ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲುಣಿಸಲು ತಾಯಂದಿರಿಗೆ ಕೇಂದ್ರ: ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣ

ಸಿಎಸ್‌ಆರ್‌ ಅಡಿ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣ
Published 18 ಜೂನ್ 2023, 21:49 IST
Last Updated 18 ಜೂನ್ 2023, 21:49 IST
ಅಕ್ಷರ ಗಾತ್ರ

ಬೆಂಗಳೂರು: ನವಜಾತ ಶಿಶುಗಳಿಗೆ ಹಾಲುಣಿಸಲು ತಾಯಂದಿರು ಅಲೆದಾಡುವುದನ್ನು ತಪ್ಪಿಸಲು ಇಲ್ಲಿನ ಸರ್‌.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕ ಸ್ತನ್ಯಪಾನ ಕೇಂದ್ರಗಳನ್ನು ನಿರ್ಮಿಸಲಾಗಿದೆ. 

ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಚೈಲ್ಡ್ ಹೆಲ್ಪ್ ಫೌಂಡೇಷನ್ ಎರಡು ಕೇಂದ್ರಗಳನ್ನು ಆಸ್ಪತ್ರೆಗೆ ನಿರ್ಮಿಸಿಕೊಟ್ಟಿದೆ. ಈ ಕೇಂದ್ರ ನಿರ್ಮಾಣಕ್ಕೆ ಆಂಥಾಲಜಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಹಾಗೂ ಮುತ್ತೂಟ್ ಫೈನಾನ್ಸ್ ಕಂಪನಿಗಳು ನೆರವು ನೀಡಿವೆ. ಇದರಿಂದಾಗಿ ಆಸ್ಪತ್ರೆಗೆ ಬಂದ ತಾಯಂದಿರು ಶಿಶುಗಳಿಗೆ ಹಾಲುಣಿಸಲು ಸೂಕ್ತ ಸ್ಥಳಾವಕಾಶಕ್ಕೆ ಪರದಾಟ ನಡೆಸುವುದು ತಪ್ಪಲಿದೆ. ಆಸ್ಪತ್ರೆಯ ನೆಲ ಮಹಡಿ ಹಾಗೂ ಮೊದಲ ಮಹಡಿಯಲ್ಲಿ ಈ ಕೇಂದ್ರ ಇರಲಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ತಾಯಂದಿರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. 

ಇಂದಿರಾನಗರದಲ್ಲಿರುವ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಗೆ ದಿನಕ್ಕೆ 500ರಿಂದ 600 ಹೊರರೋಗಿಗಳು ಭೇಟಿ ನೀಡುತ್ತಾರೆ. ಅಲ್ಲಿ ಹಾಲುಣಿಸಲು ಪ್ರತ್ಯೇಕ ಕೇಂದ್ರಗಳು ಇರಲಿಲ್ಲ. ಇದರಿಂದ ತಾಯಂದಿರು ಸಮಸ್ಯೆ ಎದುರಿಸುತ್ತಿದ್ದರು. ಇದಕ್ಕೆ ಪರಿಹಾರ ಒದಗಿಸಲು ಆಸ್ಪತ್ರೆಯು ಸಿಎಸ್‌ಆರ್‌ ಅಡಿ ಕೇಂದ್ರ ನಿರ್ಮಾಣಕ್ಕೆ ಸ್ಥಳಾವಕಾಶ ಒದಗಿಸಿದೆ. ಮಕ್ಕಳ ಶಿಕ್ಷಣ, ಆರೋಗ್ಯ ಸೇರಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಚೈಲ್ಡ್ ಹೆಲ್ಪ್ ಫೌಂಡೇಷನ್, ಇದೇ ಮೊದಲ ಬಾರಿ ಈ ರೀತಿಯ ಕೇಂದ್ರ ನಿರ್ಮಿಸಿದೆ. ಈ ಮಾದರಿಯ ಕೇಂದ್ರ ಇಲ್ಲಿನ ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ.  

ಸ್ಥಳಾಂತರ ಸಾಧ್ಯ: ಸಿದ್ಧ ಮಾದರಿಯ ಈ ಕೇಂದ್ರಗಳನ್ನು ಒಂದೆಡೆಯಿಂದ ಇನ್ನೊಂದು ಕಡೆ ಸ್ಥಳಾಂತರ ಮಾಡಬಹುದಾಗಿದೆ. 6x10 ಹಾಗೂ 6X6 ಅಡಿ ಅಳತೆಯನ್ನು ಇವು ಹೊಂದಿವೆ. ಇದರ ಒಳಗಡೆ ತಾಯಂದಿರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಫ್ಯಾನ್‌ ಸೇರಿ ವಿವಿಧ ಸೌಲಭ್ಯವಿದೆ. 

‘ಇದೇ ಮೊದಲ ಬಾರಿ ಸ್ತನ್ಯಪಾನ ಕೇಂದ್ರವನ್ನು ನಿರ್ಮಾಣ ಮಾಡಿದ್ದೇವೆ. ಶಾಲಾ–ಕಾಲೇಜಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದ್ದೇವೆ. ಈ ರೀತಿಯ ಕೇಂದ್ರಗಳು ಆಸ್ಪತ್ರೆಯಲ್ಲಿ ಅತ್ಯಗತ್ಯ. ತಾಯಂದಿರ ಸಮಸ್ಯೆ ಅರಿತು, ಆದ್ಯತೆ ಮೇರೆಗೆ ಕೇಂದ್ರ ನಿರ್ಮಾಣಕ್ಕೆ ನೆರೆವಾಗಿದ್ದೇವೆ’ ಎಂದು ಫೌಂಡೇಷನ್‌ನ ಬಿಲ್ವಾ ಪ್ರಶಸ್ತ್ ತಿಳಿಸಿದರು. 

‘ಸರ್ಕಾರಕ್ಕೆ ಹೊರೆ ಆಗದಂತೆ ಕ್ರಮ’

‘ಆಸ್ಪತ್ರೆಗೆ ಬರುವ ತಾಯಂದಿರಿಗೆ ಹಾಲುಣಿಸಲು ಸೂಕ್ತ ಸ್ಥಳಾವಕಾಶ ಇರಲಿಲ್ಲ. ಖಾಲಿ ಇರುವ ಕೊಠಡಿಗಳಿಗೆ ತೆರಳಿ ಹಾಲುಣಿಸುತ್ತಿದ್ದರು. ಆದ್ದರಿಂದ ನಾವು ಸರ್ಕಾರಕ್ಕೆ ಹೊರೆ ಆಗದಂತೆ ಹಾಲುಣಿಸುವ ಕೇಂದ್ರವನ್ನು ನಿರ್ಮಿಸಿದ್ದೇವೆ. ಈ ಕೇಂದ್ರ ಇದೇ ಸೋಮವಾರದಿಂದ ಕಾರ್ಯಾರಂಭ ಮಾಡಲಿದೆ. ಇದರಿಂದ ತಾಯಂದಿರು ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸುವುದು ತಪ್ಪಲಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಧಾಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT