ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೂನ್ ಅಂತ್ಯಕ್ಕೆ ಕೆಂಗೇರಿಯವರೆಗೆ ಮೆಟ್ರೊ ರೈಲು

ಮೈಸೂರು ರಸ್ತೆ ವಿಸ್ತರಿತ ಮಾರ್ಗದಲ್ಲಿ ತಿಂಗಳಲ್ಲಿ ವಾಣಿಜ್ಯ ಸಂಚಾರ ಆರಂಭ ಸಾಧ್ಯತೆ
Last Updated 20 ಮೇ 2021, 16:33 IST
ಅಕ್ಷರ ಗಾತ್ರ

ಬೆಂಗಳೂರು: ’ನಮ್ಮ ಮೆಟ್ರೊ‘ದ ಬಹುನಿರೀಕ್ಷಿತ ವಿಸ್ತರಿತ ಮಾರ್ಗವಾದ ಕೆಂಗೇರಿಯಲ್ಲಿ ಇನ್ನೊಂದು ತಿಂಗಳಲ್ಲಿ ಮೆಟ್ರೊ ರೈಲಿನ ಸದ್ದು ಕೇಳಿ ಬರಲಿದೆ. ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ಜೂನ್‌ ಅಂತ್ಯದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.

ಈ ಮಾರ್ಗದಲ್ಲಿ ಬರುವ ಮೆಟ್ರೊ ನಿಲ್ದಾಣಗಳು ಮತ್ತು ವಾಹನ ನಿಲುಗಡೆ ಸ್ಥಳಗಳನ್ನು ಗುರುವಾರ ಪರಿಶೀಲಿಸಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ ಸಿಂಗ್‌ ಈ ಮಾಹಿತಿ ನೀಡಿದರು.

’ಈ ಮಾರ್ಗ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಆರು ನಿಲ್ದಾಣಗಳ ಪೈಕಿ ಐದರಲ್ಲಿ ಶೇ 90ರಿಂದ ಶೇ 95ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಒಂದು ನಿಲ್ದಾಣದ ಕೆಲಸ ಶೇ 70-75ರಷ್ಟಾಗಿದೆ. ಎಲ್ಲ ಕಾರ್ಯ ಪೂರ್ಣಗೊಳಿಸಲು 30ರಿಂದ 45 ದಿನ ಬೇಕಾಗಬಹುದು. ಜೂನ್ 15-20ರ ವೇಳೆಗೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಆಹ್ವಾನ ನೀಡಲಾಗುವುದು‘ ಎಂದು ತಿಳಿಸಿದರು.

7.53 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು ಆರು ನಿಲ್ದಾಣಗಳು ಹಾಗೂ ವಾಹನ ನಿಲುಗಡೆ ಸ್ಥಳಗಳು ಬರಲಿವೆ.

ಒಟ್ಟು 26 ಕಿ.ಮೀ. ಉದ್ದದ ಮಾರ್ಗ

ಪ್ರಸ್ತುತ ನೇರಳೆ ಮಾರ್ಗವು (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) 18.10 ಕಿ.ಮೀ. ಇದ್ದು, 17 ನಿಲ್ದಾಣಗಳು ಬರುತ್ತವೆ. ಕೆಂಗೇರಿವರೆಗೆ ವಿಸ್ತರಣೆಯಿಂದ ಮಾರ್ಗದ ಉದ್ದ ಸುಮಾರು 26 ಕಿ.ಮೀ. ಆಗುತ್ತದೆ. ಈ ಮಾರ್ಗ ಪೂರ್ಣಗೊಂಡರೆ ನಿತ್ಯ ಸುಮಾರು 75 ಸಾವಿರ ಜನ ಪ್ರಯಾಣಿಸುವ ನಿರೀಕ್ಷೆ ಇದೆ.

ಬೈಯಪ್ಪನಹಳ್ಳಿಯಿಂದ ಕೆಂಗೇರಿಯವರೆಗೆ ಗರಿಷ್ಠ ಪ್ರಯಾಣ ದರ ₹56 ಹಾಗೂ ಕೆಂಗೇರಿಯಿಂದ ರೇಷ್ಮೆ ಸಂಸ್ಥೆಯವರೆಗೆ ₹60 ನಿಗದಿ ಮಾಡುವ ಉದ್ದೇಶವನ್ನು ನಿಗಮ ಹೊಂದಿದೆ.

ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗಿನ15.25 ಕಿ.ಮೀ. ಉದ್ದದ ವಿಸ್ತರಿತ ಮಾರ್ಗದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಹಸಿರು ಮಾರ್ಗವು (ನಾಗಸಂದ್ರ-ರೇಷ್ಮೆ ಸಂಸ್ಥೆ) 30 ಕಿ.ಮೀ. ಇದೆ.

ಭೂಮಿಗೆ ಬೇಡಿಕೆ:ಕೆಂಗೇರಿವರೆಗೆ ಮೆಟ್ರೊ ವಿಸ್ತರಣೆಯಿಂದ ಆ ಮಾರ್ಗದುದ್ದಕ್ಕೂ ಬರುವ ಪ್ರದೇಶಗಳಲ್ಲಿರುವ ಭೂಮಿಗೆ ಬೇಡಿಕೆ ಬರಲಿದೆ. ಅಲ್ಲದೆ, ಈಗಾಗಲೇ ತಲೆಯೆತ್ತಿರುವ ವಸತಿ ಸಮುಚ್ಛಯಗಳು ಮತ್ತು ವಾಣಿಜ್ಯ ಸಮುಚ್ಛಯಗಳಿಗೂ ಬೇಡಿಕೆ ಬರಲಿದೆ.

ಪದೇ ಪದೇ ಗಡುವು ಪರಿಷ್ಕರಣೆ

’2021ರ ಜನವರಿಗೇ ಕೆಂಗೇರಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ನಿಗಮ ಹೇಳಿತ್ತು. ಆದರೆ, ಹಲವು ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಕಳೆದ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ವೇಳೆಗೆ ಸೇವೆಗೆ ಸಿದ್ಧವಾಗಲಿದೆ ಎಂದೂ ಹೇಳಲಾಗಿತ್ತು.

ಈ ರೀತಿ ಹಲವು ಗಡುವುಗಳನ್ನು ಮೈಸೂರು ರಸ್ತೆ-ಕೆಂಗೇರಿ ಮಾರ್ಗ ಮೀರಿದೆ. ಮೂಲ ಗಡುವು 2017 ಆಗಿತ್ತು.

ಈ ಮಾರ್ಗದಲ್ಲಿನ ನಿಲ್ದಾಣಗಳು

* ನಾಯಂಡಹಳ್ಳಿ

*ರಾಜರಾಜೇಶ್ವರಿ ನಗರ

* ಜ್ಞಾನಭಾರತಿ

* ಪಟ್ಟಣಗೆರೆ

* ಕೆಂಗೇರಿ ಬಸ್ ನಿಲ್ದಾಣ

*ಕೆಂಗೇರಿ ಮೆಟ್ರೊ ನಿಲ್ದಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT