ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮೇಲಿನ ದಾಳಿಗೆ ಮಾಧುಸ್ವಾಮಿ ‘ತಡೆಗೋಡೆ’

Last Updated 19 ಜುಲೈ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಾಸಮತ ನಿರ್ಣಯ ಮಂಡನೆಯ ಬಳಿಕ ಎರಡು ದಿನಗಳಿಂದ ದೋಸ್ತಿಗಳ ಚಾಣಾಕ್ಷ ಪಟ್ಟುಗಳು, ಸಭಾಧ್ಯಕ್ಷರ ನಿಗೂಢ ನಡೆಗಳನ್ನು ಅರ್ಥೈಸಿ ಅದಕ್ಕೆ ಸಮರ್ಥ ತಿರುಮಂತ್ರ ಹಾಕುತ್ತಿದ್ದವರು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ.

ವಿಧಾನಸಭೆಯಲ್ಲಿ ಬಿಜೆಪಿಯ ಪಾಲಿಗೆ ರಕ್ಷಕನಂತೆ ಕಾರ್ಯ ನಿರ್ವಹಿಸಿದರು. ಆಡಳಿತ ಪಕ್ಷದ ಸದಸ್ಯರ ಮತ್ತು ಸಭಾಧ್ಯಕ್ಷರ ಪಟ್ಟುಗಳನ್ನು ಬಲ್ಲ ಮಾಧುಸ್ವಾಮಿ ಅದಕ್ಕೆ ತಕ್ಕಂತೆ ತಿರುಗೇಟು ನೀಡುತ್ತಿದ್ದರು. ಇಕ್ಕಟ್ಟಿನ ಸಮಯ ಬಂದಾಗ ವಿರೋಧಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಕಣ್ಣು ಹಾಯಿಸುತ್ತಿದುದು ಮಾಧುಸ್ವಾಮಿ ಅವರತ್ತ.

15 ಶಾಸಕರಿಗೆ ವಿಪ್‌ ಅನ್ವಯ ಆಗುತ್ತದೆಯೋ ಇಲ್ಲವೋ ಎಂಬ ವಿಚಾರ ಮತ್ತು ಪಕ್ಷಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಘಟಾನುಘಟಿ ನಾಯಕರು ಮತ್ತು ಸಭಾಧ್ಯಕ್ಷರ ವಾದಗಳಿಗೆ ಅಷ್ಟೇ ಸಮರ್ಥವಾಗಿ ಕಾಲ– ಕಾಲಕ್ಕೆ ತಿರುಗೇಟು ನೀಡಿ ಪಕ್ಷವನ್ನು ಇಕ್ಕಟ್ಟಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ಮಧ್ಯಾಹ್ನ 1.30 ರೊಳಗೆ ಬಹುಮತ ಸಾಬೀತು ಮಾಡಬೇಕು ಎಂದು ಸೂಚಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಕಾನೂನು ಸಚಿವ ಕೃಷ್ಣ ಬೈರೇಗೌಡ ಪ್ರತಿಪಾದಿಸಿದರು. ಅದನ್ನು ಒಪ್ಪದ ಮಾಧುಸ್ವಾಮಿ, ಸರ್ಕಾರ ಬಹುಮತ ಕಳೆದುಕೊಂಡ ಸಂದರ್ಭದಲ್ಲಿ ಬಹುಮತ ಸಾಬೀತು ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ಪ್ರಬಲವಾಗಿ ವಾದಿಸಿದರು.

‘15 ರಿಂದ 20 ಶಾಸಕರಿಗೆ ರಕ್ಷಣೆ ಕೊಡಲು ಆಗುವುದಿಲ್ಲವೆ. ರಕ್ಷಣೆಗಾಗಿ ಅವರು ಮುಂಬೈಗೆ ಹೋಗಿದ್ದಾರೆ. ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಬೆಂಗಳೂರಿಗೆ ಬನ್ನಿ ಎಂದು ಹೇಳಬೇಕಲ್ಲವೆ. ಅವರು ಅಂಜಿ ಬೇರೆ ರಾಜ್ಯಕ್ಕೆ ಹೋದರೆ ರಾಜ್ಯದ ಪ್ರತಿಷ್ಠೆಯ ಪ್ರಶ್ನೆಯೂ ಹೌದು’ ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಎಚ್‌.ಕೆ.ಪಾಟೀಲ ಆಕ್ಷೇಪ ಎತ್ತಿದರು.

‘ಇದು ಗಂಭೀರ ಪ್ರಶ್ನೆ, ಇದಕ್ಕೆ ಸರ್ಕಾರ ಏನು ಹೇಳುತ್ತದೆ’ ಎಂದು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಕುತೂಹಲ ವ್ಯಕ್ತಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಮಾಧುಸ್ವಾಮಿ, ‘ಪೊಲೀಸರನ್ನು ಅಲ್ಲಿಗೆ ಕಳುಹಿಸಲು ನಾವು ಯಾರು? ಶಾಸಕರೇ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಸ್ವತಂತ್ರವಾಗಿ ಇರಲು ಬಯಸಿದ್ದಾರೆ. ಸುಪ್ರೀಂಕೋರ್ಟ್‌ ಅದಕ್ಕೆ ಅವಕಾಶವೂ ನೀಡಿದೆ. ಅವರೆಲ್ಲರೂ ಬರುವ ತನಕ ಕಲಾಪ ಮುಂದೆ ಹಾಕುತ್ತೇನೆ ಎಂದು ಹೇಳುವುದು ಸರಿಯಲ್ಲ’ ಎಂದರು.‘ನಿಮ್ಮಿಂದ ಇಂತಹ ಉತ್ತರ ಬಯಸಿರಲಿಲ್ಲ’ ಎಂದು ಸಭಾಧ್ಯಕ್ಷ ರಮೇಶ್‌ಕುಮಾರ್‌ ತಣ್ಣಗೆ ಪ್ರತಿಕ್ರಿಯಿಸಿದರು.

ಶುಕ್ರವಾರ ಬೆಳಗ್ಗಿನಿಂದ ಮಾಧುಸ್ವಾಮಿ ಅವರದ್ದು ಒಂದೇ ಪಟ್ಟು, ‘ಇವತ್ತು ಎಷ್ಟೇ ಹೊತ್ತು ಆಗಲಿ. ವಿಶ್ವಾಸ ಮಂಡನೆ ಮುಗಿಸಿಯೇ ತೀರಬೇಕು. ಕಾಲ ಹರಣ ಮಾಡುವುದು ಬೇಡ. ಸಂವಿಧಾನದ ಮುಖ್ಯಸ್ಥರ ಬಗ್ಗೆ ಹುಡುಗಾಟಿಕೆ ಆಡುವುದು ಬೇಡ’.

ಸಭಾಧ್ಯಕ್ಷರು ಮತ್ತು ರಾಜ್ಯಪಾಲರ ಬಳಿಗೆ ಬಿಜೆಪಿ ನಿಯೋಗವನ್ನು ಕಳಿಸುವಾಗ ಅದರ ಮುಂಚೂಣಿಯಲ್ಲಿದ್ದು ‘ಲಾ ಪಾಯಿಂಟ್‌’ಗಳನ್ನು ಸಮರ್ಥವಾಗಿ ಮಂಡಿಸುತ್ತಿದ್ದವರು ಮಾಧುಸ್ವಾಮಿ.ವಿರೋಧ ಪಕ್ಷಕ್ಕೆ ಸಮರ್ಥ ಧ್ವನಿಯಾದರು ಎಂಬ ಮಾತು ಬಿಜೆಪಿ ಸದಸ್ಯರಿಂದಲೇ ಕೇಳಿ ಬಂದಿತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT