ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಟೆಕ್‌ ಸಮ್ಮಿಟ್‌: ಭವಿಷ್ಯದ ತಂತ್ರಜ್ಞಾನಗಳ ಅನಾವರಣ

ಮೂರು ದಿನಗಳ ಬೆಂಗಳೂರು ಟೆಕ್‌ ಸಮ್ಮಿಟ್‌– 25ಕ್ಕೆ ಇಂದು ಮೋದಿ ಚಾಲನೆ
Last Updated 15 ನವೆಂಬರ್ 2022, 20:41 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕವಾಗಿ ಮಹತ್ವ ಪಡೆದಿರುವ ‘ಬೆಂಗಳೂರು ಟೆಕ್‌ಸಮ್ಮಿಟ್‌’ಗೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಬುಧವಾರ ವರ್ಚುವಲ್‌ ಮೂಲಕ ಚಾಲನೆ ನೀಡಲಿದ್ದಾರೆ.

ಬೆಂಗಳೂರು ಟೆಕ್‌ಸಮ್ಮಿಟ್‌ಗೆ ಇದೀಗ ರಜತೋತ್ಸವದ ಸಂಭ್ರಮ. ಇದರ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಸ್ಮರಣಿಕೆಯೊಂದನ್ನು ಬಿಡುಗಡೆ ಮಾಡಲಿದ್ದಾರೆ. ಮೂರು ದಿನಗಳು ನಡೆಯುವ ಸಮಾವೇಶದಲ್ಲಿ ಮುಂದಿನ ತಲೆಮಾರಿನ ಜಾಗತಿಕ ತಂತ್ರಜ್ಞಾನ ಕ್ರಾಂತಿಯ ಬಗ್ಗೆ 75 ಚಿಂತನಾ ಗೋಷ್ಠಿಗಳು ಮತ್ತು ಸಂವಾದಗಳನ್ನು
ಹಮ್ಮಿಕೊಳ್ಳಲಾಗಿದೆ.

ವಂಶವಾಹಿ ತಿದ್ದುಪಡಿ (ಜೀನ್‌ ಎಡಿಟಿಂಗ್‌) ಸಾಧನ ‘ಕ್ರಿಸ್ಪಾರ್’ ಅಭಿವೃದ್ಧಿಪಡಿಸಿದ ನೋಬೆಲ್ ಪಾರಿತೋಷಕ ವಿಜೇತೆ ಫ್ರಾನ್ಸ್‌ನ ಇಮ್ಯಾನ್ಯುಯೆಲ್ ಮೇರಿ ಚಾರ್ಪೆಂಟಿಯರ್‌ ಅವರು ಕ್ರಿಸ್ಪಾರ್‌ ಅಭಿವೃದ್ಧಿಪಡಿಸಲು ಕ್ರಮಿಸಿದ ಹಾದಿ ಮತ್ತು ಜಿನೋಮ್‌ ಎಂಜಿನಿಯರಿಂಗ್‌ ತಂತ್ರಜ್ಞಾನದ ಕುರಿತು ಗುರುವಾರ ಮಾತನಾಡಲಿದ್ದಾರೆ. ಭಾರತದಲ್ಲಿ ತಂತ್ರಜ್ಞಾನದ ಕ್ರಾಂತಿಯ ಬೆಳವಣಿಗೆ ಕುರಿತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಅಜಯ್‌ ಕೆ ಸೂದ್‌ ಅವರು ಬುಧವಾರ ವಿಷಯ ಮಂಡಿಸಲಿದ್ದಾರೆ.

ಕೋವಿಡ್‌ ಬಳಿಕ ನಡೆಯುತ್ತಿರುವ ಟೆಕ್‌ಸಮ್ಮಿಟ್‌ ಸಂಪೂರ್ಣ ಭೌತಿಕ ಸ್ವರೂಪದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಕನಿಷ್ಠ 9 ಒಡಂಬಡಿಕೆಗಳಿಗೆ ಸಹಿ ಮಾಡಲಾಗುವುದು ಮತ್ತು 20 ಕ್ಕೂ ಹೆಚ್ಚು ಉತ್ಪನ್ನಗಳ ಬಿಡುಗಡೆಯೂ ಆಗಲಿದೆ ಎಂದು ಐಟಿ–ಬಿಟಿ ಸಚಿವ ಡಾ.ಕೆ.ಅಶ್ವತ್ಥನಾರಾಯಣ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್‌ ಸಂಸ್ಥಾನದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಖಾತೆ ಸಹಾಯಕ ಸಚಿವ ಒಮರ್‌ ಬಿನ್ ಸುಲ್ತಾನ್ ಅಲ್‌ ಒಲಾಮಾ, ಆಸ್ಟ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್‌ ವ್ಯಾಟ್ಸ್‌, ಫಿನ್ಲೆಂಡಿನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್‌, ಭಾರತದ ಪ್ರಪ್ರಥಮ ಯೂನಿಕಾರ್ನ್‌ ಕಂಪನಿ ‘ಇಮ್ಮೊಬಿ’ ಸಂಸ್ಥಾಪಕ ನವೀನ್‌ ತೆವಾರಿ, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರೋನ್(ವರ್ಚುವಲ್), ಅಮೆರಿಕಾದ ಕಿಂಡ್ರಿಲ್‌ ಕಂಪನಿಯ ಸಿಇಒ ಮಾರ್ಟಿನ್‌ ಶ್ರೋಟರ್‌ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಯಾವ ವಿಷಯಗಳ ಗೋಷ್ಠಿಗಳು:ಕೃತಕ ಬುದ್ಧಿಮತ್ತೆ, ಬಿಗ್‌ ಡೇಟಾ, ಸೆಮಿಕಂಡಕ್ಟರ್‌, ಮಷೀನ್‌ ಲರ್ನಿಂಗ್‌, 5 ಜಿ, ರೋಬೋಟಿಕ್ಸ್‌, ಫಿನ್‌ ಟೆಕ್‌, ಜೀನ್ ಎಡಿಟಿಂಗ್‌, ಮೆಡಿ ಟೆಕ್‌, ಸ್ಪೇಸ್‌ ಟೆಕ್‌, ಜೈವಿಕ ಇಂಧನ ಸುಸ್ಥಿರತೆ, ಇ–ಸಂಚಾರ ಮುಂತಾದವು.

ಪ್ರದರ್ಶನದಲ್ಲಿ ಭಾಗವಹಿಸುವ ದೇಶಗಳು:ಜಪಾನ್‌, ಫಿನ್ಲೆಂಡ್‌, ನೆದರ್ಲೆಂಡ್ಸ್, ಡೆನ್ಮಾರ್ಕ್‌, ಸ್ವೀಡನ್‌, ಸ್ವಿಟ್ಜರ್ಲೆಂಡ್‌, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕಾ, ಲಿಥುವೇನಿಯಾ, ಕೆನಡಾ ಮುಂತಾದವು.

ಜಾಲತಾಣದ ಮೂಲಕ ಬಿತ್ತರ:ಎಲ್ಲಾ ಗೋಷ್ಠಿಗಳು ಸಾಮಾಜಿಕ ಜಾಲತಾಣ www bengalurutech.com ಮೂಲಕ ನೇರವಾಗಿ ಬಿತ್ತರಿಸಲಾಗುವುದು.

ಸಾರ್ವಜನಿಕರಿಗೆ ಮುಕ್ತ ಅವಕಾಶ:ಮೂರು ದಿನಗಳ ಟೆಕ್‌ಸಮ್ಮಿಟ್‌ಗೆ ಪ್ರತಿ ದಿನ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಪ್ರದರ್ಶನಗಳಲ್ಲಿ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT