ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷದಿಂದ ಕೇರಳಕ್ಕೆ ಬಯಾಪ್ಸಿ ಮಾದರಿ ಮಾರಾಟ: ತನಿಖೆ ಚುರುಕು

Published 23 ಜನವರಿ 2024, 15:33 IST
Last Updated 23 ಜನವರಿ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ರೋಗಿಗಳ ಮಿದುಳು ಟ್ಯೂಮರ್‌ ಬಯಾಪ್ಸಿ ಮಾದರಿಗಳನ್ನು ಕದ್ದು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣದ ತನಿಖೆಯನ್ನು ಸಿದ್ದಾಪುರ ಪೊಲೀಸರು ಚುರುಕುಗೊಳಿಸಿದ್ದಾರೆ.

ನಿಮ್ಹಾನ್ಸ್‌ ಆಸ್ಪತ್ರೆಯ ರಿಜಿಸ್ಟ್ರಾರ್‌ ಡಾ.ಶಂಕರ್‌ ನಾರಾಯಣ್ ರಾವ್ ಅವರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ, ಆರೋಪಿಗಳಾದ ನಿಮ್ಹಾನ್ಸ್‌ನ ಟೆಕ್ನಿಷಿಯನ್ ಎಂ.ಆರ್.ಚಂದ್ರಶೇಖರ್, ಶವಾಗಾರದ ಸಹಾಯಕ ಎಸ್.ಅಣ್ಣಾ ದೊರೈ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

‘ಆರೋಪಿಗಳು, ಎರಡು ವರ್ಷಗಳಿಂದ ಕೇರಳದ ರಘುರಾಮ್ ಹಾಗೂ ಇತರರಿಗೆ ಬಯಾಪ್ಸಿ ಮಾರಾಟ ಮಾಡಿರುವುದು ಗೊತ್ತಾಗಿದೆ. ರಘುರಾಮ್‌ ಎಂಬಾತ ಕೇರಳದಲ್ಲಿ ಏಜೆಂಟ್ ಆಗಿದ್ದ. ಆರೋಪಿಗಳಿಂದ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬೇಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಿದುಳು ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಇಂಥ ರೋಗಿಗಳ ಮಿದುಳು ಟ್ಯೂಮರ್(ಗಡ್ಡೆ) ಬಯಾಪ್ಸಿ ಮಾದರಿಗಳನ್ನು ಸಂಗ್ರಹಿಸುವ ವೈದ್ಯರು, ಶವಾಗಾರದಲ್ಲಿ ಇರಿಸುತ್ತಿದ್ದಾರೆ. ಪ್ರತಿವರ್ಷ ಅಂದಾಜು 1 ಸಾವಿರಕ್ಕೂ ಹೆಚ್ಚು ಬಯಾಪ್ಸಿ ಮಾದರಿ ಪಡೆದು ಶವಾಗಾರದಲ್ಲಿ ಸಂಗ್ರಹಿಸಲಾಗುತ್ತದೆ. ಇಂತಹ ಬಯಾಪ್ಸಿ ಮಾದರಿಗಳನ್ನೇ ಆರೋಪಿಗಳು ಕದ್ದು ಮಾರಾಟ ಮಾಡುತ್ತಿದ್ದರು. 

ಆರೋಪಿಗಳು ಮೊದಲ ಹಂತದಲ್ಲಿ ವಿಚಾರಣೆ ಮುಗಿದಿದೆ. ಅವರು ನೀಡಿದ ಮಾಹಿತಿ ಆಧರಿಸಿ, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಕೇರಳದ ಖಾಸಗಿ ಮೆಡಿಕಲ್‌ ಕಾಲೇಜು ಸೇರಿದಂತೆ ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲವರ ಪಾತ್ರ?: ‌‘ಬಯಾಪ್ಸಿ ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರ ಪಾತ್ರವಿರುವುದು ಕಂಡುಬಂದಿದೆ. ಅವರ ವಿಚಾರಣೆ ಸಹ ನಡೆಸಲಾಗುವುದು. ಎಫ್‌ಐಆರ್‌ ದಾಖಲಾದ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ. ಲೆಕ್ಕಪರಿಶೋಧನೆ ವರದಿ ಸಲ್ಲಿಕೆ ಮಾಡುವಂತೆ ನಿಮ್ಹಾನ್ಸ್‌ಗೆ ಕೇಳಲಾಗಿತ್ತು. ವರದಿ ಇನ್ನೂ ನಮ್ಮ ಕೈಸೇರಿಲ್ಲ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT