ಶನಿವಾರ, ಜನವರಿ 18, 2020
21 °C
ಕೊಲೆ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳು

ಕಾಲಿಗೆ ಗುಂಡಿಕ್ಕಿ ರೌಡಿಗಳಿಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಸದಸ್ಯನ ಕೊಲೆ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇಬ್ಬರು ರೌಡಿಶೀಟರ್‌ಗಳ ಕಾಲಿಗೆ ಗುಂಡಿಕ್ಕಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಡುಗೋಡಿಯಲ್ಲಿ ನೆಲೆಸಿರುವ ಸತೀಶ್ ಅಲಿಯಾಸ್ ಸೆಡ್ಕಾ (29) ಮತ್ತು ಹಂದಿ ಮಹೇಶ್ (32) ಗುಂಡೇಟು ತಿಂದವರು. ಆರೋಪಿಗಳಿಂದ ಸ್ವಿಫ್ಟ್‌ ಕಾರು ವಶಪಡಿಸಿಕೊಳ್ಳಲಾಗಿದೆ.

ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಗಳನ್ನು ಮತ್ತು ಕಾರ್ಯಾಚರಣೆ ಸಂದರ್ಭದಲ್ಲಿ ಆರೋಪಿಗಳಿಂದ ಹಲ್ಲೆಗೆ ಒಳಗಾಗಿರುವ ಕಾನ್‌ಸ್ಟೇಬಲ್‌ ಹನುಮೇಶ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ತಲೆಮರೆಸಿಕೊಂಡು ಓಡಾಡುತ್ತಿದ್ದ ಅವರಿಬ್ಬರ ಬಂಧನಕ್ಕಾಗಿ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು. ಇಬ್ಬರೂ ತಮಿಳುನಾಡಿನ ಬಾಗಲೂರಿನಲ್ಲಿ ಅಡಗಿಕೊಂಡಿದ್ದರು. ಭಾನುವಾರ ರಾತ್ರಿ ಬಿಟಿಎಂ ಕೆರೆಯ ಬಳಿಯ ರಂಕಾ ಕಾಲೊನಿಯಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ಮತ್ತು ಕೇಶವ್‌ ಮೂರ್ತಿ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು.

ಬಂಧಿಸಲು ಮುಂದಾಗಿದ್ದ ತಂಡದ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇನ್‌ಸ್ಪೆಕ್ಟರ್ ಪುನೀತ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಅದನ್ನು ಲೆಕ್ಕಿಸದೆ ಕಾನ್‌ಸ್ಟೇಬಲ್‌ ಹನುಮೇಶ್‌ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಪುನೀತ್  ಮತ್ತು ಕೇಶವಮೂರ್ತಿ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಸಿಸಿಬಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದರು.

ಕೋರಮಂಗಲ ಮತ್ತು ಶಿಡ್ಲಘಟ್ಟ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿ ಸತೀಶ್‌ ಹೆಸರಿದೆ. ಶಿಡ್ಲಘಟ್ಟ ಠಾಣೆಯ ಪಟ್ಟಿಯಲ್ಲಿ ಮಹೇಶ್‌ ಹೆಸರಿದೆ. ಇಬ್ಬರೂ 2016ರಲ್ಲಿ ಶಿಡ್ಲಘಟ್ಟ ನಗರಸಭೆ ಸದಸ್ಯ ವೆಂಕಟರಮಣ ಮತ್ತು 2019ರಲ್ಲಿ ತಮಿಳುನಾಡಿನ ಬಾಗಲೂರಿನಲ್ಲಿ ತರಕಾರಿ ಮಹೇಶ ಎಂಬಾತನ ಕೊಲೆ ಪ್ರಕರಣದ ಆರೋಪಿಗಳು. ಅಲ್ಲದೆ, ಇಬ್ಬರ ಮೇಲೆಯೂ ಇನ್ನೂ ಕೆಲವು ಕೊಲೆ, ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು