ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಬುತ್ತಿಯ ಮೆಲುಕು

ಆತ್ಮಕಥೆಯಾಚೆ ಬದುಕು–ಬವಣೆ ಬಿಚ್ಚಿಟ್ಟ ಲೇಖಕಿಯರು
Last Updated 13 ಜನವರಿ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಲೇಜಿನಲ್ಲಿ ಓದುತ್ತಿದ್ದಾಗ ಹಣೆಗೆ ಕುಂಕುಮ ಹಚ್ಚುವುದಿಲ್ಲ ಎಂಬ ಕಾರಣಕ್ಕೆ ಬೈಯುತ್ತಿದ್ದ ಮೇಷ್ಟ್ರನ್ನು ಹೆದರಿಸಲೆಂದೇ ದೊಡ್ಡ ಕುಂಕುಮ ಹಚ್ಚಲು ಶುರುಮಾಡಿದೆ. ಕಾಸಗಲದ ಕುಂಕುಮ, ಕೈ ತುಂಬಾ ಬಳೆ ತೊಡಲಾರಂಭಿಸಿದೆ...’

ತಮ್ಮ ಹಣೆಯನ್ನಲಂಕರಿಸಿದ್ದ ಬಿಂದಿಯ ಹಿಂದಿನ ಕತೆಯನ್ನು ವರ್ಣಿಸುತ್ತಲೇ ಲೇಖಕಿ ಭಾರ್ಗವಿ ನಾರಾಯಣ್‌ ಆತ್ಮಕಥೆ‘ನಾನು ಭಾರ್ಗವಿ’ಯಲ್ಲಿ ಹಿಡಿದಿಟ್ಟ ಹಳೆಯ ದಿನಗಳನ್ನು ಒಂದೊಂದಾಗಿ ಮೆಲುಕು ಹಾಕಿದರು.

ಸುಚಿತ್ರ ಫಿಲಂ ಸೊಸೈಟಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಸಾಹಿತ್ಯ ಸಂಜೆ ಹೊಸ ಓದು’ ‘ಮಹಿಳಾ ಆತ್ಮಕಥೆಗಳು: ಸಾಧ್ಯತೆ ಮತ್ತು ಸವಾಲು’ ಕುರಿತ ಮಾತುಕತೆಯಲ್ಲಿ ಅವರು ತಮ್ಮ ಬದುಕಿನ ಸಿಹಿ–ಕಹಿ ಅನುಭವಗಳನ್ನು ಹಂಚಿಕೊಂಡರು.

‘ಗಂಡು ಪಾತ್ರಗಳನ್ನೆ ಮಾಡಿಕೊಂಡು ಬಂದ ನಾನು, ಗಂಡುಬೀರಿ ಎಂದೇ ಖ್ಯಾತಿ ಪಡೆದಿದ್ದೆ. ಮೇಕಪ್‌ ಮ್ಯಾನ್‌ ನಾಣಿ ಹಾಗೂ ನಾನು ನಾಟಕವೊಂದರಲ್ಲಿ ಗಂಡ– ಹೆಂಡತಿಯ ಪಾತ್ರ ಮಾಡಿದ್ದೆವು. ಆರಂಭಕ್ಕೂ ಮುನ್ನ, ‘ನಾವಿಬ್ಬರೂ ಇಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಗಂಡ –ಹೆಂಡಿರೇ’ ಎಂದೂ ಅವರು ಘೋಷಿಸಿದ್ದರು. ನಾನು ಒಪ್ಪಿಗೆ ನೀಡಿರಲಿಲ್ಲ. ಆದರೆ, ಘೋಷಣೆ ಮಾಡಿದ್ದಾರಲ್ಲ ಎಂಬ ಕಾರಣಕ್ಕೆ ಮದುವೆಯಾದೆ. ದಾಂಪತ್ಯ ಜೀವನ ಕಳೆಯುತ್ತಿದ್ದಂತೆ ಅನ್ನಿಸಿತು; ಒಳ್ಳೆಯವರ ಕೈಯನ್ನೆ ಹಿಡಿದಿರುವೆ’ ಎನ್ನುತ್ತ ನೆನಪುಗಳನ್ನು ಬಿಚ್ಚಿಟ್ಟರು ಭಾರ್ಗವಿ ನಾರಾಯಣ್‌.

‘ಮಹಿಳೆಯರ ಆತ್ಮಕಥೆಗಳಲ್ಲಿ ಅನುಭವಗಳ ‍ಪ್ರಸ್ತಾಪ ಮುಖ್ಯವೆ ಹೊರತು ವ್ಯಕ್ತಿಯ ಹೆಸರುಗಳಲ್ಲ. ಭಾರ್ಗವಿ ನಾರಾಯಣ್‌, ವಿಜಯ (ಕುದಿ ಎಸರು) ಹಾಗೂ ನನ್ನ(ಅನುದಿನದ ಅಂತರಗಂಗೆ) ಆತ್ಮಕಥೆಗಳಲ್ಲಿ ಸಾಮ್ಯತೆ, ವಿಭಿನ್ನತೆಯನ್ನು ಕಾಣಬಹುದು’ ಎಂದು ಲೇಖಕಿ ಪ್ರತಿಭಾ ನಂದಕುಮಾರ್‌ ತಿಳಿಸಿದರು.

ಲೇಖಕಿ ವಿಜಯಮ್ಮ, ‘ಅತ್ಯಾಚಾರ, ಆಕ್ರಮಣಗಳಾದಾಗ, ‘ಅಯ್ಯೋ... ನಾ ಕಳೆದುಕೊಂಡೆ, ನಾನೆಲ್ಲ ಕಳೆದುಕೊಂಡೆ’ ಎಂದು ಗೋಳಾಡಿ ಕಣ್ಣೀರಿಡದೆ, ‘ನಾನಷ್ಟೇ ಕಳೆದುಕೊಂಡಿಲ್ಲ, ನೀನೂ ಕಳೆದುಕೊಂಡಿರುವೆ ಹೋಗಯ್ಯೋ...’ ಎಂದು ಉತ್ತರಿಸುವ ಗಟ್ಟಿತನ ನಮ್ಮಲ್ಲಿರಬೇಕು. ನಮ್ಮ ಕಾಲದಲ್ಲಿ ಇಂತಹ ಎಷ್ಟೋ ‘ಮೀಟೂ’ಅನುಭವಗಳಾಗಿವೆ. ಅವುಗಳನ್ನೆಲ್ಲ ಸಹಿಸದೆಯೇ ಬೇರೆ ದಾರಿಯಿರಲಿಲ್ಲ. ಅವನ್ನೆಲ್ಲ ದಿಟ್ಟತನದಿಂದ ಎದುರಿಸುತ್ತಾ ಬಂದಿದ್ದೇವೆ’ ಎಂದರು.

‘ಇಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದರೆ, ಒಳಕೋಣೆಯೊಳಗೆ ನಡೆದ ಘಟನೆಗಳ ವಿವರಣೆಯಾಗಲಿ, ಸಾಕ್ಷ್ಯಗಳನ್ನಾಗಲಿ ಹೆಣ್ಣು ಹೇಗೆ ತಾನೇ ಕೊಡಬಲ್ಲಳು’ ಎಂದು ಪ್ರಶ್ನಿಸಿದರು.

‘ಆತ್ಮಕಥೆಯಲ್ಲಿ ಬದುಕಿನ ಕ್ಷಣಗಳನ್ನುಚೌಕಟ್ಟಿನಲ್ಲಿ ಜೋಡಿಸುವುದು, ಸತ್ಯ ಸಂಗತಿಗಳ ಬರವಣಿಗೆಅತಿ ಮುಖ್ಯ. ನನ್ನ ಆತ್ಮಕಥೆ ಬರೀ ನನ್ನ ಕಥೆಯಲ್ಲ, ಇದು ದನಿ ಕಳೆದುಕೊಂಡವರ ಬದುಕಿನ ಕಥೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT