ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ ಕಾಯಿನ್ ‘ಅಡ್ರೆಸ್’ ಜಾಡು ಬೆನ್ನತ್ತಿದ ಎಸ್‌ಐಟಿ

* ಅಕ್ರಮ ವಹಿವಾಟು ಪತ್ತೆಗೆ ಪ್ರಯತ್ನ * ಪುರಾವೆ ಸಂಗ್ರಹ ಸವಾಲು
Published 14 ಜುಲೈ 2023, 20:37 IST
Last Updated 14 ಜುಲೈ 2023, 20:37 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್ ಕಾಯಿನ್ (ಬಿಟಿಸಿ) ಅಕ್ರಮ ವಹಿವಾಟು ನಡೆದಿರುವ ನೂರಾರು ‘ಯೂನಿಕ್ ಅಡ್ರೆಸ್’ಗಳ ಜಾಡು ಹಿಡಿದಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಪ್ರಕರಣಕ್ಕೆ ಅಗತ್ಯವಿರುವ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸುತ್ತಿದೆ.

ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಇತರರ ವಿರುದ್ಧ ಕಾಟನ್‌ಪೇಟೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ಪುರಾವೆಗಳನ್ನು ಸಂಗ್ರಹಿಸಲು ನುರಿತ ಸಿಬ್ಬಂದಿಯ ತಂಡ ರಚಿಸಿದ್ದಾರೆ.

ಕಾಟನ್‌ಪೇಟೆ ಪ್ರಕರಣದ ಕಡತಗಳನ್ನು ಪಡೆದಿರುವ ಸಿಬ್ಬಂದಿ, ಅದರ ತಾಂತ್ರಿಕ ಸಂಗತಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಹಣ ವಿನಿಮಯ ಕಂಪನಿಗಳು, ಇತರೆ ಸಂಸ್ಥೆಗಳ ಮೂಲಕ ನಡೆದಿರುವ ವ್ಯವಹಾರದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.

ಡಾರ್ಕ್‌ನೆಟ್ ಮೂಲಕವೂ ಬಿಟ್ ಕಾಯಿನ್ ವರ್ಗಾವಣೆ ಆಗಿರುವ ಮಾಹಿತಿ ಇದೆ. ಈ ಆಯಾಮದಲ್ಲೂ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ.

ನಿಗೂಢ ಹಣದ ವರ್ಗಾವಣೆಗೆ ‘ಅಡ್ರೆಸ್’ ಪುರಾವೆ:

ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಅಂಕಿಗಳ ರೂಪದಲ್ಲಷ್ಟೇ ನೋಡಲು ಸಿಗುವ ನಾಣ್ಯವೇ ಬಿಟ್ ಕಾಯಿನ್ (ಬಿಟಿಸಿ). 2009ರಲ್ಲಿ ‘ಕ್ರಿಪ್ಟೋಗ್ರಫಿ’ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾದ ಈ ಡಿಜಿಟಲ್ ಕರೆನ್ಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಬಿಟ್ ಕಾಯಿನ್ ವಹಿವಾಟು ಹಾಗೂ ಬಿಟ್‌ ಕಾಯಿನ್‌ಗಳನ್ನು ಆಯಾ ದೇಶದ ಕರೆನ್ಸಿಗಳಿಗೆ ವಿನಿಮಯಕ್ಕಾಗಿ ಹಲವು ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಬಳಕೆದಾರರ ವೈಯಕ್ತಿಕ ಮಾಹಿತಿ ಗೋಪ್ಯವಾಗಿರಿಸಿ ಬಿಟ್ ಕಾಯಿನ್ ವಹಿವಾಟಿಗೆ ‘ಯೂನಿಕ್ ಅಡ್ರೆಸ್‌’ ನೀಡಲಾಗುತ್ತದೆ.

ರಾಜ್ಯದಲ್ಲಿ ನಡೆದಿರುವ ಬಿಟ್ ಕಾಯಿನ್ ಪ್ರಕರಣದಲ್ಲೂ ಯೂನಿಕ್ ಅಡ್ರೆಸ್‌ಗಳು ಸದ್ಯದ ಪುರಾವೆಗಳಾಗಿವೆ. ಇವುಗಳನ್ನು ಬಳಸಿಕೊಂಡು ತನಿಖೆ ಮುಂದುವರಿಸಿರುವ ಎಸ್‌ಐಟಿ, ಆರೋಪಿಗಳ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಹೊರಟಿದೆ.

ಪರಿಣಿತರ ತಂಡ, ಸದ್ಯಕ್ಕೆ ಸಹಾಯ ಬೇಕಿಲ್ಲ: ‘ಪ್ರಕರಣ ಭೇದಿಸಲು ರಚಿಸಿರುವ ಎಸ್‌ಐಟಿ ತಂಡದಲ್ಲಿ ಪರಿಣಿತರು, ತಾಂತ್ರಿಕ ಜ್ಞಾನವುಳ್ಳವರು ಇದ್ದಾರೆ. ಹೀಗಾಗಿ, ಬೇರೆ ದೇಶದವರ ಸಹಾಯ ಸದ್ಯಕ್ಕೆ ಬೇಕಿಲ್ಲ. ಯಾವುದಾದರೂ ಪುರಾವೆಗಳು ಸಿಕ್ಕರೆ, ಅದರ ಬಗ್ಗೆ ಹೆಚ್ಚಿನ ವಿವರಣೆ ಪಡೆಯಲು ಮಾತ್ರ ಸಂಪರ್ಕಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT