ಗುರುವಾರ , ಜನವರಿ 23, 2020
19 °C
ಸಿಎಎ, ಎನ್‌ಆರ್‌ಸಿ ವಿರುದ್ಧ ಆಕ್ರೋಶ * ನಗರದ ಹಲವೆಡೆ ಪ್ರತಿಭಟನೆ

ಆರದ ಕಿಚ್ಚು; ಮತ್ತೆ ಬೀದಿಗಿಳಿದ ಹೋರಾಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಸಿಆರ್‌) ನಿಯಮ ವಿರುದ್ಧದ ಹೋರಾಟ ಮತ್ತೆ ಬಿರುಸು ಪಡೆದುಕೊಂಡಿದ್ದು, ಶನಿವಾರ ಒಂದೇ ದಿನದಲ್ಲೇ ನಗರದ ಐದು ಕಡೆಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದವು.

ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ ಸೇರಿದ್ದ ಹೋರಾಟಗಾರರು ಉಪವಾಸ ಸತ್ಯಾಗ್ರಹ ಆರಂಭಿಸಿದರು. ‘ನಾವು ಭಾರತೀಯರು’ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಸತ್ಯಾಗ್ರಹದಲ್ಲಿ, ‘ಸಿಎಎ, ಎನ್‌ಆರ್‌ಸಿ ವಿರುದ್ಧ ಭಾರತ’ ಘೋಷಣಾ ಫಲಕಗಳನ್ನೂ ಪ್ರದರ್ಶಿಸಿದರು.

ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಕಾಯ್ದೆಯನ್ನು ವಿರೋಧಿಸಿ ಪತ್ರ ಬರೆದು ಸುಪ್ರೀಕೋರ್ಟ್‌ನ ರಿಜಿಸ್ಟ್ರಾರ್‌ ಅವರ ವಿಳಾಸಕ್ಕೆ ಕಳುಹಿಸಿಕೊಟ್ಟರು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಸುಪ್ರೀಂಕೋರ್ಟ್ ಹಿರಿಯ ವಕೀಲ ಸಂಜಯ್ ಹೆಗ್ಡೆ ಹಾಗೂ ಹಲವರು ಸತ್ಯಾಗ್ರಹದಲ್ಲಿದ್ದರು.

‘ಹಮ್ ಭಾರತ್ ಕೀ ಲೋಗೋ’ ಸಂಘಟನೆ ವತಿಯಿಂದಲೂ ಪುರಭವನ ಎದುರು ಸಂಜೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಪ್ರತಿಭಟನಕಾರರು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ‘ನನ್ನ ದಾಖಲೆಗಳನ್ನು ಹಸು ತಿಂದಿದೆ’ ಎಂಬ ಫಲಕವನ್ನೂ ಹಿಡಿದು ಕಾಯ್ದೆಯನ್ನು ಅಣುಕಿಸಿದರು. 

ಹೆಬ್ಬಾಳ ಸಾರ್ವಜನಿಕರಿಂದಲೂ ಪ್ರತಿಭಟನೆ: ಕಾಯ್ದೆಯನ್ನು ವಿರೋಧಿಸಿ ಆರ್‌.ಟಿ.ನಗರದ ಎಚ್‌ಎಂಟಿ ಮೈದಾನದಲ್ಲಿ ‘ಹೆಬ್ಬಾಳ ಸಾರ್ವಜನಿಕರ ಶಾಂತಿ ಒಕ್ಕೂಟ’ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಯಿತು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಸಾವಿರಾರು ಮಂದಿ ಬೆಳಿಗ್ಗೆಯೇ ಮೈದಾನದಲ್ಲಿ ಜಮಾಯಿಸಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ದೇಶವನ್ನು ಒಡೆಯುವ ಕಾಯ್ದೆಗೆ ಧಿಕ್ಕಾರ’ ಹಾಗೂ ‘ಕಾಯ್ದೆ ರದ್ದುಪಡಿಸಿ ದೇಶ, ಪ್ರಜಾಪ್ರಭುತ್ವ ಹಾಗೂ ಪ್ರಜೆಗಳನ್ನು ಉಳಿಸಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಬನ್ನೇರುಘಟ್ಟ ಈದ್ಗಾ ಮೈದಾನದಲ್ಲಿ ಪ್ರತಿಭಟನೆ: ‘ಜಯನಗರ ಸಮಸ್ತ ಮಸೀದಿಗಳ ಒಕ್ಕೂಟ’ ವತಿಯಿಂದ ಬನ್ನೇರುಘಟ್ಟ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದರಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ, ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಖಂಡಿಸಿದರು.

‘ಕಾಯ್ದೆ ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಇದು ದೇಶಕ್ಕೆ ಮಾರಕ. ಇಂಥ ಕಾಯ್ದೆ ವಿರುದ್ದ ಹೋರಾಟ ನಿರಂತರ’ ಎಂದು ಪ್ರತಿಭಟನಾಕಾರರು ತಿಳಿಸಿದರು.

ಹೊಸೂರು ರಸ್ತೆಯಲ್ಲೂ ಹೋರಾಟ: ‘ಕರ್ನಾಟಕ ಅಲ್ಪಸಂಖ್ಯಾತರ ವೇದಿಕೆ’ ವತಿಯಿಂದ ಹೊಸೂರು ರಸ್ತೆಯ ಅಸ್ಗರಿ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

‘ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಭಾರತೀಯರು ಬದುಕುತ್ತಿದ್ದಾರೆ. ಅವರೆಲ್ಲರನ್ನೂ ಒಡೆಯಲು ಕೇಂದ್ರ ಸರ್ಕಾರ ಕಾಯ್ದೆ ಮೂಲಕ ಹುನ್ನಾರ ನಡೆಸಿದೆ. ಇದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಲಾಗಿದೆ’ ಎಂದು ಪ್ರತಿಭಟನಕಾರರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು