ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇವಾದೇವಿದಾರರ ಕಚೇರಿಗಳ ಮೇಲೆ ಸಿಸಿಬಿ ದಾಳಿ

ಮೀಟರ್ ಬಡ್ಡಿ ದಂಧೆ * ₹ 9 ಲಕ್ಷ ನಗದು ಜಪ್ತಿ; ಆರು ಮಂದಿ ವಶಕ್ಕೆ
Last Updated 29 ಮೇ 2019, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮೀಟರ್‌ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ ಶುರು ಮಾಡಿರುವ ಸಿಸಿಬಿ ಪೊಲೀಸರು, ನಗರದ ಏಳು ಕಡೆಗಳಲ್ಲಿರುವ ಲೇವಾದೇವಿದಾರರ ಕಚೇರಿ ಹಾಗೂ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿದರು.

‘ಲೇವಾದೇವಿ ನಡೆಸುತ್ತಿರುವ ಹಲವರು, ಸಾಲ ಪಡೆದ ಸಾರ್ವಜನಿಕರಿಂದ ಮೀಟರ್ ಬಡ್ಡಿ ವಸೂಲಿ ಮಾಡುತ್ತ ಕಿರುಕುಳ ನೀಡುತ್ತಿದ್ದ ಬಗ್ಗೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅವುಗಳ ತನಿಖೆ ಸಿಸಿಬಿಗೆ ವರ್ಗವಾಗಿತ್ತು. ಅದರನ್ವಯ ಲೇವಾದೇವಿದಾರರ ಹಾಗೂ ಫೈನಾನ್ಸ್ ಕಚೇರಿಗಳ ಮೇಲೆ ಮಂಗಳವಾರ ದಾಳಿ ಮಾಡಿ ಪರಿಶೀಲನೆ ನಡೆಸಲಾಯಿತು’ ಎಂದು ಸಿಸಿಬಿಯ ಡಿಸಿಪಿ ಎಸ್‌.ಗಿರೀಶ್ ತಿಳಿಸಿದರು.

ಕಲಾಸಿಪಾಳ್ಯದ ‘ಆಶಿಶ್ ಮೆಟಲ್ಸ್’, ಶಾರದಾ ಚಿತ್ರಮಂದಿರ ಬಳಿಯ ’ರಾಜೀವ್ ಫೈನಾನ್ಸ್’, ಶಾಂತಿನಗರದ ‘ಸಂಜಯ್ ಫೈನಾನ್ಸ್’, ‘ರಾಜಾಸಾಬ್ ಫೈನಾನ್ಸ್’, ಜೆ.ಪಿ.ನಗರದ ‘ಸ್ಕಂದ ಎಂಟರ್ ಪ್ರೈಸಸ್’, ‘ವೈಷ್ಣವಿ ಹೊಲ್ಡಿಂಗ್’ ಕಚೇರಿ ಹಾಗೂ ಹನುಮಂತನಗರದ ಹೇಮಲತಾ ಎಂಬುವರ ಮನೆ ಮೇಲೆ ದಾಳಿ ಮಾಡಲಾಗಿದೆ.

ಮೀಟರ್‌ ಬಡ್ಡಿ ದಂಧೆಗೆ ಸಂಬಂಧಪಟ್ಟಂತೆ 566 ಚೆಕ್‌ಗಳು, 197 ಆನ್ ಡಿಮ್ಯಾಂಡ್ ನೋಟುಗಳು, ₹9 ಲಕ್ಷ ನಗದು, 28 ಲೀಸ್ ಅಗ್ರಿಮೆಂಟ್‍ ಹಾಗೂ ಲ್ಯಾಪ್‍ಟಾಪ್‌ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಆರು ಮಂದಿ ವಶಕ್ಕೆ: ದಾಳಿ ವೇಳೆಯೇ ಶಾಂತಿನಗರದ ಲಲಿತ್ ಕಾನೂಗ್, ಆಶಿಷ್ ಜೈನ್, ಸಂಜಯ್ ಸಚ್‍ದೇವ್, ಜೆ.ಪಿ.ನಗರದ ಚಂದ್ರು ಅರ್ಜುನ್ ದಾಸ್ ಅಲಿಯಾಸ್ ರಾಜಾಸಾಬ್, ಓಂ ಪ್ರಕಾಶ್ ಸಚ್‌ದೇವ್ ಹಾಗೂ ಹನುಮಂತರನಗರದ ಮಾತಾ ಪ್ರಸಾದ್ ತಿವಾರಿ ಅಲಿಯಾಸ್ ರಾಜನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಏಜೆಂಟರ ಮೂಲಕ ಆರೋಪಿಗಳು ಸಾಲ ನೀಡುತ್ತಿದ್ದರು. ಸಾಲಕ್ಕೆ ಪ್ರತಿಯಾಗಿ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದರು. ಅದನ್ನು ಕೊಡದಿದ್ದರೆ, ಕಿರುಕುಳ ನೀಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘₹ 7.50 ಲಕ್ಷ ಸಾಲ ಬೇಕಿರುವುದಾಗಿ ಯಾರಾದರೂ ಕೇಳಿದರೆ, ₹ 2 ಲಕ್ಷವನ್ನು ಮುಂಗಡವಾಗಿ ಬಡ್ಡಿಗಾಗಿ ಮುರಿದುಕೊಂಡು ₹ 5.50 ಲಕ್ಷ ಮಾತ್ರ ಕೈಗೆ ಕೊಡುತ್ತಿದ್ದರು. ಪ್ರತಿ ತಿಂಗಳು ಕಂತಿನ ಮೂಲಕ ಮೀಟರ್ ಬಡ್ಡಿ ಸಮೇತ ಹಣ ವಸೂಲಿ ಮಾಡುತ್ತಿದ್ದರು. ಸಾಲ ಕೊಡಿಸುತ್ತಿದ್ದ ಏಜೆಂಟರಿಗೂ ಬಡ್ಡಿಯಲ್ಲಿ ಶೇ 2ರಷ್ಟು ಕಮಿಷನ್ ಸಹ ಕೊಡುತ್ತಿದ್ದರು’

‘ಸಾಲಕ್ಕೆ ಶ್ಯೂರಿಟಿಯಾಗಿ ಚೆಕ್ ಹಾಗೂ ಆಸ್ತಿ ದಾಖಲೆಗಳನ್ನು ಆರೋಪಿಗಳು ಪಡೆಯುತ್ತಿದ್ದರು. ಸರಿಯಾದ ಸಮಯಕ್ಕೆ ಕಂತು ಪಾವತಿ ಮಾಡದಿದ್ದರೆ, ಚೆಕ್‌ ಬಳಸಿಕೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT