ಪತ್ನಿಯ ಸಂಗ ಬೆಳೆಸಿದ್ದವನಿಗೆ ಚಟ್ಟ ಕಟ್ಟಿದ!

7
‘ಪುರವಂಕರ ಸೀಸನ್ಸ್’ ಅಪಾರ್ಟ್‌ಮೆಂಟ್‌ ಸಮುಚ್ಚಯದ ಎಲೆಕ್ಟ್ರೀಷಿಯನ್ ಕೊಲೆ ಪ್ರಕರಣ

ಪತ್ನಿಯ ಸಂಗ ಬೆಳೆಸಿದ್ದವನಿಗೆ ಚಟ್ಟ ಕಟ್ಟಿದ!

Published:
Updated:

ಬೆಂಗಳೂರು: ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ‘ಪುರವಂಕರ ಸೀಸನ್ಸ್’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನಡೆದಿದ್ದ ಎಲೆಕ್ಟ್ರೀಷಿಯನ್ ನಿಥಾಯ್ ಚಂದ್ರ ಕುಮಾರ್ (20) ಎಂಬುವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಅವರ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಶ್ರೀಮಂತ್‌ ಸಿಂಗ್ ಬಾಬು (23) ಹಾಗೂ ಬೀರೇಶ್ ಸಿಂಗ್‌ (23) ಬಂಧಿತರು. ಕೊಲೆಯಾದ ನಿಥಾಯ್, ಶ್ರೀಮಂತ್‌ನ ಪತ್ನಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಅದು ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡಿದ್ದ ಶ್ರೀಮಂತ್‌, ಸ್ನೇಹಿತ ಬೀರೇಶ್‌ ಜೊತೆಗೆ ಸೇರಿ ಈ ಕೃತ್ಯ ಎಸಗಿದ್ದ ಎಂದು ಬೈಯಪ್ಪನಹಳ್ಳಿ ಪೊಲೀಸರು ಹೇಳಿದರು.

‘ನಿಥಾಯ್ ಹಾಗೂ ಆರೋಪಿಗಳು, ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲೇ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್‌ 21ರಂದು ರಾತ್ರಿ ಮೂವರು ಸೇರಿ ಪಾರ್ಟಿ ಮಾಡಿದ್ದರು. ಅದೇ ವೇಳೆಯೇ ನಿಥಾಯ್‌ ಜೊತೆಗೆ ಜಗಳ ತೆಗೆದಿದ್ದ ಆರೋಪಿಗಳು, ಚಾಕುವಿನಿಂದ ಇರಿದು ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದರು’

‘ಕಬ್ಬಿಣದ ತಂತಿ ಮತ್ತು ಪ್ಲಾಸ್ಟಿಕ್‌ ಹಗ್ಗದಿಂದ ಶವದ ಕೈ–ಕಾಲುಗಳನ್ನು ಬಿಗಿದಿದ್ದರು. ಮೂಟೆಯಲ್ಲಿ ಶವವನ್ನು ಹಾಕಿ, ಅದರ ಸುತ್ತಲೂ ಕಬ್ಬಿಣದ ತಂತಿ ಸುತ್ತಿ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ) ಎಸೆದಿದ್ದಾರೆ. ಮೂಟೆ ಮೇಲೆ ಬರಬಾರದೆಂದು ಎರಡು ದೊಡ್ಡ ಸಿಮೆಂಟ್ ಇಟ್ಟಿಗೆಗಳನ್ನೂ ಕಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ಸೆಪ್ಟೆಂಬರ್ 20ರಂದು ಬೆಳಿಗ್ಗೆ ಎಸ್‌ಟಿಪಿಯಿಂದ ದುರ್ವಾಸನೆ ಬರಲಾರಂಭಿಸಿತ್ತು. ಕಾರ್ಮಿಕರೊಬ್ಬರು 15 ಅಡಿ ಆಳದ ಎಸ್‌ಟಿಪಿಯಲ್ಲಿ ಇಳಿದು ನೋಡಿದಾಗಲೇ ಕೊಳೆತ ಸ್ಥಿತಿಯಲ್ಲಿ ಶವ ಕಂಡಿತ್ತು’ ಎಂದರು.

ಅನೈತಿಕ ಸಂಬಂಧ ನೀಡಿದ ಸುಳಿವು: ‘ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಸಂಗತಿ ಗೊತ್ತಾಯಿತು’ ಎಂದು ಬೈಯಪ್ಪನಹಳ್ಳಿ ಪೊಲೀಸರು ಹೇಳಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದೆವು. ಶ್ರೀಮಂತ್‌ ಸಿಂಗ್ ಬಾಬು (23) ಹಾಗೂ ಬೀರೇಶ್ ಸಿಂಗ್‌ ಮಾತ್ರ ನಾಪತ್ತೆಯಾಗಿದ್ದರು. ಅವರಿಬ್ಬರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವಾಗಲೇ ಶ್ರೀಮಂತ್‌ನ ಪತ್ನಿಯ ಜೊತೆಯಲ್ಲಿ ನಿಥಾಯ್‌ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ವಿಷಯ ತಿಳಿಯಿತು. ಅದರ ಬೆನ್ನತ್ತಿ ಹೋದಾಗಲೇ ಕೊಲೆ ರಹಸ್ಯ ಹೊರಬಿತ್ತು’ ಎಂದರು.

‘ಆರೋಪಿಗಳು ಬಿಹಾರದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಅದರಂತೆ ಬಿಹಾರಕ್ಕೆ ಹೋಗಿದ್ದ ವಿಶೇಷ ತಂಡ, ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !