ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಜನಗಣತಿ ಅವೈಜ್ಞಾನಿಕ: ಒಕ್ಕಲಿಗ ಮುಖಂಡರ ಆರೋಪ

Published 14 ಮಾರ್ಚ್ 2024, 15:55 IST
Last Updated 14 ಮಾರ್ಚ್ 2024, 15:55 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ‘ಸರ್ಕಾರಕ್ಕೆ ಸಲ್ಲಿಸಿರುವ ಜಾತಿಗಣತಿ ವರದಿ ಅವೈಜ್ಞಾನಿಕವಾಗಿದ್ದು, ಇದರ ವಿರುದ್ಧ ಮುಂದಿನ ವಾರ ಒಕ್ಕಲಿಗರ ಪ್ರಾಬಲ್ಯದ 16 ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುತ್ತದೆ’ ಎಂದು ಒಕ್ಕಲಿಗರ ಕ್ರಿಯಾ ಸಮಿತಿ ಸದಸ್ಯರು ತಿಳಿಸಿದರು.

‘ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ಕೈಗೊಳ್ಳಲಾಗುತ್ತಿದ್ದು, ಅದರಲ್ಲಿ ಎಸ್‌ಸಿ, ಎಸ್‌ಟಿ ಜನಗಣತಿಯನ್ನು ಪ್ರತ್ಯೇಕವಾಗಿ ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಿಂದ ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಯಾವುದೇ ಉಪಯೋಗವಿಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ಆ ಜನಾಂಗದ ನಾಯಕರನ್ನು ಮುನ್ನೆಲೆಗೆ ತಂದು ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ’ ಎಂದು ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ.ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಳನ್ನು ಕೈಗೊಂಡು ಒಂಬತ್ತು ವರ್ಷಗಳೇ ಕಳೆದಿವೆ. ಈ ಸಮೀಕ್ಷೆ ಪ್ರಕಾರ ಹಿಂದುಳಿದ ಆಯೋಗದಲ್ಲಿ ಉದ್ದೇಶಪೂರ್ವಕವಾಗಿ ಕೆಲವು ಸಣ್ಣ ಪುಟ್ಟ ಜಾತಿಗಳಿಗೆ ಸೇರಿದವರನ್ನು ಮಾತ್ರ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ಮಾಡಲಾಗಿದ್ದು ಎಸ್.ಸಿ, ಎಸ್.ಟಿ, ಮುಸ್ಲಿಂ ಒಕ್ಕಲಿಗ ಮತ್ತು ಲಿಂಗಾಯತ ಜಾತಿಯವರನ್ನು ಹೊರಗಿಟ್ಟು ಸಂಚು ರೂಪಿಸಲಾಗಿದೆ’ ಎಂದು ದೂರಿದರು.

ನಗರಸಭೆ ಮಾಜಿ ಅಧ್ಯಕ್ಷ ಅಂದಾನಪ್ಪ ಮಾತನಾಡಿ, ‘2015ರಲ್ಲಿ ರಾಜ್ಯದಲ್ಲಿ 6.45 ಕೋಟಿ ಜನಸಂಖ್ಯೆ ಇತ್ತು. 2024ರ ವೇಳೆಗೆ 7.2 ಕೋಟಿಯಾಗಿದೆ. ರಾಜ್ಯ ಸರ್ಕಾರ ಜಾತಿ ಗಣತಿ ಮಾಡಿಸಿರುವುದು 5.98 ಕೋಟಿ ಜನಸಂಖ್ಯೆಗೆ ಮಾತ್ರವಾಗಿದ್ದು, ಇದು ಅವೈಜ್ಞಾನಿಕವಾಗಿದೆ’ ಎಂದು ಆರೋಪಿಸಿದರು.

ಇತಿಹಾಸ ಸಂಶೋಧಕ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ‘ಈ ಸಮೀಕ್ಷೆ ಮಾಡಿರುವುದರ ಹಿಂದೆ ಲಿಂಗಾಯತ, ಒಕ್ಕಲಿಗರಿಗೆ ತೊಂದರೆ ಕೊಡುವ ವ್ಯವಸ್ಥಿತ ಸಂಚನ್ನು ಸರ್ಕಾರ ರೂಪಿಸಿದೆ’ ಎಂದರು.

ಒಕ್ಕಲಿಗ ಮುಖಂಡರಾದ ಬಿ.ಟಿ.ಶ್ರೀನಿವಾಸ್, ಎ.ಎಸ್. ಗೋವಿಂದೇಗೌಡ, ಕಾಳೇಗೌಡ, ಗೋವಿಂದರಾಜು ಪಟೇಲ್, ಕೃಷ್ಣಪ್ರಸಾದ್, ಸಂತೋಷ್, ಲಕ್ಷ್ಮೀ ಶ್ರೀನಿವಾಸ್, ಮಂಜು ರಾಜ್, ಕೃಷ್ಣಪ್ಪ, ಡಾ.ಮಧುಸೂಧನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT