ಮಂಗಳವಾರ, ಮಾರ್ಚ್ 31, 2020
19 °C
ಜಲಮಂಡಳಿ ಸಹಾಯಕ ಎಂಜಿನಿಯರ್ ನೇಮಕಾತಿ: ಕಂಪ್ಯೂಟರ್‌ ಸಾಕ್ಷರತೆ ಪ್ರಮಾಣಪತ್ರ ಸಲ್ಲಿಸದ ನೆಪ

ಬಿ.ಇ ಪದವೀಧರ ಎ.ಇ ಹುದ್ದೆಗೆ ಅನರ್ಹ?

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ಪದವಿಪೂರ್ವ ಶಿಕ್ಷಣದಿಂದ ಬಿ.ಇ ಪದವಿಯವರೆಗೆ ಒಟ್ಟು ಆರು ವರ್ಷ ಕಂಪ್ಯೂಟರ್‌ ಸೈನ್ಸ್‌ ಓದಿರುವ ಅಭ್ಯರ್ಥಿಯೊಬ್ಬರಿಗೆ, ಆರು ತಿಂಗಳ ಕಂಪ್ಯೂಟರ್‌ ಕೋರ್ಸ್‌ ಪ್ರಮಾಣಪತ್ರ ಹೊಂದಿಲ್ಲ ಎಂಬ ಕಾರಣಕ್ಕೆ ಸಹಾಯಕ ಎಂಜಿನಿಯರ್‌ ಹುದ್ದೆಯನ್ನು ಜಲಮಂಡಳಿ ನಿರಾಕರಿಸಿದೆ.

‘ಕಂಪ್ಯೂಟರ್‌ ಸೈನ್ಸ್‌ನಲ್ಲಿ ನಾನು ಎಂಜಿನಿಯರಿಂಗ್‌ ಪದವಿ ಪಡೆದಿದ್ದೇನೆ. ಪಿಯುಸಿ ಮತ್ತು ಪದವಿ ಸೇರಿ ಒಟ್ಟು ಆರು ವರ್ಷ ಈ ವಿಷಯದಲ್ಲಿ ವ್ಯಾಸಂಗ ಮಾಡಿದ್ದೇನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಜಲಮಂಡಳಿಯ ಸಹಾಯಕ ಎಂಜಿನಿಯರ್‌ ನೇಮಕಾತಿ ಪರೀಕ್ಷೆಯಲ್ಲಿ 233 ಅಂಕಗಳನ್ನು ಪಡೆದಿದ್ದೇನೆ. ದಾಖಲೆಗಳ ಪರಿಶೀಲನೆಗೂ ಹಾಜರಾಗಿದ್ದೆ. ಆದರೆ, ಈಗ ಪ್ರಕಟವಾದ ತಾತ್ಕಾಲಿಕ ಮುಖ್ಯ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ವಿಚಾರಿಸಿದಾಗ, ಕಂಪ್ಯೂಟರ್‌ ಸಾಕ್ಷರತೆ ಕೋರ್ಸ್‌ ಪ್ರಮಾಣಪತ್ರ ಇಲ್ಲದ ಕಾರಣ ನೇಮಕಾತಿಯನ್ನು ತಿರಸ್ಕರಿಸಲಾಗಿದೆ ಎಂದು ಮಂಡಳಿ ಹೇಳಿದೆ’ ಎಂದು ಅಭ್ಯರ್ಥಿ ಅಭಿಜಿತ್‌ ಆದಿತ್ಯ ಹೇಳಿದರು. 

‘ಪಿಯುಸಿಯಲ್ಲಿ ಕಂಪ್ಯೂಟರ್‌ ಬೇಸಿಕ್ಸ್‌ಗೆ ಸಂಬಂಧಿಸಿರುವ ಪಠ್ಯಕ್ರಮವನ್ನು ವಿಷಯ ತಜ್ಞರು ರೂಪಿಸಿರುತ್ತಾರೆ. ಇದೇ ಪಠ್ಯಕ್ರಮ ಓದಿರುವುದರಿಂದ ಕಂಪ್ಯೂಟರ್‌ ಸಾಕ್ಷರತೆ ಪ್ರಮಾಣಪತ್ರ ನೀಡುವ ನಿಯಮದಿಂದ ವಿನಾಯಿತಿ ನೀಡಬೇಕು’ ಎಂದು ಅವರು ಹೇಳಿದರು.

‘ಮಂಡಳಿಯ ಈ ಹಿಂದಿನ ನೇಮಕಾತಿಗಳಲ್ಲಿಯೂ, ಕಂಪ್ಯೂಟರ್‌ ಸೈನ್ಸ್‌ ವಿಷಯವನ್ನು ಶೈಕ್ಷಣಿಕವಾಗಿ ಕಲಿತಿದ್ದ ಅಭ್ಯರ್ಥಿಗಳಿಗೆ ಕಂಪ್ಯೂಟರ್‌ ಕೋರ್ಸ್‌ ಪ್ರಮಾಣ ಪತ್ರ ನೀಡುವುದರಿಂದ ವಿನಾಯಿತಿ ನೀಡಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದರು.

ಕೋರ್ಟ್‌ ಆದೇಶ: ‘ಸಂಜಯ್‌ ಕುಮಾರ್‌ ಮತ್ತು ಉತ್ತರಪ್ರದೇಶ ಸರ್ಕಾರದ ನಡುವಿನ ಇಂಥದ್ದೇ ಪ್ರಕರಣದಲ್ಲಿ, ಅಲಹಾಬಾದ್‌ ಹೈಕೋರ್ಟ್‌ ಅಭ್ಯರ್ಥಿ ಪರ ತೀರ್ಪು ನೀಡಿತ್ತು. ಶೈಕ್ಷಣಿಕವಾಗಿ ಒಂದು ವಿಷಯವನ್ನು ಓದಿದ್ದರೆ, ಅದೇ ವಿಷಯದ ಪ್ರತ್ಯೇಕ ಕೋರ್ಸ್‌ನ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ’ ಎಂದು ಅಭಿಜಿತ್‌ ತಿಳಿಸಿದರು.

‘ಸಿ ಆ್ಯಂಡ್‌ ಆರ್’ ನಿಯಮ ಪಾಲಿಸಿದ್ದೇವೆ

‘ನೇಮಕ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಆಕ್ಷೇಪಣೆ ಸಲ್ಲಿಸಲು ಮಾರ್ಚ್‌ 20ರವರೆಗೆ ಕಾಲಾವಕಾಶ ಇದೆ. ಎಲ್ಲ ಆಕ್ಷೇಪಣೆಗಳನ್ನು ಕ್ರೋಡೀಕರಿಸಿ, ನೇಮಕಾತಿ ಸಮಿತಿ ಮುಂದೆ ಇಡಲಾಗುತ್ತದೆ. ಆ ಸಮಿತಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಜಲಮಂಡಳಿ ಕಾರ್ಯದರ್ಶಿ ಕೃಷ್ಟಗೌಡ ತಾಯಣ್ಣವರ ಹೇಳಿದರು.

‘ಈ ನೇಮಕಾತಿಯ ಪ್ರಕ್ರಿಯೆಯ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್‌ ಆರ್) ನಿಯಮದ ಪ್ರಕಾರ, ಕಂಪ್ಯೂಟರ್‌ ಸಾಕ್ಷರತೆಯಲ್ಲಿ ಪ್ರತ್ಯೇಕವಾಗಿ 6 ತಿಂಗಳ ಕೋರ್ಸ್‌ ಮಾಡಿದ ಪ್ರಮಾಣ‌ಪತ್ರವನ್ನು ಸಲ್ಲಿಸುವುದು ಕಡ್ಡಾಯ. ನಾವು ಅದನ್ನು ಪಾಲಿಸಿದ್ದೇವೆ’ ಎಂದರು. 

‘ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪಡೆದ ಮೇಲೆ, ಮತ್ತೇಕೆ ಕಂಪ್ಯೂಟರ್‌ ಸಾಕ್ಷರತೆ ಪ್ರಮಾಣಪತ್ರ ಬೇಕು ಎಂಬ ಆಕ್ಷೇಪದ ಬಗ್ಗೆ ಮಂಡಳಿಯ ಅಧ್ಯಕ್ಷರೂ ಚರ್ಚಿಸಿದ್ದಾರೆ. ಇದನ್ನು ತಿದ್ದುಪಡಿ ಮಾಡಬೇಕು ಎಂಬ ಪ್ರಸ್ತಾವವನ್ನು 2019ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಈ ನೇಮಕಾತಿಗೆ 2018ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆಗಿನ ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು