ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಉದ್ಯಮಿ ಸಾವು ಪ್ರಕರಣ: ಕೆ.ಪಿ. ಅಗ್ರಹಾರದ ಭಾಗ್ಯ ಕ್ಲಿನಿಕ್‌ ಬಂದ್‌

Published 4 ಸೆಪ್ಟೆಂಬರ್ 2023, 15:39 IST
Last Updated 4 ಸೆಪ್ಟೆಂಬರ್ 2023, 15:39 IST
ಅಕ್ಷರ ಗಾತ್ರ

ಬೆಂಗಳೂರು: ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮದಿಂದಾಗಿ ಹೋಟೆಲ್‌ ಉದ್ಯಮಿ ಅಮರ್‌ ಶೆಟ್ಟಿ (31) ಅವರ ಸಾವು ಸಂಭವಿಸಿದೆ ಎಂದು ಆರೋಪಿಸಲಾಗಿದ್ದ ಕೆ.ಪಿ. ಅಗ್ರಹಾರದ ಭಾಗ್ಯ ಕ್ಲಿನಿಕ್ ಅನ್ನು ಆರೋಗ್ಯ ಇಲಾಖೆ ಅಧಿಕಾರಿಗಳು, ಸೋಮವಾರ ಬಂದ್ ಮಾಡಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೊಸಂಗಡಿಯ ಅಮರ್ ಶೆಟ್ಟಿ ಅವರು ಐಟಿಐ ಪದವೀಧರರು. ಅವಿವಾಹಿತರಾಗಿದ್ದ ಇವರು, ದುಬೈನಲ್ಲಿ ಆರು ವರ್ಷ ಕೆಲಸ ಮಾಡಿ ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದರು. ನಗರದಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದರು. ಸ್ನೇಹಿತರ ಜತೆಗೆ ನೆಲೆಸಿದ್ದರು.

ಜ್ವರದಿಂದ ಬಳಲುತ್ತಿದ್ದ ಅಮರ್‌ ಶೆಟ್ಟಿ ಅವರು, ಆಗಸ್ಟ್‌ 13ರಂದು ಕೆ.ಪಿ.ಅಗ್ರಹಾರದ 4ನೇ ಕ್ರಾಸ್‌ನಲ್ಲಿರುವ ಭಾಗ್ಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿನ ವೈದ್ಯರು, ಚುಚ್ಚುಮದ್ದು ನೀಡಿದ್ದರು. ನಂತರ, ಮಾತ್ರೆಗಳನ್ನು ಬರೆದುಕೊಟ್ಟಿದ್ದರು. ಮನೆಗೆ ತೆರಳಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ವೇಳೆ ಅವರಿಗೆ ಚುಚ್ಚುಮದ್ದು ನೀಡಿದ್ದ ಜಾಗದಲ್ಲಿ ಊತ ಕಾಣಿಸಿಕೊಂಡು ನೋವಿನಿಂದ ನರಳಲು ಆರಂಭಿಸಿದ್ದರು. ಅದಾದ ಮೇಲೆ ರಾಜಾಜಿನಗರದ ಮತ್ತೊಂದು ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ನೋವು ಕಡಿಮೆ ಆಗಿರಲಿಲ್ಲ. ಅಲ್ಲಿಂದ ಕಿಮ್ಸ್‌ಗೆ ದಾಖಲಾಗಿದ್ದರು. ಆಗಸ್ಟ್‌ 18ರಂದು ಅವರು ಮೃತಪಟ್ಟಿದ್ದರು.

ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಅಮರ್ ಆರೋಗ್ಯ ಹದಗೆಟ್ಟಿತ್ತು. ಇವರ ಸಾವಿಗೆ ಭಾಗ್ಯ ಕ್ಲಿನಿಕ್ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಕೆಪಿ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಗ್ಯ ಸಚಿವರು, ಇಲಾಖೆ ಆಯುಕ್ತರು ಹಾಗೂ ವಸಂತನಗರ ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ಗೂ ದೂರು ನೀಡಿದ್ದರು. ದೂರು ಆಧರಿಸಿ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್‌ನ ಬಾಗಿಲು ಬಂದ್ ಮಾಡಿಸಿದ್ದಾರೆ.

‘ಸದ್ಯ ಕ್ಲಿನಿಕ್‌ ಅನ್ನು ಬಂದ್‌ ಮಾಡಿಸಲಾಗಿದೆ. ವೈದ್ಯರು ನಿರ್ಲಕ್ಷ್ಯ ವಹಿಸಿರುವುದು ಗೊತ್ತಾಗಿದೆ. ಹಿರಿಯ ಅಧಿಕಾರಿಗಳ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT