ಎಮ್ಮೆ ಮೇಲೆ ಬಂದರು, ಕಾರಿಗೆ ಹಗ್ಗ ಕಟ್ಟಿ ಎಳೆದರು

7

ಎಮ್ಮೆ ಮೇಲೆ ಬಂದರು, ಕಾರಿಗೆ ಹಗ್ಗ ಕಟ್ಟಿ ಎಳೆದರು

Published:
Updated:
Deccan Herald

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬೀದಿಗಿಳಿದಿದ್ದ ಹೋರಾಟಗಾರರು, ಎಮ್ಮೆ ಹಾಗೂ ಕುದುರೆ ಏರಿ ನಗರ ಸುತ್ತಿದರು. ಇನ್ನು ಹಲವರು, ಕಾರುಗಳಿಗೆ ಹಗ್ಗ ಕಟ್ಟಿ ಎಳೆದರು.

ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಹಾಗೂ ಹಲವು ಸಂಘಟನೆಗಳ ಪದಾಧಿಕಾರಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಪುರಭವನ ಎದುರು ಸೇರಿದ್ದ ಜೆಡಿಎಸ್‌ ಕಾರ್ಯಕರ್ತರು, ಕುದುರೆ ಮೇಲೆ ಓಡಾಡಿದರು. ಅದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಓಲಾ ಹಾಗೂ ಉಬರ್‌ ಕ್ಯಾಬ್‌ ಚಾಲಕರು, ತಮ್ಮ ವಾಹನಗಳಿಗೆ ಹಗ್ಗ ಕಟ್ಟಿ ಎಳೆದರು.

ಕನ್ನಡ ಚಳವಳಿ ವಾಟಾಳ ಪಕ್ಷದ ಮುಖಂಡ ವಾಟಾಳ್ ನಾಗರಾಜ್, ಎಮ್ಮೆ ಮೇಲೆ ಕುಳಿತು ಮೆಜೆಸ್ಟಿಕ್‌ ಕೆಂಪೇಗೌಡ ಕೇಂದ್ರ ನಿಲ್ದಾಣ ಸುತ್ತಿದರು. ‘ಯಾರೇ ಕೂಗಾಡಲಿ, ಊರೇ ಹೋರಾಡಲಿ, ಪೆಟ್ರೋಲ್ ಬೆಲೆ ಇಳಿಸುವವರೆಗೂ ಹೋರಾಟ ನಿಲ್ಲದು’ ಎಂದು ಹಾಡು ಹೇಳಿದರು.  

ಇನ್ನೊಂದೆಡೆ ಕಾರುಗಳಿಗೆ ಹಗ್ಗ ಕಟ್ಟಿ ಮೇಖ್ರಿ ವೃತ್ತದಿಂದ ಚಾಲುಕ್ಯ ವೃತ್ತದವರೆಗೂ ಎಳೆದು ತಂದ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು, 25 ಕಾರ್ಯಕರ್ತರನ್ನು ವಶಕ್ಕೆ ಪಡೆದು ಸಂಜೆ ಬಿಡುಗಡೆ ಮಾಡಿದರು.  

ಟೋಲ್ ಬಳಿ ರಸ್ತೆ ತಡೆ: ಬೆಳಿಗ್ಗೆ 8 ಗಂಟೆಗೆ ಬಳ್ಳಾರಿ ರಸ್ತೆಯಲ್ಲಿರುವ ಟೋಲ್‌ ಬಳಿ ಸೇರಿದ್ದ ಓಲಾ, ಉಬರ್‌ ಹಾಗೂ ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರು, ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಅದರಿಂದಾಗಿ 15 ನಿಮಿಷಗಳವರೆಗೆ ವಾಹನಗಳ ಓಡಾಟ ಸ್ಥಗಿತಗೊಂಡಿತ್ತು.

ಪೊಲೀಸರು, ಪ್ರತಿಭಟನಾನಿರತ ಚಾಲಕರನ್ನು ಚದುರಿಸಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. 

ಇನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೂ ಬಂದ್‌ ಬಿಸಿ ತಟ್ಟಿತು. ಬೆಳಿಗ್ಗೆಯಿಂದ ನಿಲ್ದಾಣದಲ್ಲಿ ಟ್ಯಾಕ್ಸಿಗಳ ಓಡಾಟವೇ ಇರಲಿಲ್ಲ. ಕೆಲವು ಪ್ರಯಾಣಿಕರು, ಖಾಸಗಿ ವಾಹನಗಳಲ್ಲಿ ಸಂಚರಿಸಿದರು. ಉಳಿದವರು, ಮಧ್ಯಾಹ್ನ 2 ಗಂಟೆಯವರೆಗೆ ಕಾದು ಟ್ಯಾಕ್ಸಿಯಲ್ಲಿ ಪ್ರಯಾಣಿಸಿದರು. 

ಮಾನವೀಯತೆ ಮರೆದರು: ಬಂದ್‌ನಿಂದಾಗಿ ಹಲವು ಹೋಟೆಲ್‌ಗಳ ಬಾಗಿಲು ಮುಚ್ಚಲಾಗಿತ್ತು. ಮೆಜೆಸ್ಟಿಕ್‌ನಲ್ಲಿ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿದ್ದವರಿಗೆ ಬೀದಿಬದಿ ವ್ಯಾಪಾರಿಗಳು, ಆಹಾರ ನೀಡಿ ಮಾನವೀಯತೆ ಮೆರೆದರು.

ಆಟೊ ಚಾಲಕ ಮಹದೇವ ಎಂಬುವರು ಸಾರ್ವಜನಿಕರ ಸಂಚಾರಕ್ಕೆ ಸಹಾಯ ಮಾಡಿದರು. ವಾಹನಗಳಿಲ್ಲದ ರಸ್ತೆಗಳಲ್ಲಿ ಓಡಾಡಿದ ಮಹದೇವ ಅವರು ರೋಗಿಗಳು, ಗರ್ಭಿಣಿಯರು ಮತ್ತು ಅಂಗವಿಕಲರನ್ನು ಹತ್ತಿಸಿಕೊಂಡು ನಿಗದಿತ ಸ್ಥಳಗಳಿಗೆ ಬಿಟ್ಟುಬಂದರು. 

ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್‌: ಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯರ್ತರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಅದೇ ವೇಳೆಯೇ ವಾಹನಗಳ ದಟ್ಟಣೆ ಉಂಟಾಯಿತು. ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌, ದಟ್ಟಣೆಯಲ್ಲಿ ಸಿಲುಕಿತ್ತು. ಪ್ರತಿಭಟನಾಕಾರರೇ ಅದರ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !