ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಮನವಿಗೆ ಮಣಿದು ಖಳನಾಯಕನಾದೆ: ಸಿದ್ದರಾಮಯ್ಯ ಬೇಸರ

Last Updated 28 ಜುಲೈ 2019, 1:57 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಮಾಜದ ಮುಖಂಡರ ಮನವಿಗೆ ಮಣಿದು,ಕಾರ್ಯಪ್ರವೃತ್ತನಾದ ಪರಿಣಾಮ ಹೊರ ಜಗತ್ತಿನ ಮುಂದೆ ನಾನು ಖಳನಾಯ‌ಕನಾದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸಪ್ನ ಬುಕ್‌ ಹೌಸ್ ಹಾಗೂ ಶರಣ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಅವರ ‘ಲಿಂಗಾಯತ ಕನ್ನಡದ ವಚನಧರ್ಮ’ ಮತ್ತು ‘ವಚನಧರ್ಮ ಅರಿವಿನ ಬೆರಗು’ ಕೃತಿಗಳನ್ನು ಶನಿವಾರ ಬಿಡುಗಡೆಮಾಡಿ ಅವರು ಮಾತನಾಡಿದರು.

‘ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿ ಎಂದು ನನ್ನನ್ನು ಒತ್ತಾಯಿಸಿದ್ದರು.

ಇನ್ನೊಂದೆಡೆಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರು ಲಿಂಗಾಯತವನ್ನು ಮಾತ್ರ ಹಿಂದು ಧರ್ಮದಿಂದ ಪ್ರತ್ಯೇಕವಾಗಿಸುವಂತೆ ಮನವಿ ಮಾಡಿದ್ದರು. ಇದರಿಂದಾಗಿ ಹೈಕೋರ್ಟ್‌ನನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಸಮಿತಿ ರಚಸಿ, ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಆದರೆ, ನಾನೇ ಧರ್ಮವನ್ನು ಒಡೆಯುತ್ತಿದ್ದೇನೆ ಎಂಬಂತೆ ಕೆಲವರು ಬಿಂಬಿಸಿದರು’ ಎಂದರು.

‘ಚುನಾವಣೆಗೆ ಮೊದಲು, ಪ್ರತ್ಯೇಕ ಧರ್ಮಕ್ಕೆ ಒತ್ತಾಯ ಮಾಡುತ್ತಿದ್ದವರೂ ಬಳಿಕ ದೂರ ಸರಿದರು. ಆದರೆ, ಹಿಂದು, ಬೌದ್ಧ, ಜೈನ ಧರ್ಮದಂತೆ ಲಿಂಗಾಯತ ಕೂಡ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು
ಸ್ಪಷ್ಟಪಡಿಸಿದರು.

‘ನಾನು ಲಿಂಗಾಯತ ವಿರೋಧಿ ಧೋರಣೆಯನ್ನು ಎಂದೂ ತಾಳಿಲ್ಲ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೆ. ಅದೇ ರೀತಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಬಸವಣ್ಣನ ಭಾವಚಿತ್ರ ಅಳವಡಿಸಬೇಕೆಂದು ಆದೇಶ ಹೊರಡಿಸಿದ್ದೆ’ ಎಂದು ತಿಳಿಸಿದರು.

‘ಅಂಬೇಡ್ಕರ್ ಅವರು ಸಮಸಮಾಜದ ಕನಸನ್ನು ಹೊಂದಿದ್ದರು. ಬಸವಣ್ಣ ಅವರ ಆಶಯ ಕೂಡ ಅದೇ ಆಗಿತ್ತು. ಬಸವಧರ್ಮವು ವೈದಿಕ ವ್ಯವಸ್ಥೆಗೆ ಪರ್ಯಾಯವಾದದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಕಿದ್ದು ಶರಣರು. ಆದರೆ, ಸಮಾಜ ಸುಧಾರಕರು ಎನಿಸಿಕೊಂಡವರು ಹೆಚ್ಚು ಕಾಲ ಜೀವಿಸದಿರುವುದು ನಮ್ಮ ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿಗಳ ಬಗ್ಗೆ ಮಾತನಾಡಿದ ವಿಮರ್ಶಕಿ ಪ್ರೊ.ಎಂ.ಎಸ್. ಆಶಾದೇವಿ, ‘ಈ ಕೃತಿಗಳಲ್ಲಿ ವಚನಧರ್ಮವನ್ನು ಮರುನಿರೂಪಣೆ ಮಾಡಲಾಗಿದೆ. ಬಿಡುಗಡೆಯ ಮೀಮಾಂಸೆ ಪ್ರತಿಪಾದಿಸುತ್ತಿದ್ದ ವಚನಧರ್ಮವನ್ನು ಒಂದು ಕಡೆ ತರುವ ಪ್ರಯತ್ನ ನಡೆದಿದೆ. ಲಿಂಗಾಯತವು ಕನ್ನಡ ಧರ್ಮವಾಗಿದ್ದು, ಸಮಸಮಾಜದ ಪರಿಕಲ್ಪನೆ ಹೊಂದಿದೆ’ ಎಂದರು.

**

ಪುಸ್ತಕ–ಲಿಂಗಾಯತ ಕನ್ನಡದ ವಚನಧರ್ಮ

ಪ್ರಕಾಶನ–ಸಪ್ನ ಬುಕ್‌ ಹೌಸ್

ಪುಟಗಳು–109

ಬೆಲೆ–₹85

ಪುಸ್ತಕ–ವಚನಧರ್ಮ ಅರಿವಿನ ಬೆರಗು

ಪ್ರಕಾಶನ–ಶರಣ ಸಾಹಿತ್ಯ ಪರಿಷತ್ತು

ಪುಟಗಳು–340

ಬೆಲೆ–₹250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT