ಗುರುವಾರ , ಆಗಸ್ಟ್ 18, 2022
25 °C

ಕಪ್ಪು ಶಿಲೀಂಧ್ರ: ತಿಂಗಳಲ್ಲಿ 128 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಡವಾಗಿ ರೋಗ ಪತ್ತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಪ್ಪು ಶಿಲೀಂಧ್ರ ಸೋಂಕಿಗೆ ಒಂದು ತಿಂಗಳಲ್ಲಿ 128 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 441ಕ್ಕೆ ಏರಿಕೆ ಕಂಡಿದೆ.

ರಾಜ್ಯದಲ್ಲಿ ಕಳೆದ ಜು.19ರ ವೇಳೆಗೆ ಈ ಸೋಂಕಿಗೆ ಮೃತಪಟ್ಟವರ ಸಂಖ್ಯೆ 313ಕ್ಕೆ ತಲುಪಿತ್ತು. ಒಂದು ತಿಂಗಳ ಅವಧಿಯಲ್ಲಿ ಸೋಂಕು ದೃಢ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆಯೇ ಮೃತಪಡುವವರ ಸಂಖ್ಯೆ ಏರಿಕೆ ಕಂಡಿದೆ. ರಾಜ್ಯದ 27 ಜಿಲ್ಲೆಗಳಲ್ಲಿ ಕಪ್ಪು ಶಿಲೀಂಧ್ರ ಮರಣ ಪ್ರಕರಣಗಳು ವರದಿಯಾಗಿವೆ. 

ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ 253 ಮಂದಿಗೆ ಈ ಸೋಂಕು ತಗಲಿರುವುದು ದೃಢಪಟ್ಟಿದೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 3,841ಕ್ಕೆ ತಲುಪಿದೆ. ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ 30ಕ್ಕೂ ಅಧಿಕ ಪ್ರಕರಣಗಳು ಬೆಂಗಳೂರಿನಲ್ಲಿಯೇ ದೃಢಪಟ್ಟಿವೆ. ಈವರೆಗೆ 1,212 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. ಅವರಲ್ಲಿ 149 ಮಂದಿ ಸಾವಿಗೀಡಾಗಿದ್ದಾರೆ.

ಧಾರವಾಡದಲ್ಲಿ 342, ವಿಜಯಪುರದಲ್ಲಿ 228, ಕಲಬುರ್ಗಿಯಲ್ಲಿ 213, ಬಳ್ಳಾರಿಯಲ್ಲಿ 169, ಚಿತ್ರದುರ್ಗದಲ್ಲಿ 165, ಬೆಳಗಾವಿಯಲ್ಲಿ 159, ರಾಯಚೂರಿನಲ್ಲಿ 141, ಮೈಸೂರಿನಲ್ಲಿ 132, ಬಾಗಲಕೋಟೆಯಲ್ಲಿ 131, ದಾವಣಗೆರೆಯಲ್ಲಿ 123, ಕೋಲಾರದಲ್ಲಿ 114 ಹಾಗೂ ದಕ್ಷಿಣ ಕನ್ನಡದಲ್ಲಿ 103 ಸೋಂಕು ದೃಢ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇದೆ.

ರಾಜ್ಯದ 13 ಜಿಲ್ಲೆಗಳಲ್ಲಿ ಮರಣ ಪ್ರಕರಣಗಳ ಸಂಖ್ಯೆ ಎರಡಂಕಿಯಲ್ಲಿದೆ. ಧಾರವಾಡದಲ್ಲಿ 40, ಬಳ್ಳಾರಿಯಲ್ಲಿ 28, ದಕ್ಷಿಣ ಕನ್ನಡದಲ್ಲಿ 25, ಕಲಬುರ್ಗಿಯಲ್ಲಿ 24, ದಾವಣಗೆರೆ ಹಾಗೂ ಮೈಸೂರಿನಲ್ಲಿ  ತಲಾ 20, ಶಿವಮೊಗ್ಗದಲ್ಲಿ 15, ಬಾಗಲಕೋಟೆಯಲ್ಲಿ 13, ರಾಯಚೂರಿನಲ್ಲಿ 12, ಕೋಲಾರ, ಹಾಸನ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ 11 ಹಾಗೂ ಗದಗದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆಯಿದೆ.

‘ಸೋಂಕಿತರಲ್ಲಿ ಕೆಲವರು ತಡವಾಗಿ ಆಸ್ಪತ್ರೆಗೆ ತೆರಳುತ್ತಿರುವುದರಿಂದ ಜೀವಕ್ಕೆ ಅಪಾಯವಾಗುತ್ತಿದೆ. ಸೋಂಕಿತರಾಗುವವರ ಸಂಖ್ಯೆ ಇಳಿಕೆ ಕಂಡಿದೆ. ಕೋವಿಡ್ ಪ್ರಕರಣಗಳು ಇನ್ನಷ್ಟು ನಿಯಂತ್ರಣಕ್ಕೆ ಬಂದಲ್ಲಿ ಈ ಸೋಂಕಿಗೆ ಒಳಗಾಗುವವರ ಸಂಖ್ಯೆ ಕೂಡ ಕಡಿಮೆ ಆಗಲಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು