ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರಿನ ಹಕ್ಕಿನಲ್ಲಿ ನಿರಂತರ ಅನ್ಯಾಯ: ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್

ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಬೇಸರ
Published 14 ಜನವರಿ 2024, 15:55 IST
Last Updated 14 ಜನವರಿ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾವೇರಿ ನೀರಿನ ಹಕ್ಕಿನಲ್ಲಿ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದು, ಜಲ ವಿವಾದಗಳ ವಿಷಯದಲ್ಲಿ ಕರ್ನಾಟಕದಷ್ಟು ನತದೃಷ್ಟ ರಾಜ್ಯ ಇನ್ನೊಂದಿಲ್ಲ’ ಎಂದು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಬೇಸರ ವ್ಯಕ್ತಪಡಿಸಿದರು. 

ಎಂ. ಚಿದಾನಂದಮೂರ್ತಿ ಸ್ಮರಣಾರ್ಥ ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಕರ್ನಾಟಕದ ಜಲ ವಿವಾದಗಳು:ಪರಿಹಾರ’ ವಿಷಯದ ಬಗ್ಗೆ ಅವರು ಮಾತನಾಡಿದರು. 

‘ಐತಿಹಾಸಿಕವಾಗಿ ನೋಡಿದರೆ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ನ್ಯಾಯವು ಕರ್ನಾಟಕದ ಪರವಾಗಿಯೇ ಇದೆ. ಆದರೆ, ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ರಾಜ್ಯಕ್ಕೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ತಮಿಳುನಾಡು ಸಹಜವಾಗಿಯೇ ಹೆಚ್ಚು ಅಂತರ್ಜಲ ಹೊಂದಿದೆ. ಆದರೂ ನ್ಯಾಯಾಧಿಕರಣ ಮತ್ತು ನ್ಯಾಯಾಲಯಗಳು ಇದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ರಾಜ್ಯದ ಪರವಾಗಿ ವಾದಿಸಿದ ವಕೀಲರೂ ಪರಿಣಾಮಕಾರಿಯಾಗಿ ವಾದಿಸಿದ ಉದಾಹರಣೆಗಳಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬರಗಾಲ ಬಂದ ವರ್ಷಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ಯಾವ ಸಂಕಷ್ಟ ಸೂತ್ರ ಅನುಸರಿಸಬೇಕು ಎಂಬ ಸಂಗತಿ ಸ್ಪಷ್ಟವಾಗಿಲ್ಲ. ಹೆಚ್ಚುವರಿ ನೀರನ್ನು ಯಾವ ರೀತಿ ಹಂಚಿಕೊಳ್ಳಬೇಕು ಎನ್ನುವುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಮೇಕೆದಾಟು ಯೋಜನೆಯ ಸಮಸ್ಯೆಯ ಮೂಲ ಇಲ್ಲಿದೆ’ ಎಂದು ವಿಶ್ಲೇಷಿಸಿದರು.

ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ, ‘ಕೇವಲ ಪ್ರತಿಕ್ರಿಯಾತ್ಮಕವಾಗಿದ್ದ ಕನ್ನಡ ಹೋರಾಟವನ್ನು ನಿರಂತರ ಕ್ರಿಯಾಶೀಲತೆಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಚಿದಾನಂದಮೂರ್ತಿ ಅವರಿಗೆ ಸಲ್ಲುತ್ತದೆ. ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಸಮಗ್ರ ಕನ್ನಡ ಭಾಷಾ ಕಾಯ್ದೆ ಕೂಡ ಚಿದಾನಂದಮೂರ್ತಿ ಅವರ ಚಿಂತನೆಯ ಮುಂದುವರಿದ ಭಾಗವೇ ಆಗಿದೆ. ಅವರ ಕನ್ನಡಪರ ಚಿಂತನೆಯು ಕೇವಲ ಕನ್ನಡ ಭಾಷೆ ಮಾತ್ರವಲ್ಲದೆ, ರಾಜ್ಯದ ನೀರಿನ ಹಕ್ಕು, ಉದ್ಯೋಗದ ಪಾಲು, ಕನ್ನಡ ವಿಶ್ವವಿದ್ಯಾಲಯ ಮುಂತಾದ ಆಯಾಮಗಳನ್ನು ಒಳಗೊಂಡಿತ್ತು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT