ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನಾಯಕರ ಬದ್ಧತೆಯನ್ನು ಪರೀಕ್ಷೆಗೆ ಒಡ್ಡಿದ ಜಾತಿ ಗಣತಿ ವರದಿ

Last Updated 29 ಅಕ್ಟೋಬರ್ 2020, 11:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ₹ 159 ಕೋಟಿ ವೆಚ್ಚದಲ್ಲಿ ನಡೆಸಿರುವ ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಇನ್ನೂ ಅತಂತ್ರ ಸ್ಥಿತಿಯಲ್ಲೇ ಇದೆ. ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ಎಲ್ಲರಿಗೂ ಈ ವರದಿ ಬಿಸಿ ತುಪ್ಪದಂತಾಗಿದೆ. ಹಿಂದುಳಿದ ವರ್ಗಗಳ ಹಲವು ಸಮುದಾಯಗಳು ಈಗ ಜಾತಿ ಗಣತಿ ವರದಿಯ ಸ್ವೀಕಾರ ಮತ್ತು ಅಂಗೀಕಾರಕ್ಕೆ ಒತ್ತಡ ಹೇರುತ್ತಿರುವುದರಿಂದ ರಾಜಕೀಯ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅದರಲ್ಲೂ, ದಶಕಗಳ ಕಾಲದಿಂದಲೂ ಸಾಮಾಜಿಕ ನ್ಯಾಯದ ಕುರಿತು ಮಾತನಾಡಿಕೊಂಡು ಬಂದ ನೇತಾರರ ಬದ್ಧತೆಯನ್ನು ಈಗ ಜಾತಿ ಗಣತಿ ವರದಿ ಅಕ್ಷರಶಃ ಪರೀಕ್ಷೆಗೆ ಒಡ್ಡಿದೆ.

1931ರಲ್ಲಿ ದೇಶದಲ್ಲಿ ಜಾತಿ ಆಧಾರಿತ ಜನಗಣತಿ ನಡೆದಿತ್ತು. ಆ ಬಳಿಕ ಜಾತಿಯ ಆಧಾರದಲ್ಲಿ ಯಾವುದೇ ಸಮೀಕ್ಷೆ, ಗಣತಿಗಳು ನಡೆದಿಲ್ಲ. ಇದರಿಂದಾಗಿ ವಿವಿಧ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಖಚಿತವಾಗಿ ಗುರುತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಡೀ ದೇಶದಲ್ಲಿ ಜಾತಿ ಆಧಾರಿತ ಸಮೀಕ್ಷೆಯೊಂದನ್ನು ನಡೆಸಲು ಕೇಂದ್ರ ಸರ್ಕಾರ 2005ರಲ್ಲೇ ನಿರ್ಧರಿಸಿತ್ತು. ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ನಿರ್ಧರಿಸಿ ₹21.5 ಕೋಟಿ ಅನುದಾನ ನೀಡಿತ್ತು. ಧರ್ಮಸಿಂಗ್‌ ಸರ್ಕಾರದಲ್ಲಿ ರಾಜ್ಯವೂ ತನ್ನ ಪಾಲಿನ ಅನುದಾನ ನಿಗದಿ ಮಾಡಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ನಂತರದ ವರ್ಷಗಳಲ್ಲಿ ಜಾತಿ ಆಧಾರಿತ ಜನಗಣತಿ ನಡೆಯಬೇಕು ಎಂಬುದು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಬಹುಮುಖ್ಯ ಬೇಡಿಕೆಯಾಗಿತ್ತು. ‘ಅಹಿಂದ’ ಸಂಘಟನೆಯ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ ಕೂಡ ಈ ಬೇಡಿಕೆಗೆ ದನಿಗೂಡಿಸಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ₹ 159 ಕೋಟಿ ವೆಚ್ಚದಲ್ಲಿ ಸಮೀಕ್ಷೆ ನಡೆಯಿತು. ಹಿಂದುಳಿದ ವರ್ಗಗಳ ಆಯೋಗವು ರಾಜ್ಯವ್ಯಾಪಿ ನಡೆಸಿದ ಸಮೀಕ್ಷೆ ಅಂತಿಮ ಹಂತದತ್ತ ತಲುಪಿದಾಗ ಆರಂಭವಾದ ನಾಟಕೀಯ ಬೆಳವಣಿಗೆಗಳ ಸರಣಿ ಇನ್ನೂ ಕೊನೆಗೊಂಡಿಲ್ಲ. ಪರಿಣಾಮವಾಗಿ ಜಾತಿ ಗಣತಿ ವರದಿಯೂ ತ್ರಿಶಂಕು ಸ್ಥಿತಿಯಲ್ಲೇ ಇದೆ.

ಕಿಚ್ಚು ಹಚ್ಚಿದ ನಂಜುಂಡಿ:

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಜಾತಿ ಗಣತಿಯ ವರದಿ ಬಹುತೇಕ ಸಿದ್ಧವಾಗಿತ್ತು. ರಾಜ್ಯದಲ್ಲಿ ಯಾವ ಜಾತಿ, ಉಪ ಜಾತಿಗಳ ಜನರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಅನಧಿಕೃತ ಅಂಕಿಅಂಶವೊಂದು ಆಗಲೇ ಸೋರಿಕೆಯಾಗಿತ್ತು. ಇದು ವರದಿ ಸಿದ್ಧವಾಗಿತ್ತು ಎಂಬುದನ್ನು ಪುಷ್ಟೀಕರಿಸುತ್ತದೆ. ಇನ್ನೊಂದೆಡೆ ಜಾತಿ ಗಣತಿ ಕುರಿತು ಆಗಿನ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರನ್ನು ಮಾತಿಗೆಳೆದರೆ, ‘ಈ ವಿಚಾರದಲ್ಲಿ ನನ್ನ ಕೈಕಟ್ಟಿ ಹಾಕಿದರು...’ ಎಂದು ಅನೌಪಚಾರಿಕವಾಗಿ ಉತ್ತರಿಸುತ್ತಾರೆ. ಇದೆಲ್ಲವೂ ಅನುಮಾನಗಳನ್ನು ಮತ್ತಷ್ಟು ಬಲಗೊಳಿಸುತ್ತದೆ.

ಸಿದ್ದರಾಮಯ್ಯ ಸರ್ಕಾರದ ಬಳಿಕ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಆಗಲೂ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿಲ್ಲ. ನಂತರ ಬಂದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ವಜಾ ಮಾಡಿತು. ಹುದ್ದೆಯಿಂದ ನಿರ್ಗಮಿಸುವ ಮೊದಲು ಆಯೋಗದ ಅಧ್ಯಕ್ಷ ಕಾಂತರಾಜ್‌ ಅವರು ಆಯೋಗದ ಕಾರ್ಯದರ್ಶಿಗೇ ವರದಿ ಸಲ್ಲಿಸಿ ಹೋಗಿದ್ದಾರೆ.

ಒಂದು ವರ್ಷದಿಂದಲೂ ಈ ವಿಚಾರದತ್ತ ಯಾರೂ ಆಸಕ್ತಿ ತಳೆದಿರಲಿಲ್ಲ. ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ಸೆಪ್ಟೆಂಬರ್‌ ತಿಂಗಳಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಎತ್ತಿದ ಪ್ರಶ್ನೆಯೊಂದು ಜಾತಿ ಗಣತಿ ವರದಿ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂದು ಸಚಿವ ಬಿ. ಶ್ರೀರಾಮುಲು ನೀಡಿದ ಉತ್ತರ ಹಿಂದುಳಿದ ವರ್ಗಗಳ ಅನೇಕ ಸಮುದಾಯಗಳನ್ನು ಬಡಿದೆಬ್ಬಿಸಿದೆ.

ಒಬ್ಬರತ್ತ ಮತ್ತೊಬ್ಬರ ಬೆರಳು: ಜಾತಿ ಗಣತಿ ವರದಿಯನ್ನು ಸ್ವೀಕರಿಸುವ ವಿಚಾರದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರೂ ಪಕ್ಷಗಳ ಪ್ರಮುಖ ನೇತಾರರ ಕುರಿತು ಹಿಂದುಳಿದ ವರ್ಗಗಳ ಜನರಲ್ಲಿ ಅನುಮಾನ ಸೃಷ್ಟಿಯಾಗಿದೆ. ಶೋಷಿತ ಸಮುದಾಯಗಳ ನಾಯಕರೆಂದು ಬಿಂಬಿಸಿಕೊಂಡಿದ್ದ ನೇತಾರರಿಗೆ ಈಗ ಅನುಮಾನದ ಬಲೆಯಿಂದ ಹೊರ ಬರಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಇದಕ್ಕಾಗಿ ಒಬ್ಬರು ಮತ್ತೊಬ್ಬರತ್ತ ಬೆರಳು ತೋರಿಸುವ ಕೆಲಸ ಆರಂಭಿಸಿದ್ದಾರೆ.

‘ಅಹಿಂದ’ ಹೋರಾಟದ ಮೂಲಕವೇ ರಾಜಕೀಯ ಪ್ರಾಬಲ್ಯ ಸಾಧಿಸಿದ ಸಿದ್ದರಾಮಯ್ಯ, ಜಾತಿ ಗಣತಿಯ ವಿಚಾರದಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತು ಈಗಿನ ಬಿಜೆಪಿ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಈ ವಿಚಾರದಲ್ಲಿ ಹಿಂದುಳಿದ ಜಾತಿಗಳ ಸಂಘಟನೆಗಳ ಜತೆ ಸಮನ್ವಯ ಸಾಧಿಸಲು ಯತ್ನಿಸುತ್ತಿರುವ ಸಚಿವ ಕೆ.ಎಸ್‌. ಈಶ್ವರಪ್ಪ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮತ್ತು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವೇ ಈಗಿನ ಅತಂತ್ರ ಸ್ಥಿತಿಗೆ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ– ಕುಮಾರಸ್ವಾಮಿ ನಡುವೆ ನೇರ ವಾಕ್ಸಮರವೂ ನಡೆಯುತ್ತಿದೆ. ಜಾತಿ ಗಣತಿ ವರದಿ ಆಯೋಗದಲ್ಲೇ ಉಳಿಯಲು ಕಾರಣವಾದ ಯಾರೊಬ್ಬರೂ ಅದರ ಹೊಣೆಗಾರಿಕೆಯನ್ನು ಹೊರಲು ಸಿದ್ಧರಿಲ್ಲ.

ಸಾಮಾಜಿಕ ನ್ಯಾಯ, ಸಮಾನತೆಯ ಕುರಿತು ಮಾತನಾಡುತ್ತಾ ಬಂದಿರುವ ಪ್ರಮುಖ ರಾಜಕೀಯ ನಾಯಕರು ಈಗ ಜಾತಿ ಗಣತಿ ವರದಿ ಸ್ವೀಕಾರದ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹಿಂದುಳಿದ ವರ್ಗಗಳ ಹಲವು ಸಮುದಾಯಗಳು ಸಂಘಟಿತವಾಗಿ ವರದಿ ಸ್ವೀಕಾರಕ್ಕೆ ಒತ್ತಡ ಹಾಕಲು ತಯಾರಿ ನಡೆಸಿರುವ ಹೊತ್ತಲ್ಲಿ ಈ ನಾಯಕರ ಬದ್ಧತೆಯೂ ಪರೀಕ್ಷೆಗೆ ಒಳಪಡುತ್ತಿದೆ. ಸರ್ಕಾರದ ಭಾಗವಾಗಿರುವವರು, ವಿರೋಧ ಪಕ್ಷದ ನೇತೃತ್ವ ವಹಿಸಿರುವವರು ಸೇರಿದಂತೆ ಎಲ್ಲ ಪಕ್ಷಗಳ ಘಟಾನುಘಟಿ ನಾಯಕರು ಏಕ ದನಿಯಲ್ಲಿ ಮಾತನಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT