್ರಗಳ ಲೋಕವನ್ನು ಪರಿಚಯಿಸುವ ಉದ್ದೇಶದಿಂದ ಶೈಕ್ಷಣಿಕ ನವೋದ್ಯಮ ‘ತಾರೆ ಜಮೀನ ಪರ್‌’ ಸಂಸ್ಥೆ ರೂಪಿಸಿರುವ ಸಂಚಾರಿ ತಾರಾಲಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಸಂಚಾರಿ ತಾರಾಲಯದ ಮೂಲಕ ಪ್ರತಿ ದಿನ ಸುಮಾರು 5000 ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. ಐದು ವರ್ಷಗಳಿಂದ ಸಂಚಾರಿ ತಾರಾಲಯಗಳು ಲಡಾಕ್‌ನಿಂದ ಕನ್ಯಾಕುಮಾರಿಯವರೆಗೆ ಸಂಚರಿಸಿವೆ. ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಸದ್ಯ ಏಳು ವಾಹನಗಳು ಹಾಗೂ ಉಳಿದೆಡೆ ನಾಲ್ಕು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಸಂಸ್ಥೆಯ ಸಿಇಒ ದಿನೇಶ್‌ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು