ಗುರುವಾರ , ನವೆಂಬರ್ 21, 2019
21 °C
ಬೆಂಗಳೂರು ವಿ.ವಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗುವ ಪರಿಸ್ಥಿತಿ ನಿರ್ಮಾಣ

ಅನುಮತಿ ಇಲ್ಲದೆ ವೈದ್ಯ ವಿಜ್ಞಾನ ಕೋರ್ಸ್‌

Published:
Updated:

ಬೆಂಗಳೂರು: ಅಗತ್ಯದ ಅನುಮತಿ ಇಲ್ಲದಿದ್ದರೂ, ಬೆಂಗಳೂರು ವಿಶ್ವವಿದ್ಯಾಲಯವು ವೈದ್ಯ ವಿಜ್ಞಾನ ಸಂಬಂಧಿತ ಕೋರ್ಸ್‌ ಒಂದನ್ನು ಮತ್ತೆ ಆರಂಭಿಸಲು ಮುಂದಾಗಿದ್ದು, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.

ಕಳೆದ ವರ್ಷವೂ ಇದೇ ವಿವಾದ ಎದುರಾಗಿ, ಕೋರ್ಸ್‌ಗೆ ಪ್ರವೇಶಾತಿಯನ್ನು ರದ್ದುಪಡಿಸಲಾಗಿತ್ತು. ಆದರೆ ಈ ಬಾರಿ ಮತ್ತೆ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ‘ಕ್ಲಿನಿಕಲ್‌ ಎಂಬ್ರೊಲಜಿ ಆ್ಯಂಡ್‌ ಅಸಿಸ್ಟೆಡ್‌ ರಿಪ್ರೊಡಕ್ಟಿವ್‌ ಟೆಕ್ನಾಲಜಿ‘ ಕೋರ್ಸ್‌ಗೆ ಪ್ರವೇಶಾತಿ ಅಧಿಸೂಚನೆ ಹೊರಡಿಸಲಾಗಿದೆ.

ಹೀಗೆ ಅಧಿಸೂಚನೆ ಹೊರಡಿಸುವ ಮೊದಲು ಶೈಕ್ಷಣಿಕ ಮಂಡಳಿ, ಸಿಂಡಿಕೇಟ್‌ ಮತ್ತು ಅಧ್ಯಯನ ಮಂಡಳಿಗಳ ಅನುಮತಿ ಪಡೆದಿಲ್ಲ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದಲೂ (ಆರ್‌ಜಿಯುಎಚ್‌ಎಸ್‌) ಅನುಮತಿ ಪಡೆದಿಲ್ಲ.

‘ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪ್ರಾಯೋಜಿತ ಯೋಜನೆ ಇದು. 2018ರಲ್ಲಿ ಈ ಯೋಜನೆ ಪೂರ್ಣಗೊಂಡಿತ್ತು. ಯುಜಿಸಿ ಬೆಂಬಲ ಇರುವವರೆಗೆ ಬೇರೆ ಯಾರ ನಿರಾಕ್ಷೇಪಣಾ ಪತ್ರದ (ಎನ್‌ಒಸಿ) ಅಗತ್ಯವೂ ಇರಲಿಲ್ಲ. ಆದರೆ ಇದೀಗ ಈ ಯೋಜನೆಗೆ ಹಣ ವಿನಿಯೋಗಿಸುವುದು ವಿಶ್ವವಿದ್ಯಾಲಯ. ಇದೊಂದು ಆರೋಗ್ಯ ಸಂಬಂಧಿತ ಕೋರ್ಸ್‌ ಆಗಿರುವುದರಿಂದ ಆರೋಗ್ಯ ವಿಶ್ವವಿದ್ಯಾಲಯದಿಂದ ಎನ್‌ಒಸಿ ಪಡೆಯುವುದು ಅಗತ್ಯವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕೋರ್ಸ್‌ ಅನ್ನು 2013ರಿಂದ 2018ರವರೆಗೆ ವಿಶ್ವವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಪ್ರತಿ ವರ್ಷ 20 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಇತ್ತು. ಕಳೆದ ವರ್ಷ ಕೊನೆಯ ಹಂತದಲ್ಲಿ ಪ್ರವೇಶಾತಿ ಮಾಡುವುದು ಬೇಡ ಎಂದು ಕುಲಪತಿಯವರೇ ಹೇಳಿ ಕೋರ್ಸ್‌ ಅನ್ನು ರದ್ದುಪಡಿಸಲಾಗಿತ್ತು. ಈ ಕೋರ್ಸ್ ಆರಂಭಿಸುವುದಕ್ಕಾಗಿ ಕೆಲವು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕ್ರಮಕ್ಕೂ ಕೆಲವು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್‌ ಅವರು ಕೋರ್ಸ್‌ ಆರಂಭಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ‘ಕೋರ್ಸ್‌ ಆರಂಭಿಸಲು ಸರ್ಕಾರವೇ ಅನಮತಿ ನೀಡಿರುವುದರಿಂದ ಸಿಂಡಿಕೇಟ್‌ ಅಥವಾ ಶೈಕ್ಷಣಿಕ ಮಂಡಳಿಯಿಂದ ಅನುಮತಿ ಪಡೆಯುವ ಅಗತ್ಯ ಇಲ್ಲ. ಇದೊಂದು ಉದ್ಯೋಗ ಆಧರಿತ ಕೋರ್ಸ್‌ ಆಗಿದ್ದು, ಭಾರಿ ಬೇಡಿಕೆಯೂ ಇದೆ. ಹೀಗಾಗಿ ಈ ಕೋರ್ಸ್‌ ಅನ್ನು ಮತ್ತೆ ಆರಂಭಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಯಾವುದೇ ಸಾಂಪ್ರದಾಯಿಕ ವಿಶ್ವವಿದ್ಯಾಲಯ ವೈದ್ಯಕೀಯ ಅಥವಾ ಆರೋಗ್ಯ ವಿಜ್ಞಾನ ಸಂಬಂಧಿತ ಕೋರ್ಸ್‌ಗಳನ್ನು ನಡೆಸುವಂತಿಲ್ಲ. ಅನುಮತಿ ಇಲ್ಲದೆ ಇಂತಹ ಕೋರ್ಸ್‌ ಆರಂಭಿಸಿದರೆ ಮುಂದೆ ತೊಂದರೆ ಉಂಟಾಗಬಹುದು. ಇಂತಹ ಕೋರ್ಸ್‌ಗಳನ್ನು ಆರ್‌ಜಿಯುಎಚ್‌ಎಸ್‌ಗೆ ವರ್ಗಾಯಿಸುವಂತೆ ನಾನು ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಪತ್ರ ಬರೆಯಲಿದ್ದೇನೆ’ ಎಂದು ಆರ್‌ಜಿಯುಎಚ್‌ಎಸ್‌ ಕುಲಪತಿ ಡಾ.ಸಚ್ಚಿದಾನಂದ ತಿಳಿಸಿದರು.

ಪ್ರತಿಕ್ರಿಯಿಸಿ (+)