ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ

ಜರಗನಹಳ್ಳಿ– ಯಲಚೇನಹಳ್ಳಿ ಕೆರೆ ಪ್ರದೇಶ: ಸ್ಥಳೀಯರ ದೂರು l ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ
Last Updated 1 ಏಪ್ರಿಲ್ 2022, 20:12 IST
ಅಕ್ಷರ ಗಾತ್ರ

ಬೆಂಗಳೂರು: ಜರಗನಹಳ್ಳಿ– ಯಲಚೇನಹಳ್ಳಿ ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಕೆರೆಯ ಸರ್ವೇ ನಂಬರ್‌ (29/2ಸಿ) ಜರಗನಹಳ್ಳಿ– ಯಲಚೇನಹಳ್ಳಿ ಎರಡೂ ಗ್ರಾಮಗಳಿಗೆ ಹೊಂದಿಕೊಂಡಿದೆ. ಜರಗನಹಳ್ಳಿ ಭಾಗದಲ್ಲಿ 4 ಎಕರೆಯಷ್ಟು ಈ ಕೆರೆ ಪ್ರದೇಶ ಇತ್ತು. ಯಲಚೇನಹಳ್ಳಿ ಭಾಗದ ಸುಮಾರು 2–36 ಎಕರೆ ಪ್ರದೇಶ ಶಾಲಾ ಮೈದಾನವಾಗಿಬಿಟ್ಟಿದೆ. ಪ್ರಭಾವಿ ವ್ಯಕ್ತಿಯೊಬ್ಬರು ಜರಗನಹಳ್ಳಿ ಕೆರೆಯನ್ನು ಮುಚ್ಚಿ ಶೆಡ್‌ಗಳನ್ನು ನಿರ್ಮಿಸಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರುತ್ತಾರೆ ಸ್ಥಳೀಯರು. ಈ ಕುರಿತ ವ್ಯಾಜ್ಯ
ಹೈಕೋರ್ಟ್‌ನಲ್ಲಿದೆ.

‘ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಆದೇಶ ಮಾಡಿದೆ. ಹಾಗಿದ್ದರೂ ಇಲ್ಲಿ ಕಟ್ಟಡ ನಿರ್ಮಿಸಲು ಮೂರು ದಿನಗಳಿಂದ ಸಿದ್ಧತೆ ನಡೆದಿದೆ. ಇಲ್ಲಿ ಸುರಿದಿದ್ದ ಕಸವನ್ನು ತೆರವುಗೊಳಿಸಲಾಗಿದೆ. ಜೆಸಿಬಿ ತಂದು ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ. ಇಲ್ಲಿದ್ದ ಕೆಲವು ಶೆಡ್‌ಗಳನ್ನು ತೆರವು ಮಾಡಿದ್ದು, ಇನ್ನು ಕೆಲವು ಶೆಡ್‌ಗಳು ಹಾಗೆಯೇ ಇವೆ’ ಎಂದು ಈ ಕೆರೆ ಉಳಿಸಲು ಹೋರಾಟ ನಡೆಸುತ್ತಿರುವ ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ
ತಿಳಿಸಿದರು.

‘ಸರ್ವೆ ನಂಬರ್‌ 29/2ಸಿ ಕೆರೆಯ ಜಾಗ ಎಂದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. 2014ರಲ್ಲಿ ಇದರ ಸರ್ವೆ ಕಾರ್ಯವೂ ನಡೆದಿದ್ದು, ಅದರಲ್ಲೂ ಜರಗನಹಳ್ಳಿಯ 4 ಎಕರೆ ಜಾಗ ಕೆರೆ ಪ್ರದೇಶ ಎಂದು ಸ್ಪಷ್ಟಪಡಿಸಲಾಗಿದೆ. ಆದರೂ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಮಾಡಲು ಕ್ರಮಕೈಗೊಳ್ಳುತ್ತಿಲ್ಲ. ನಿರ್ಮಾಣ ಚಟುವಟಿಕೆ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ‘ಚೇಂಜ್‌ ಮೇಕರ್ಸ್‌ ಆಫ್‌ ಕನಕಪುರ ರಸ್ತೆ’ ಸಂಘಟನೆಯ ಅಧ್ಯಕ್ಷ ಅಬ್ದುಲ್‌ ಅಲೀಂ ‘ಪ್ರಜಾವಾಣಿಗೆ
ತಿಳಿಸಿದರು.

‘2008ರವರೆಗೂ ಜರಗನಹಳ್ಳಿಯಲ್ಲಿ ಕೆರೆ ಇತ್ತು. ಕೆರೆಗೆ ನೀರು ಹರಿಯುತ್ತಿದ್ದ ಕಾಲುವೆಗಳಿಗೆಲ್ಲಾ ಕಟ್ಟಡ ತ್ಯಾಜ್ಯ ಸುರಿದು ಮುಚ್ಚಿ ನೀರು ಸೇರದಂತೆ ಮಾಡಿದರು. ಈಗ ಕೆರೆ ಸಂಪೂರ್ಣ ಮಾಯವಾಗಿದೆ. ಶೆಡ್‌ ನಿರ್ಮಿಸಿಕೊಂಡವರು ಈ ಜಾಗ ನಮ್ಮದು ಎಂದು ಹೇಳುತ್ತಿದ್ದಾರೆ. ಕೆರೆ ಉಳಿಸಲು ಕಂದಾಯ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಜರಗನಹಳ್ಳಿ ನಿವಾಸಿ ಅಣ್ಣಯ್ಯ ತಿಳಿಸಿದರು.

ವಿಜಯನಗರ ಅರಸರ ಕಾಲದ ಕೆರೆ:‘ಯಲಚೇನಹಳ್ಳಿ ಕೆರೆ ಮೂಲತಃ ವಿಜಯನಗರ ಅರಸರ ಕಾಲದ್ದು. ಅದಕ್ಕೆ ಸಾಕ್ಷಿಯಾಗಿ ಕ್ರಿ.ಶ 1402ರ ಶಾಸನವೊಂದು ಇಲ್ಲಿ ಪತ್ತೆಯಾಗಿದೆ. ವಿಜಯನಗರದ ಅರಸ ಇಮ್ಮಡಿ ಹರಿಹರನ ಕಾಲದಲ್ಲಿ ಯಲಚೇನಹಳ್ಳಿ ಕೆರೆ, ನೀರು ಹೊರ ಹರಿಸುವ ತೂಬುಗಳನ್ನು ನಿರ್ಮಿಸಲಾಗಿತ್ತು' ಎನ್ನುತ್ತಾರೆ
ಸ್ಥಳೀಯರು.

‘ಕಟ್ಟಡ ನಿರ್ಮಾಣ ತಡೆಯಲು ಕ್ರಮ’

ಒತ್ತುವರಿ ಜಾಗದಲ್ಲಿ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಕಂದಾಯ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆದುಕೊಳ್ಳುತ್ತೇನೆ. ಕಟ್ಟಡ ನಿರ್ಮಿಸಲು ಸಿದ್ಧತೆ ನಡೆದಿದ್ದರೆ, ಅದನ್ನು ತಡೆಯಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ರಾಮಲಕ್ಷಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜರಗನಹಳ್ಳಿ ಕೆರೆ ಒತ್ತುವರಿ ಕುರಿತ ವ್ಯಾಜ್ಯ ಹೈಕೋರ್ಟ್‌ನಲ್ಲಿದ್ದು, ಇತ್ತೀಚೆಗೆ ವಿಚಾರಣೆ ನಡೆದಿತ್ತು. ಜಾಗದ ಪೋಡಿ ಮಾಡಿಕೊಡುವಂತೆ 2012–13ರಲ್ಲೇ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಪೋಡಿ ಮಾಡುತ್ತಿಲ್ಲ ಎಂಬುದು ಒತ್ತುವರಿದಾರರ ದೂರು. ಇಲ್ಲಿನ ಸುಮಾರು 4 ಎಕರೆ ಜಾಗವು ಕೆರೆಯಂಗಳದ್ದು ಎಂಬುದಕ್ಕೆ ಸರ್ವೆ ದಾಖಲೆಗಳಿವೆ. ಹಾಗಾಗಿ ಇದನ್ನು ಪೋಡಿ ಮಾಡಲು ಬರುವುದಿಲ್ಲ. ಇದು ಸರ್ಕಾರಿ ಸ್ವತ್ತು ಎಂಬುದನ್ನು ಹೈಕೋರ್ಟ್‌ಗೂ ತಿಳಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT