ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಿನ ಗಾಜು ಒಡೆದು ಕಳವು: ರಾಮಜೀನಗರ ಗ್ಯಾಂಗ್ ಬಂಧನ

ಏಳು ಲ್ಯಾಪ್‌ಟಾಪ್‌ ವಶ
Published : 1 ಸೆಪ್ಟೆಂಬರ್ 2024, 15:36 IST
Last Updated : 1 ಸೆಪ್ಟೆಂಬರ್ 2024, 15:36 IST
ಫಾಲೋ ಮಾಡಿ
Comments

ಬೆಂಗಳೂರು: ಕಾರುಗಳ ಗಾಜುಗಳನ್ನು ಒಡೆದು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ರಾಮಜೀನಗರ ಗ್ಯಾಂಗ್‌ನ ನಾಲ್ವರು ಆರೋಪಿಗಳನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುಚನಾಪಳ್ಳಿಯ ರಾಮಜೀನಗರ ನಿವಾಸಿಗಳಾದ ಮುರಳಿ (38), ಸೆಂಥಿಲ್ (50)  ಮೂರ್ತಿ (49) ಹಾಗೂ ಕದ್ದ ವಸ್ತುಗಳನ್ನು ಖರೀದಿಸುತ್ತಿದ್ದ ಜಾನ್ (35) ಎಂಬುವವರನ್ನು ಬಂಧಿಸಲಾಗಿದೆ. ಏಳು ಲ್ಯಾಪ್‌ಟಾಪ್‌ ಸಹಿತ ₹5.85 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

‘ಕಾರುಗಳ ಗಾಜು ಒಡೆದು ಕಳ್ಳತನ ಮಾಡುವುದೇ ರಾಮಜೀನಗರ ಗ್ಯಾಂಗ್‌ನ ವಿಶೇಷತೆ. ಖರೀದಿ ಹಾಗೂ ಬ್ಯಾಂಕ್ ಕೆಲಸಕ್ಕೆಂದು ಕಾರು ನಿಲ್ಲಿಸಿ ಹೋಗುವವರನ್ನು ಆರೋಪಿಗಳು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದರು. ಶ್ರೀಮಂತರು ನೆಲಸಿರುವ ಬಡಾವಣೆಗಳಲ್ಲಿ ಈ ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ, ಬ್ಯಾಂಕ್‌ ಮುಂದೆ, ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳ ಗಾಜಿನ ಮೂಲಕ ಒಳಗೆ ಏನು ಇದೆ ಎಂಬುದನ್ನು ಒಬ್ಬ ಬಂದು ಗಮನಿಸಿ ಮತ್ತಿಬ್ಬರಿಗೆ ಮಾಹಿತಿ ನೀಡುತ್ತಿದ್ದ. ನಂತರ ಮೂವರೂ ಸೇರಿ ರಬ್ಬರ್ ಬ್ಯಾಂಡ್ ಹಾಗೂ ಸಣ್ಣ ಗುಂಡಿನ ಸಹಾಯದಿಂದ ಗಾಜು ಒಡೆಯುತ್ತಿದ್ದರು. ಒಳಗಿರುವ ಲ್ಯಾಪ್‌ಟಾಪ್‌, ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ಆರೋಪಿ ಜಾನ್‌ಗೆ ಮಾರಾಟ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ.

ಮತ್ತೊಂದು ಕಳ್ಳತನಕ್ಕೆ ಖಾರದ ಪುಡಿ, ಮಾರಾಕಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಗ್ಯಾಂಗ್‌ ನಗರದ ಎಂಟು ಕಡೆ ಕೃತ್ಯ ಎಸಗಿರುವುದು ವಿಚಾರಣೆ ವೇಳೆ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT