ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮನಿರೀಕ್ಷೆಯ ಅಭಾವದಲ್ಲಿ ನರಳುತ್ತಿದ್ದೇವೆ: ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ

‘ಕಸ್ತೂರಬಾ vs ಗಾಂಧಿ’ ಪುಸ್ತಕ ಬಿಡುಗಡೆ
Last Updated 25 ಡಿಸೆಂಬರ್ 2020, 18:16 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಣ್ಣು, ಕಿವಿ ಮುಖ್ಯವಾಗುತ್ತದೆ. ಆದರೆ, ಇದು ನಾಲಿಗೆಯ ಕಾಲವಾಗಿದ್ದು, ಆತ್ಮನಿರೀಕ್ಷೆಯ ಅಭಾವದಲ್ಲಿ ನಾವು ನರಳುತ್ತಿದ್ದೇವೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಆನ್‌ಲೈನ್‌ನಲ್ಲಿ ಶುಕ್ರವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಅವರ ‘ಕಸ್ತೂರಬಾ vs ಗಾಂಧಿ’ ಪುಸ್ತಕ ಬಿಡುಗಡೆಯಾಯಿತು.

‘ಕಣ್ಣು, ಕಿವಿ ಸರಿಯಾಗಿದ್ದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಕೂಡ ಹೆಚ್ಚು ಗಟ್ಟಿಯಾಗಿ, ವಿಸ್ತರಿಸುತ್ತಾ ಹೋಗುತ್ತವೆ. ಆಗ ಆತ್ಮನಿರೀಕ್ಷೆ ಕೂಡ ಬರುತ್ತದೆ. ಒಂದು ವೇಳೆ ಆತ್ಮನಿರೀಕ್ಷೆಯ ಅಭಾವ ಉಂಟಾದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಲಿದೆ. ಗಾಂಧಿ ಮತ್ತು ಕಸ್ತೂರಬಾ ಅವರು ಆತ್ಮನಿರೀಕ್ಷೆ ಹೊಂದಿದ್ದರು. ಆದರೆ, ಆದು ಕೇವಲ ಇಬ್ಬರ ಆತ್ಮನಿರೀಕ್ಷೆ ಆಗಿರಲಿಲ್ಲ. ಬದಲಾಗಿ ಒಟ್ಟು ಪ್ರಜಾಪ್ರಭುತ್ವದ ಆತ್ಮನಿರೀಕ್ಷೆಯಾಗಿತ್ತು’ ಎಂದು ತಿಳಿಸಿದರು.

‘ಇಂದು ಅಪಾರ್ಥಾನಂದರ, ಅಸತ್ಯಾನಂದರ ಕಾಲವಾಗಿದೆ. ಎಲ್ಲ ವಿಷಯಕ್ಕೂ ಅಪಾರ್ಥ ಕಲ್ಪಿಸುವವರನ್ನು ಕಾಣುತ್ತಿದ್ದೇವೆ. ಗಾಂಧಿಯನ್ನು ಸರಿಯಾಗಿ ಓದಿಕೊಳ್ಳದೆ, ಅರ್ಥ ಮಾಡಿಕೊಳ್ಳದೆಯೇ ಕೆಲವರು ಮಾತನಾಡುತ್ತಾರೆ. ಸಾಂಸಾರಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಗಾಂಧೀಜಿ ಹಾಗೂ ಕಸ್ತೂರಬಾ ಅವರು ಯಾವರೀತಿ ಎದುರಿಸುತ್ತಾ ಹೋದರು ಎನ್ನುವುದನ್ನು ವಿವರಿಸುವ ಪ್ರಯತ್ನ ಮಾಡಿದ್ದೇನೆ’ ಎಂದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಲೇಖಕಿ ಕಮಲಾ ಹಂಪನಾ, ‘ಕಾದಂಬರಿಯು ಚಂಪುಕಾವ್ಯದ ರೂಪದಲ್ಲಿದ್ದು, ಸಿನಿಮಾ ಮಾದರಿಯ ಸಂಭಾಷಣೆ ಕಾಣಬಹುದು. ಹೊಸ ಮಾದರಿಯ ಆಕರ್ಷಕ ಬರವಣಿಗೆಯು ಓದುಗರನ್ನು ಸೆರೆಹಿಡಿದುಕೊಳ್ಳುತ್ತದೆ. ಇದು ಚಲನಚಿತ್ರಕ್ಕೆ ಯೋಗ್ಯವಾಗಿದೆ. ಹೆಣ್ಣು ಮಕ್ಕಳಿಗೆ ದಾರಿದೀಪ ಹಾಗೂ ಗಂಡು ಮಕ್ಕಳಿಗೆ ನೀತಿ ಪಾಠ ಆಗಲಿದೆ’ ಎಂದು ತಿಳಿಸಿದರು.

ಸಾಹಿತಿ ಡಾ. ಬಸವರಾಜ ಕಲ್ಗುಡಿ, ‘ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಹೆಣ್ಣು ಎಂಬ ದೊಡ್ಡ ಶಕ್ತಿಯನ್ನು ಕಸ್ತೂರಬಾ ಕಟ್ಟಿದ್ದರು. ಅವರ ಬಗ್ಗೆ ಈಗಾಗಲೇ ಹಲವು ಕೃತಿಗಳು ಬಂದಿದ್ದರೂ ಬರಗೂರು ಅವರು ಸಂಬಂಧಗಳ ಸೂಕ್ಷ್ಮ ಹಾಗೂ ಹೋರಾಟದ ವಿನ್ಯಾಸವನ್ನು ವಿನೂತನ ಬರವಣಿಗೆಯ ತಂತ್ರದ ಮೂಲಕ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT