ಶನಿವಾರ, ಡಿಸೆಂಬರ್ 3, 2022
20 °C
ವಿದ್ಯುತ್‌ ಶುಲ್ಕ ಪಾವತಿಸಲು ಸೂಚನೆ

ಬಿಡಿಎ, ಬಿಬಿಎಂಪಿ, ಜಲಮಂಡಳಿಗೆ ಬೆಸ್ಕಾಂ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಟ್ಯಂತರ ರೂಪಾಯಿ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿರುವ ಜಲಮಂಡಳಿ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ಬಿಡಿಎ, ನಗರಸಭೆ ಮತ್ತು ಗ್ರಾಮಪ‍ಂಚಾಯಿತಿಗಳಿಗೆ ಬೆಸ್ಕಾಂನ ಹೆಬ್ಬಾಳ ಮತ್ತು ಜಾಲಹಳ್ಳಿ ವಿಭಾಗಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಪ್ರತ್ಯೇಕ ನೋಟಿಸ್‌ ಜಾರಿಗೊಳಿಸಿದ್ದಾರೆ.

ಬೆಸ್ಕಾಂನ ಹೆಬ್ಬಾಳ ವಿಭಾಗದ ವ್ಯಾಪ್ತಿಗೆ ಬರುವ ಉಪ ವಿಭಾಗಗಳಾದ ಗಂಗಾನಗರ, ಕಾವಲಬೈರಸಂದ್ರ, ಯಲಹಂಕ ಮತ್ತು ಸಹಕಾರನಗರ ಉಪ ವಿಭಾಗಗಳಿಗೆ ಜಲಮಂಡಳಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರು ಸರಬರಾಜು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್‌ ಬಾಕಿ ಸೆಪ್ಟೆಂಬರ್‌ ಅಂತ್ಯಕ್ಕೆ ₹131.18 ಕೋಟಿ ಆಗಿದ್ದು, ಶೀಘ್ರ ಬಾಕಿ ಪಾವತಿಸುವಂತೆ ಹೆಬ್ಬಾಳ ಕಾರ್ಯನಿರ್ವಾಹಕ ಎಂಜಿನಿಯರ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.

ನಾಲ್ಕೂ ಉಪ ವಿಭಾಗಗಳಿಗೆ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿರುವ ಸರ್ಕಾರಿ ಸಂಸ್ಥೆಗಳ ಪೈಕಿ ಜಲಮಂಡಳಿ ಅತಿ ಹೆಚ್ಚು ₹65.09 ಕೋಟಿ ಬಾಕಿ ಇರಿಸಿಕೊಂಡಿದ್ದು, ಬಿಬಿಎಂಪಿ ನೀರು ಸರಬರಾಜು ವಿಭಾಗ ₹54.53 ಕೋಟಿ ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿದೆ.

ಜಾಲಹಳ್ಳಿ ವಿಭಾಗ: ಹಾಗೆಯೇ ಬೆಸ್ಕಾಂನ ಜಾಲಹಳ್ಳಿ ವಿಭಾಗ ವ್ಯಾಪ್ತಿಯ ಉಪ ವಿಭಾಗಗಳಾದ ಜಾಲಹಳ್ಳಿ
(ಸಿ 3),ವಿದ್ಯಾರಣ್ಯಪುರ (ಸಿ-9), ಮತ್ತು ಸೋಲದೇವನಹಳ್ಳಿ ( ಎನ್‌ -9) ಉಪ ವಿಭಾಗಗಳಿಗೆ ಜಲಮಂಡಳಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ನಗರ ಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರು ಸರಬರಾಜು ಮತ್ತು ಬೀದಿ ದ್ವೀಪ ಸ್ಥಾವರಗಳ ವಿದ್ಯುತ್‌ ಬಾಕಿ ಅಕ್ಟೋಬರ್‌ ಅಂತ್ಯಕ್ಕೆ ₹99.20 ಕೋಟಿ ಪಾವತಿಸಲು ಕೋರಿ ಜಾಲಹಳ್ಳಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ನವೆಂಬರ್‌ 16ರಂದು ನೋಟಿಸ್‌ ಜಾರಿಗೊಳಿಸಿದ್ದಾರೆ.

ವಿದ್ಯುತ್‌ ಬಾಕಿಯನ್ನು ಏಳು ದಿನಗಳ ಒಳಗೆ ಬೆಸ್ಕಾಂಗೆ ಪಾವತಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು