ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸ್ನೇಹಿ ಅಭಿವೃದ್ಧಿಗಿಂತ ಜನ ಸ್ನೇಹಿ ಅಭಿವೃದ್ಧಿಗೆ ಒತ್ತು ಅಗತ್ಯ: ಪಟವರ್ಧನ್

ಪ್ರಸನ್ನ ಪರ್ಪಲ್‌ ಮೊಬಿಲಿಟಿ ಸೊಲೂಷನ್ಸ್‌ನ ಸಿಎಂಡಿ ಪ್ರಸನ್ನ ಪಟವರ್ಧನ್
Published 30 ನವೆಂಬರ್ 2023, 8:35 IST
Last Updated 30 ನವೆಂಬರ್ 2023, 8:35 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಲ್ಲಿ ಸರ್ಕಾರದ ನೀತಿಗಳು ಸದಾ ಜನ ಸ್ನೇಹಿ ಅಭಿವೃದ್ಧಿಗಾಗಿ ಇರಬೇಕೇ ಹೊರತು ವಾಹನ ಸ್ನೇಹಿಯಾಗಿರಬಾರದು’ ಎಂದು ಪ್ರಸನ್ನ ಪರ್ಪಲ್‌ ಮೊಬಿಲಿಟಿ ಸೊಲೂಷನ್ಸ್‌ನ ಸಿಎಂಡಿ ಪ್ರಸನ್ನ ಪಟವರ್ಧನ್ ಹೇಳಿದರು.

ಬೆಂಗಳೂರು ಟೆಕ್‌ ಸಮಿಟ್‌ನ 2ನೇ ದಿನವಾದ ಗುರುವಾರ ನಡೆದ ‘ದಿ ಕೇಸ್ ಆಫ್ ಫ್ಯೂಚರ್ ಮೊಬಿಲಿಟಿ’ ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಾವುದೇ ಮಹಾನಗರಗಳಲ್ಲಿನ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿವೆ. ಇದು ಜನರಿಗೆ ಅನಗತ್ಯ ತೊಂದರೆ ಸೃಷ್ಟಿಸುವುದು ಮಾತ್ರವಲ್ಲ, ವ್ಯಕ್ತಿಯ ಕಾರ್ಯಕ್ಷಮತೆ ಕುಗ್ಗಿಸುತ್ತದೆ. ವೈಯಕ್ತಿಕ ಆರೋಗ್ಯದ ಜತೆಗೆ ಕೌಟುಂಬಿಕ ಆರೋಗ್ಯವೂ ಹದಗೆಡುತ್ತದೆ. ಇವೆಲ್ಲದಕ್ಕೂ ಸಾರ್ವಜನಿಕ ಸಾರಿಗೆ ಪರಿಹಾರವೇ ಆದರೂ, ಅದನ್ನು ಎಲ್ಲರೂ ಮುಕ್ತವಾಗಿ ಬಳಸಿಕೊಳ್ಳುವಂತ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕಿದೆ. ಪಾರ್ಕಿಂಗ್ ವ್ಯವಸ್ಥೆ ಹೆಚ್ಚಿಸಿದಷ್ಟೂ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಅದರ ಒತ್ತಡ ರಸ್ತೆ ಮೇಲಾಗುತ್ತದೆ. ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸಬೇಕೆಂದರೆ, ವೈಯಕ್ತಿಕ ವಾಹನಗಳ ಬಳಕೆ ತಗ್ಗಿಸುವುದು ಅನಿವಾರ್ಯ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ‘ಬೆಂಗಳೂರಿನಲ್ಲಿ ಒಟ್ಟು 55 ಮೆಟ್ರೊ ನಿಲ್ದಾಣಗಳಿವೆ. ಇವುಗಳ ಸುತ್ತಲಿನ 2ರಿಂದ 3 ಕಿ.ಮೀ. ಪ್ರದೇಶವನ್ನು ಸಂಪೂರ್ಣವಾಗಿ ಬದಲಿಸುವ ನಿಟ್ಟಿನಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಇದರ ಭಾಗವಾಗಿ ನಗರದ ಹೊರವಲಯದಲ್ಲಿ ನಿರ್ಮಾಣವಾಗಲಿರುವ 6 ಮೆಟ್ರೊ ನಿಲ್ದಾಣಗಳ ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಬದಲಿಸಲಾಗುವುದು. ಜನರು ನಡೆದು ಅಥವಾ ಸೈಕಲ್‌ ಮೂಲಕವೂ ನೇರವಾಗಿ ಮೆಟ್ರೊ ನಿಲ್ದಾಣ ತಲುಪುವಂತೆ ನಿರ್ಮಿಸಲಾಗುತ್ತಿದೆ’ ಎಂದರು.

‘ನಡಿಗೆ ಹಾಗೂ ಮೆಟ್ರೊ ಮಹಾನಗರಗಳಿಗೆ ಇರುವ ಶಾಶತ್ವ ಪರಿಹಾರ. ಉಳಿದ ಸಾರಿಗೆ ವ್ಯವಸ್ಥೆಗಳು ಅವುಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸುತ್ತವೆ. ಮುಂದಿನ 15 ವರ್ಷಗಳಿಗೆ ಬೆಂಗಳೂರಿಗೆ ಸಿಂಗಪುರ ಮಾದರಿಯ ಸಾರಿಗೆ ವ್ಯವಸ್ಥೆ ಜಾರಿಗೆ ತರುವುದು ಅತ್ಯಗತ್ಯ’ ಎಂದರು.

ಉಬರ್ ಇಂಡಿಯಾ ನಿರ್ದೇಶಕ ಸಂಜಯ್ ಚಡ್ಡಾ, ‘ಶೇರಿಂಗ್ ಮೊಬಿಲಿಟಿ ಭವಿಷ್ಯದ ಸಾರಿಗೆಯಾಗಿದೆ. ಇದು ವಾಹನ ನಿಲುಗಡೆಗೆ ಇರುವ ಒತ್ತಡವನ್ನು ತಗ್ಗಿಸಲಿದೆ. ಜನರಿಗೆ ಹೆಚ್ಚಿನ ಹೊರೆಯಾಗದು. ಆದರೆ ಈ ನಿಟ್ಟಿನಲ್ಲಿ ನಮ್ಮ ಸಾರಿಗೆ ನೀತಿಗಳು ಇನ್ನಷ್ಟು ಬದಲಾಗಬೇಕಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಂಜುಮ್ ಪರ್ವೇಜ್, ‘ಶೇರಿಂಗ್ ಮೊಬಿಲಿಟಿಗೆ ಈಗಿರುವ ಸಾರಿಗೆ ನೀತಿಗೆ ಒಂದಷ್ಟು ಸಣ್ಣ ಬದಲಾವಣೆ ಅಗತ್ಯ. ಆ ನಿಟ್ಟಿನಲ್ಲೂ ಚಿಂತನೆ ನಡೆದಿದೆ’ ಎಂದರು.

ಅಮೆರಿಕದ ಬೆಟಾ ಟೆಕ್ನಾಲಜಿಸ್‌ನ ನಿರ್ದೇಶಕ ಬ್ಲೇಕ್‌ ಆಪ್ಸಲ್‌ ಅವರು ವಿದ್ಯುತ್ ಚಾಲಿತ ವಿಮಾನಗಳ ಬಳಕೆ ಕುರಿತು ಮಾತನಾಡಿ, ‘ದೇಶದಲ್ಲಿ ಹೊಸ 200 ವಿಮಾನ ನಿಲ್ದಾಣ ಹಾಗೂ ಉಡಾನ್ ಯೋಜನೆಗಳು ಹೊಸ ಸಾಧ್ಯತೆಗಳಿಗೆ ಪೂರಕವಾಗಿವೆ. ವಿಮಾನದೊಂದಿಗೆ ಇತರ ಸಾರಿಗೆ ವ್ಯವಸ್ಥೆಯನ್ನೂ ಸಂಪರ್ಕಿಸುವ ಪರಿಪೂರ್ಣ ಸಾರಿಗೆ ವ್ಯವಸ್ಥೆ ಜಾರಿಗೆ ಭಾರತಕ್ಕೆ ಇದು ಸಕಾಲ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ’ ಎಂದರು.

ಟಿ.ವಿ. ಪತ್ರಕರ್ತೆ ರಿತು ಸಿಂಗ್ ಸಂವಾದ ನಡೆಸಿಕೊಟ್ಟರು.

ಭವಿಷ್ಯದಲ್ಲಿ ಚಾಲಕ ರಹಿತ ಮೆಟ್ರೊ:

‘ದೆಹಲಿ ಮೆಟ್ರೊ ಚಾಲಕ ರಹಿತ ರೈಲನ್ನು ಪರಿಚಯಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಮುಂದೆ ಖರೀದಿಸುವ ಎಲ್ಲಾ ಮೆಟ್ರೊ ರೈಲುಗಳು ಚಾಲಕ ರಹಿತ ವ್ಯವಸ್ಥೆಯನ್ನೇ ಹೊಂದಿವೆ. ಹೀಗಾಗಿ ನಮ್ಮ ಮೆಟ್ರೊ ಕೂಡಾ ಇದನ್ನು ಅಳವಡಿಸುವಲ್ಲಿ ಸದಾ ಮುಂದಿರಲಿದೆ’ ಎಂದು ಅಂಜುಮ್ ಪರ್ವೇಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT