ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೋರೇಟರ್ ಪತಿ ಸೇರಿ 206 ಮಂದಿ ಬಂಧನ

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಮನೆಗಳಲ್ಲಿ ಅಡಗಿ ಕುಳಿತಿದ್ದ ಆರೋಪಿಗಳು l ಪೊಲೀಸರಿಂದ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ
Last Updated 14 ಆಗಸ್ಟ್ 2020, 23:07 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಸಂಬಂಧ ಕಾರ್ಪೊರೇಟರ್ ಇರ್ಷಾದ್ ಬೇಗಂ ಅವರ ಪತಿ ಕಲೀಂ ಪಾಷಾ, ಕಾಂಗ್ರೆಸ್ ಕಾರ್ಯಕರ್ತ ಫೈರೋಜ್ ಖಾನ್‌ ಸೇರಿದಂತೆ 60 ಮಂದಿಯನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 206ಕ್ಕೆ ಏರಿದೆ.

ಗಲಭೆ ನಡೆದ ಮಂಗಳವಾರ ರಾತ್ರಿಯೇ ವಿಡಿಯೊ ಆಧರಿಸಿ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಂಧನ ಪ್ರಕ್ರಿಯೆ ಮುಂದುವರಿಸಿದ್ದಾರೆ.

ಗುರುವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಮನೆಗಳಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಕೆಲ ಆರೋಪಿಗಳು, ತಮ್ಮ ಮನೆ ಮಹಿಳೆಯರನ್ನು ಅಡ್ಡವಾಗಿಟ್ಟುಕೊಂಡು ಪೊಲೀಸರ ದಿಕ್ಕು ತಪ್ಪಿಸಿದ್ದರು. ಹಲವರು, ‘ಪೊಲೀಸರು ಬಂಧಿಸಲು ಬಂದಿದ್ದಾರೆ. ಮನೆಯಿಂದ ತಪ್ಪಿಸಿಕೊಳ್ಳಿ’ ಎಂದು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ಅವರೆಲ್ಲರೂ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಸಿಕ್ಕಿಬಿದ್ದಿದ್ದಾರೆ.

‘ಆರೋಪಿಗಳ ಬಂಧನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮತ್ತಷ್ಟು ಮಂದಿಯನ್ನು ಬಂಧಿಸಬೇಕಿದೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ಗಲಭೆಗೆ ಪ್ರಚೋದನೆ: ‘ಗಲಭೆ ನಡೆಯಲು ಪ್ರಚೋದನೆ ನೀಡಿದ ಆರೋಪ ಕಲೀಂ ಪಾಷಾ ಮೇಲಿದೆ. ಫೈರೋಜ್‌ ಎಂಬಾತನನ್ನೂ ಬಂಧಿಸಲಾಗಿದ್ದು, ಆತನದ್ದು ಪ್ರಮುಖ ಪಾತ್ರವಿದೆ. ಪ್ರಮುಖ ಮುಖಂಡರೇ ಯುವಕರನ್ನು ಪ್ರಚೋದಿಸಿ ಗಲಭೆಗೆ ಕಾರಣವಾಗಿದ್ದಾರೆ. ಈ ಸಂಬಂಧ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತರನ್ನು ವೈದ್ಯಕೀಯ ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬಂದ ನಂತರ ನ್ಯಾಯಾಲಯದ ಅನುಮತಿ ಪಡೆದು ಕೆಲ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆಯಬೇಕಿದೆ. ನಾಲ್ಕು ವಿಶೇಷ ತಂಡಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿವೆ’ ಎಂದೂ ತಿಳಿಸಿದರು.

‘ಗಲಭೆ ಹಿಂದೆ ರಾಜಕೀಯ ಲೆಕ್ಕಾಚಾರ’: ಗಲಭೆಯ ಹಿಂದೆ ಸ್ಥಳೀಯ ರಾಜಕಾರಣ, ಭಿನ್ನಾಭಿಪ್ರಾಯ ಹಾಗೂ ಮುಂದಿನ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿ, ಎಸ್‌ಡಿಪಿಐ ಪಾತ್ರ ಹಾಗೂ ಕಾರ್ಪೊರೇಟರ್‌ಗಳ ಪಾತ್ರ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ರಾಜಕೀಯ ಭಿನ್ನಾಭಿಪ್ರಾಯವೇ ಹೆಚ್ಚಾಗಿದ್ದಂತೆ ತೋರುತ್ತಿದೆ’ ಎಂದರು.

ಆರೋಪಿ ನವೀನ್‌ಗೆ ರಕ್ಷಣೆ ನೀಡುವ ಸಲುವಾಗಿ ಠಾಣೆಗೆ ಕರೆದುಕೊಂಡು ಬಂದಿರಲಿಲ್ಲ. ಸಂಜೆ 5.40ಕ್ಕೆ ಆತ ಪೋಸ್ಟ್ ಮಾಡಿದ್ದ. 7.30ರಿಂದ 7.40ರ ಅವಧಿಯಲ್ಲಿ ದೂರು ಸಲ್ಲಿಕೆಯಾಗಿತ್ತು. 7.45ಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ವಿಳಂಬ ಆಗಿದ್ದರಿಂದಾಗಿ ಗಲಭೆ ಆಯಿತು ಎಂಬುದು ಶುದ್ಧ ಸುಳ್ಳು. ನವೀನ್‌ನನ್ನು ತಮ್ಮ ಕೈಗೆ ಕೊಡಿ ಎಂದು ಒಂದು ಗುಂಪು ಆಗ್ರಹಿಸಿತು. ಒಂದು ವೇಳೆ ಕೊಟ್ಟಿದ್ದರೆ ಏನಾಗುತ್ತಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಬಹುದು ಎಂದರು.

ಬಾಣಸವಾಡಿ ಎಸಿಪಿ ಮೇಲೂ ಹಲ್ಲೆ
ಡಿ.ಜೆ.ಹಳ್ಳಿ ಠಾಣೆಯಲ್ಲಿ ಬಾಣಸವಾಡಿ ಉಪವಿಭಾಗದ ಎಸಿಪಿ ರವಿಪ್ರಸಾದ್ ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣವು ದಾಖಲಾಗಿದೆ.

ಗಲಭೆ ವೇಳೆ ನಡೆದ ಘಟನೆ ಸಂಬಂಧ ರವಿಪ್ರಸಾದ್ ದೂರು ನೀಡಿದ್ದಾರೆ. ಅದರನ್ವಯ ಆರೋಪಿಗಳ ವಿರುದ್ಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ಅವಹೇಳನಕಾರಿ ಪೋಸ್ಟ್‌ ವಿರುದ್ಧ ದೂರು ನೀಡಲು ಮಂಗಳವಾರ (ಆ. 11) ರಾತ್ರಿ ಠಾಣೆಗೆ ಬಂದಿದ್ದ ಗುಂಪು, ಎಸಿಪಿ ರವಿಪ್ರಸಾದ್ ಅವರ ಸಮವಸ್ತ್ರ ಹಿಡಿದು ಎಳೆದಾಡಿದೆ. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ.ಅದರಿಂದಾಗಿ ಎಸಿಪಿ ಅವರ ಬಲಗೈನ ಬೆರಳಿಗೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂಬ ಸಂಗತಿ ಎಫ್‌ಐಆರ್‌ನಲ್ಲಿದೆ.

ತಂದೆ ಅಂತಿಮ ದರ್ಶನಕ್ಕೆ ಆರೋಪಿಗೆ ಅವಕಾಶ
ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿಸಲಾಗಿದ್ದ ಡಿ.ಜೆ.ಹಳ್ಳಿ ನಿವಾಸಿ ಫರ್ಹಾನ್ ಎಂಬಾತನ ತಂದೆ ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದಾರೆ. ತಂದೆಯ ಅಂತಿಮ ದರ್ಶನ ಪಡೆಯಲು ಆರೋಪಿ ಫರ್ಹಾನ್‌ಗೆ ಪೊಲೀಸರು ಅವಕಾಶ ಮಾಡಿಕೊಟ್ಟರು.

ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರೋಪ ಫರ್ಹಾನ್ ಮೇಲಿದೆ. ಆತನನ್ನು ಪೊಲೀಸರು ಬಂಧಿಸಿದ್ದರು. ಇದರ ನೋವಿನಲ್ಲಿ ತಂದೆಗೆ ಹೃದಯಾಘಾತವಾಗಿತ್ತು.

ವಿಷಯ ತಿಳಿದ ಡಿ.ಜೆ.ಹಳ್ಳಿ ಪೊಲೀಸರು, ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಆರೋಪಿಯನ್ನು ತಂದೆಯ ಅಂತಿಮ ದರ್ಶನಕ್ಕೆ ಕರೆದೊಯ್ದಿದ್ದರು. ಆತನ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು. ಬಳಿಕ, ಆರೋಪಿಯನ್ನು ಠಾಣೆಗೆ ವಾಪಸು ಕರೆತಂದಿದ್ದಾರೆ.

ನಿಷೇಧಾಜ್ಞೆ: ಸಾಮೂಹಿಕ ನಮಾಜ್‌ಗೆ ಅವಕಾಶ ನಿರಾಕರಣೆ
ನಗರದ ಪೂರ್ವ ಹಾಗೂ ಪಶ್ಚಿಮ ವಿಭಾಗದಲ್ಲಿ ಪೊಲೀಸರು ಶುಕ್ರವಾರ ಬಿಗಿ ಭದ್ರತೆ ಕೈಗೊಂಡಿದ್ದರು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ನಮಾಜ್ ಮಾಡಲು ಮಸೀದಿಗಳಿಗೆ ಬಂದಿದ್ದರಿಂದ ಅದರ ಸುತ್ತಮುತ್ತಲೂ ಭದ್ರತೆಗೆ ಒತ್ತು ನೀಡಲಾಗಿತ್ತು.

ಗಲಭೆ ನಡೆದಿದ್ದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹೀಗಾಗಿ, ಈ ವ್ಯಾಪ್ತಿಯ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‍ಗೆ ಪೊಲೀಸರು ಅವಕಾಶ ನೀಡಲಿಲ್ಲ. ಮೌಲ್ವಿಗಳು ಮಾತ್ರ ಮಸೀದಿಗಳಿಗೆ ಬಂದು ನಮಾಜ್ ಮಾಡಿದರು.

‘ಜನರು ಹೆಚ್ಚು ಸೇರಿದರೆ ಪುನಃ ಗಲಭೆ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಹಾಗೂ ನಿಷೇಧಾಜ್ಞೆ ಜಾರಿಯಲ್ಲಿದ್ದರಿಂದ ಸಾಮೂಹಿಕ ನಮಾಜ್‌ಗೆ ಅವಕಾಶ ನೀಡದಿರಲು ತೀರ್ಮಾನ ಕೈಗೊಳ್ಳಲಾಗಿತ್ತು’ ಎಂದು ಪೊಲೀಸರು ಹೇಳಿದರು.

ಕ್ಷಿಪ್ರ ಕಾರ್ಯಪಡೆ, ಸಿಎಆರ್, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 1,500ಕ್ಕೂ ಹೆಚ್ಚು ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗಿದರು. ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು.

ಕಮಿಷನರ್ ಭೇಟಿಯಾದ ಶಾಸಕ; ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನು ಭೇಟಿಯಾದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ‘ನನಗೆ ಹಾಗೂ ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ರಕ್ಷಣೆಗಾಗಿ ಅಗತ್ಯ ಪೊಲೀಸ್ ಭದ್ರತೆ ಒದಗಿಸಬೇಕು’ ಎಂದು ಕೋರಿದರು.
**
ಗಲಭೆ ಹಿಂದೆ ರಾಜಕೀಯ ಲೆಕ್ಕಾಚಾರ: ಬೊಮ್ಮಾಯಿ
ಬೆಂಗಳೂರು:
ಗಲಭೆಯ ಹಿಂದೆ ಸ್ಥಳೀಯ ರಾಜಕಾರಣ, ಭಿನ್ನಾಭಿಪ್ರಾಯ ಹಾಗೂ ಮುಂದಿನ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಎಸ್‌ಡಿಪಿಐ ಪಾತ್ರ ಹಾಗೂ ಕಾರ್ಪೊರೇಟರ್‌ಗಳ ಪಾತ್ರ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ರಾಜಕೀಯ ಭಿನ್ನಾಭಿಪ್ರಾಯವೇ ಹೆಚ್ಚಾಗಿದ್ದಂತೆ ತೋರುತ್ತಿದೆ. ಗಲಭೆಕೋರರ ಹಿಂದಿನ ಇತಿಹಾಸಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಲಾಗಿರುವ ನವೀನ್‌ನನ್ನು ರಕ್ಷಣೆ ನೀಡುವ ಸಲುವಾಗಿ ಠಾಣೆಗೆ ಕರೆದುಕೊಂಡು ಬಂದಿರಲಿಲ್ಲ. ಸಂಜೆ 5.40ಕ್ಕೆ ಆತ ಪೋಸ್ಟ್ ಮಾಡಿದ್ದ. 7.30ರಿಂದ 7.40ರ ಅವಧಿಯಲ್ಲಿ ದೂರು ಸಲ್ಲಿಕೆಯಾಗಿತ್ತು. 7.45ಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ವಿಳಂಬ ಆಗಿದ್ದರಿಂದಾಗಿ ಗಲಭೆ ಆಯಿತು ಎಂಬುದು ಶುದ್ಧ ಸುಳ್ಳು. ನವೀನ್‌ನನ್ನು ತಮ್ಮ ಕೈಗೆ ಕೊಡಿ ಎಂದು ಒಂದು ಗುಂಪು ಆಗ್ರಹಿಸಿತು. ಅದಕ್ಕೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಒಂದು ವೇಳೆ ಕೊಟ್ಟಿದ್ದರೆ ಏನಾಗುತ್ತಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT