ಸೋಮವಾರ, ಏಪ್ರಿಲ್ 6, 2020
19 °C
ಡೇರಿ ವೃತ್ತದಲ್ಲಿ ಘಟನೆ

ರಾಸಾಯನಿಕ ಡಬ್ಬಿ ಸ್ಫೋಟ: ಪಾದಚಾರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡೇರಿ ವೃತ್ತ ಸಮೀಪದ ರಂಗದಾಸಪ್ಪ ಲೇಔಟ್‌ನಲ್ಲಿ ಭಾನುವಾರ ರಾಸಾಯನಿಕ ಡಬ್ಬಿಯೊಂದು ಸ್ಫೋಟಗೊಂಡಿದ್ದು, ನರಸಿಂಹಯ್ಯ (48) ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳೀಯ ಚಂದ್ರಪ್ಪನಗರದ ನಿವಾಸಿಯಾದ ನರಸಿಂಹಯ್ಯ, ಕಾಲೇಜೊಂದರ ವಸತಿ ನಿಲಯದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ರಸ್ತೆ ಬದಿಯಲ್ಲಿ ನಡೆದುಕೊಂಡು ತಮ್ಮ ಮನೆಯತ್ತ ಹೋಗುವಾಗ ಈ ಘಟನೆ ನಡೆದಿದೆ. ಅವರ ಕಾಲಿಗೆ ತೀವ್ರ ಗಾಯಗಾಗಿದ್ದು, ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ರಂಗದಾಸಪ್ಪ ಲೇಔಟ್‌ನಲ್ಲಿ ಮೆಟ್ರೊ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಕಟ್ಟಡ ತೆರವು ಮಾಡಿ, ಅವಶೇಷವನ್ನು ರಸ್ತೆ ಬದಿಯಲ್ಲಿ ಹಾಕಲಾಗಿದೆ. ಅದೇ ಜಾಗದಲ್ಲೇ ಕೆಲವರು ಕಸವನ್ನೂ ಎಸೆದಿದ್ದಾರೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹೇಳಿದರು.

‘ಮಾರ್ಬಲ್ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕವಿದ್ದ ಡಬ್ಬಿಯನ್ನು ಯಾರೋ ಸ್ಥಳದಲ್ಲಿ ಎಸೆದು ಹೋಗಿದ್ದರು. ಮಧ್ಯಾಹ್ನ ಬಿಸಿಲು ಹೆಚ್ಚಿದ್ದರಿಂದ ಡಬ್ಬಿ ಕಾದಿತ್ತು. ಅದೇ ಮಾರ್ಗವಾಗಿ ಹೊರಟಿದ್ದ ನರಸಿಂಹಯ್ಯ ಡಬ್ಬಿ ಮೇಲೆ ಕಾಲಿಟ್ಟಿದ್ದರು. ಕ್ಷಣ ಮಾತ್ರದಲ್ಲೇ ಡಬ್ಬಿ ಸ್ಫೋಟಗೊಂಡು ಅವರು ಮೇಲಕ್ಕೆ ಹಾರಿ ಬಿದ್ದರು.

ರಕ್ಷಣೆಗೆ ಬಂದ ಸ್ಥಳೀಯರೇ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ’ ಎಂದು ತಿಳಿಸಿದರು.

‘ಘಟನೆ ಬಗ್ಗೆ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉದ್ದೇಶ ಪೂರ್ವಕವಾಗ ನಡೆದ ಘಟನೆ ಇದಲ್ಲವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಡಬ್ಬಿ ಎಸೆದವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದರು.

ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿನೇಂದ್ರ ಖಣಗಾವಿ ಭೇಟಿ ನೀಡಿ ಪರಿಶೀಲಿಸಿದರು.

ಆತಂಕ ಹುಟ್ಟಿಸಿದ ಸಂದೇಶ
ಆರ್‌ಎಸ್‌ಎಸ್‌ ಮುಖಂಡರ ಹತ್ಯೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಯುವ ಬಗ್ಗೆ ಕೇಂದ್ರ ಗುಪ್ತಚರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸ್ಫೋಟ ಸಂಭವಿಸಿದ್ದರಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹೀಗಾಗಿಯೇ ಪೊಲೀಸ್ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸ್ಫೋಟಗೊಂಡಿದ್ದು ರಾಸಾಯನಿಕ ಡಬ್ಬಿ ಎಂಬುದು ಗೊತ್ತಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟರು. 

*
ಗ್ರಾನೈಟ್ ಕತ್ತರಿಸಲು ಬಳಸುವ ರಾಸಾಯನಿಕ ಡಬ್ಬಿ ಸ್ಫೋಟಗೊಂಡಿದೆ. ಜನರು ಯಾವುದೇ ಗಾಬರಿಪಡುವ ಅಗತ್ಯವಿಲ್ಲ.
-ಭಾಸ್ಕರ್ ರಾವ್, ನಗರ ಪೊಲೀಸ್ ಕಮಿಷನರ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು