ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಬೆಂಗಳೂರಿನ ಹೊರಗಿನವರಿಗೆ ಸಿಗದ ಆದ್ಯತೆ'

ಸಾಹಿತಿ ನಾ. ದಾಮೋದರ ಶೆಟ್ಟಿ ಅಭಿಮತ * ‘ತಾರಿ ದಂಡೆ’, ‘ಬದುಕು ಕಟ್ಟಿದ ಬಗೆಗಳು’ ಕೃತಿ ಬಿಡುಗಡೆ
Published 17 ಮಾರ್ಚ್ 2024, 15:46 IST
Last Updated 17 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರಿನವರಿಗೆ ಸಿಕ್ಕಷ್ಟು ಆದ್ಯತೆ ಹೊರಗಿನವರಿಗೆ ದೊರೆಯಲಿಲ್ಲ. ಇದರಿಂದಾಗಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯತ್ತಮ ಕೆಲಸ ಮಾಡಿದ ಘನ ವಿದ್ವಾಂಸರೂ ಅಷ್ಟಾಗಿ ನಾಡಿನ ಜನರಿಗೆ ಪರಿಚಿತರಾಗಿಲ್ಲ’ ಎಂದು ಸಾಹಿತಿ ನಾ. ದಾಮೋದರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು. 

ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಯಂತ ಕಾಯ್ಕಿಣಿ ಅವರ ‘ತಾರಿ ದಂಡೆ’ ಹಾಗೂ ಬಿ.ಎ. ವಿವೇಕ್ ರೈ ಅವರ ‘ಬದುಕು ಕಟ್ಟಿದ ಬಗೆಗಳು’ ಕೃತಿಗಳು ಬಿಡುಗಡೆಯಾದವು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮಾಧ್ಯಮಗಳಿಂದಾಗಿ ಬೆಂಗಳೂರಿನ ಸಾಧಕರು ನಾಡಿನಾದ್ಯಂತ ಪರಿಚಿತರಾಗುತ್ತಾರೆ. ಆದರೆ, ಜಿಲ್ಲೆಗಳಲ್ಲಿನ ಸಾಧಕರ ಬಗ್ಗೆ ಬೆಂಗಳೂರಿಗರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಈ ಸಾಲಿಗೆ ವಿದ್ವಾಂಸ ವಿವೇಕ್ ರೈ ಅವರೂ ಸೇರುತ್ತಾರೆ. ಜಾನಪದ ತಜ್ಞರೂ ಆಗಿರುವ ಅವರು, ಸಾಹಿತ್ಯದ ಜತೆಗೆ ಸಂಘಟನೆ ಹಾಗೂ ಆಡಳಿತದಲ್ಲಿಯೂ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ತುಳು ಸಾಹಿತ್ಯಕ್ಕೆ ಸಂಬಂಧಿಸಿದಂತೆಯೂ ದೊಡ್ಡ ಕೊಡುಗೆ ನೀಡಿದ್ದಾರೆ. ತುಳು ಭಾಷೆಯನ್ನು ಕರ್ನಾಟಕದ ಹೊರಗಡೆ ಕೊಂಡೊಯ್ದವರು ಅವರು’ ಎಂದು ಮೆಚ್ಚುಗೆ ವ್ಯಕ್ತ‍ಪಡಿಸಿದರು. 

ಜಯಂತ ಕಾಯ್ಕಿಣಿ, ‘ಜ್ಞಾನ ಎನ್ನುವುದು ಪ್ರಜ್ಞಾ ಪ್ರವಾಹ ಇದ್ದ ಹಾಗೆ. ಅದನ್ನು ನಿಲ್ಲಿಸದೇ ಹರಿದುಹೋಗಲು ಬಿಡಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಅದೇ ರೀತಿ, ಸಾಮಾಜಿಕ ಋಣ ಅನ್ನುವಂತಹದ್ದು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರಬೇಕು. ಆಗ ಮಾತ್ರ ನಮ್ಮಲ್ಲಿನ ದ್ವೇಷ, ಸಿಟ್ಟು ಕಡಿಮೆಯಾಗುತ್ತದೆ. ಲೇಖಕನಾದವನಿಗೆ ಸಂತೆಯ ಸಲಿಗೆ ಇದ್ದಲ್ಲಿ ಮಾತ್ರ ನಮ್ಮ ಕಲೆಗೆ ಜೀವವಿರುತ್ತದೆ. ನಮಗೆ ಜನರೇ ಬೇಡ ಎಂದರೆ ಸಮಾಜವನ್ನೇ ತಿರಸ್ಕರಿಸಿದ ಹಾಗೆ’ ಎಂದರು.

‘ತಾರಿ ದಂಡೆ’ ಕೃತಿ ಬಗ್ಗೆ ಮಾತನಾಡಿದ ವಿಮರ್ಶಕಿ ವನಮಾಲಾ ವಿಶ್ವನಾಥ್, ‘ಕೃತಿಯು ಮೂರು ಭಾಗಗಳನ್ನು ಹೊಂದಿದೆ. ಮೊದಲ ಭಾಗವು ಬಾಲ್ಯದ ನೆನಪುಗಳನ್ನು ಕಟ್ಟಿಕೊಟ್ಟರೆ, ಎರಡನೇ ಭಾಗವು ವ್ಯಕ್ತಿ ಪರಿಚಯದ ಚಿತ್ರಣಗಳನ್ನು ನೀಡುತ್ತದೆ. ಹಾಗೆಯೇ, ಮೂರನೇ ಭಾಗದಲ್ಲಿ ಕಾಯ್ಕಿಣಿ ಅವರು ತಾವು ಓದಿದ ಪುಸ್ತಕಗಳ ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕವಿ ಹೃದಯವನ್ನೇ ಹೆಚ್ಚಾಗಿ ಕಾಣಿಸುವ ಕಾಯ್ಕಿಣಿಯವರು, ಈ ಕೃತಿಯಲ್ಲಿ ರೂಪಕಗಳ ಮೂಲಕವೂ ಅಲ್ಲಲ್ಲಿ ಕಾಣಸಿಕ್ಕಿದ್ದಾರೆ’ ಎಂದು ಹೇಳಿದರು. 

ರಂಗ ನಿರ್ದೇಶಕ ಸುರೇಶ್ ಆನಗಳ್ಳಿ ಅವರು ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಪುಸ್ತಕ ಪರಿಚಯ  ಪುಸ್ತಕ: ‘ತಾರಿ ದಂಡೆ’ ಲೇಖಕರು: ಜಯಂತ ಕಾಯ್ಕಿಣಿ ಪುಟಗಳು: 212 ಬೆಲೆ: ₹ 250 ಪುಸ್ತಕ: ‘ಬದುಕು ಕಟ್ಟಿದ ಬಗೆಗಳು’ ಲೇಖಕರು: ಬಿ.ಎ. ವಿವೇಕ ರೈ ಪುಟಗಳು: 320 ಬೆಲೆ: ₹ 350 ಎರಡೂ ಪುಸ್ತಕಗಳ ಪ್ರಕಾಶನ: ಅಂಕಿತ ಪುಸ್ತಕ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT