ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊಗಾಗಿ ದೇಗುಲ ಸ್ವಾಧೀನ: ವಿರೋಧ

ಬಿಎಂಆರ್‌ಸಿಎಲ್‌ ವಿರುದ್ಧ ಪ್ರತಿಭಟನೆ l ಮಾತು ತಪ್ಪಿದ ನಿಗಮ: ಆರೋಪ
Last Updated 18 ಅಕ್ಟೋಬರ್ 2019, 20:18 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯಡಿ ಆರ್‌.ವಿ. ರಸ್ತೆ-ಬೊಮ್ಮಸಂದ್ರ ನಡುವೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕಾಗಿ ಆಂಜನೇಯ ಸ್ವಾಮಿ ದೇಗುಲ ಸ್ವಾಧೀನಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿರುವುದನ್ನು ವಿರೋಧಿಸಿ, ದೇಗುಲದ ಭಕ್ತರು ಮತ್ತು ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಿಲ್ಕ್‌ ಬೋರ್ಡ್‌ನಿಂದ ಹೊಸೂರು ರಸ್ತೆ ಮೂಲಕ ಬೊಮ್ಮಸಂದ್ರದವರೆಗೆ ಈ ಮಾರ್ಗ ನಿರ್ಮಾಣವಾಗುತ್ತಿದೆ. ದೇವಸ್ಥಾನವು ಈ ಮಾರ್ಗದಲ್ಲಿಯೇ ಬರುತ್ತಿದ್ದು, ಇದನ್ನು ನೆಲಸಮಗೊಳಿಸಲು ನಿಗಮ ಮುಂದಾಗಿದೆ.

ಈ ಮಾರ್ಗದಲ್ಲಿ ಒಟ್ಟು ಮೂರು ಆಂಜನೇಯ ದೇಗುಲಗಳು ಇವೆ. ಈ ಪೈಕಿ ಭಕ್ತರ ಮನವೊಲಿಸಿ ಬೊಮ್ಮನಹಳ್ಳಿಯ ಕಂಬದ ಆಂಜನೇಯ ದೇವಸ್ಥಾನ ತೆರವುಗೊಳಿಸುವಲ್ಲಿ ಬಿಎಂಆರ್‌ಸಿಎಲ್‌ ಯಶಸ್ವಿಯಾಗಿದೆ.ಆದರೆ, ಗಾರ್ವೇಬಾವಿಪಾಳ್ಯ ಮತ್ತು ರೂಪೇನ ಅಗ್ರಹಾರದ ಆಂಜನೇಯಸ್ವಾಮಿ ದೇಗುಲ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

‘ದೇಗುಲವನ್ನು ಸ್ವಾಧೀನಪಡಿಸಿಕೊಳ್ಳದಂತೆ ಮನವಿ ಮಾಡಿದಾಗ ನಿಗಮದ ಅಧಿಕಾರಿಗಳು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಈಗ ಮಾತು ತಪ್ಪಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.

ಮೆಟ್ರೊಗಾಗಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯನ್ನು ಬಳಕೆ ಮಾಡಿರುವುದರಿಂದ ಒಪ್ಪಂದದಂತೆ 30 ಅಡಿಯ ಪರ್ಯಾಯ ಸರ್ವಿಸ್ ರಸ್ತೆ ನಿರ್ಮಿಸಿಕೊಡಬೇಕು. ಜತೆಗೆ, ಈ ರಸ್ತೆಯ ಪಕ್ಕದಲ್ಲಿಯೇ ದೇವಸ್ಥಾನ ನಿರ್ಮಿಸಿಕೊಳ್ಳಲು 18 ಚದರ ಮೀಟರ್ ಅಳತೆಯ ಜಾಗವನ್ನು ನಿಗಮವು ಕಾಯ್ದಿರಿಸಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

‘ದೇವಸ್ಥಾನದ ಗರ್ಭಗುಡಿಯನ್ನು ಸ್ಥಳಾಂತರ ಮಾಡುವುದರಿಂದ ದಿಕ್ಕುಗಳು ಬದಲಾಗುತ್ತವೆ. ಸನಾತನ ಸಂಸ್ಕೃತಿಯಲ್ಲಿ ಇದಕ್ಕೆ ಅವಕಾಶವಿಲ್ಲ, ಆದ್ದರಿಂದ ದೇಗುಲವನ್ನು ವೃತ್ತವನ್ನಾಗಿ ಆಗಿ ಮಾಡಿ ‘U’ ಆಕಾರದಲ್ಲಿ ರಸ್ತೆ ನಿರ್ಮಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಈ ಪ್ರಸ್ತಾವಕ್ಕೆ, ನಿಗಮದ ಅಧಿಕಾರಿಗಳು ಮೊದಲು ಮೌಖಿಕ ಒಪ್ಪಿಗೆ ನೀಡಿದ್ದರು. ಈಗ ಸ್ವಾಧೀನಮಾಡಿಕೊಳ್ಳಲು ಮುಂದಾಗಿರುವುದು ಸರಿಯಲ್ಲ’ ಎಂದು ಅರ್ಚಕ ವಿಠ್ಠಲ್‌ ಅಸಮಾಧಾನ ವ್ಯಕ್ತಪಡಿಸಿದರು.

ನಿಗಮವು ಕಳೆದ ಮೇ 23ರಂದು ದೇಗುಲದ ಪ್ರಸ್ತಾವವನ್ನು ಪತ್ರ ಮುಖೇನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿ ಅಭಿಪ್ರಾಯ ಕೇಳಿತ್ತು. ಆದರೆ, ಇದರ ಮರುದಿನವೇ ಉತ್ತರ ನೀಡಿರುವ ಪ್ರಾಧಿಕಾರವು, ನಿರ್ಮಾಣ ಮಾರ್ಗ ಬದಲಾವಣೆಯಿಂದ ಸಂಚಾರ ದಟ್ಟಣೆ, ಅಪಘಾತ ಹೆಚ್ಚಾಗುವ ಸಾಧ್ಯತೆ ಇದೆ. ತಾಂತ್ರಿಕವಾಗಿ ಈ ಬದಲಾವಣೆ ಸರಿಯಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT