ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳ್ಳ ಸುಹೇಲ್‌ ಬಂಧನ: ₹16.90 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

Last Updated 20 ಅಕ್ಟೋಬರ್ 2021, 16:36 IST
ಅಕ್ಷರ ಗಾತ್ರ

ಬೆಂಗಳೂರು: ಒಂಟಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ನಗರದ ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದ ಸುಹೇಲ್‌ ಪಾಷಾ (28) ಎಂಬಾತನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆತನಿಂದ ₹16.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹2.5 ಲಕ್ಷ ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

‘ಮೈಸೂರಿನ ಗೌಸಿಯಾನಗರದ ನಿವಾಸಿಯಾಗಿರುವ ಸುಹೇಲ್‌, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದ. ಹೆಣ್ಣೂರಿನಲ್ಲಿ ಆಟೊ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆತ, ರಸ್ತೆಯಲ್ಲಿ ಒಂಟಿ ಮಹಿಳೆಯರ ಚಿನ್ನದ ಸರಗಳನ್ನು ಎಗರಿಸಿಕೊಂಡು ಪರಾರಿಯಾಗುತ್ತಿದ್ದ. ಶೋಯಬ್‌ ಎಂಬಾತ ಆತನ ಕೃತ್ಯಕ್ಕೆ ಸಹಕರಿಸುತ್ತಿದ್ದ. ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆಟೊ ಚಾಲಕನಾಗಿದ್ದರಿಂದ ಆರೋಪಿಗೆ ನಗರದ ಎಲ್ಲ ಬಡಾವಣೆಗಳ ಪರಿಚಯವಿತ್ತು. ಠಾಣೆಯ ವ್ಯಾಪ್ತಿಯಲ್ಲಿ ಸರ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅದರಲ್ಲಿ ಸುಹೇಲ್‌ ಭಾಗಿಯಾಗಿರುವ ಅನುಮಾನ ಮೂಡಿತ್ತು. ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕೆಲ ಕಾಲ ಮೈಸೂರಿನಲ್ಲಿ ನೆಲೆಸಿದ್ದ ಆತ, ತನ್ನನ್ನು ಪೊಲೀಸರು ಹುಡುಕಿಕೊಂಡು ಬಂದಿರುವ ಮಾಹಿತಿ ತಿಳಿದು ಅಲ್ಲಿಂದ ಬೆಂಗಳೂರಿಗೆ ವಾಪಸಾಗಿದ್ದ. ಯಶವಂತಪುರದಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದ’ ಎಂದು ಹೇಳಿದ್ದಾರೆ.

‘ಹೆಣ್ಣೂರು, ಆವಲಹಳ್ಳಿ, ಗಿರಿನಗರ, ಹೆಬ್ಬಾಳ, ರಾಮಮೂರ್ತಿನಗರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 9 ಸರಗಳವು ಪ್ರಕರಣಗಳಲ್ಲಿ ಆತ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಇದಕ್ಕೂ ಮುನ್ನ ಆತನ ವಿರುದ್ಧ 23 ಪ್ರಕರಣಗಳು ದಾಖಲಾಗಿದ್ದವು. ಜೆ.ಪಿ.ನಗರ, ಬನಶಂಕರಿ, ಬಾಣಸವಾಡಿ ಸೇರಿದಂತೆ ವಿವಿಧೆಡೆ ನಡೆದಿರುವ ಕಳ್ಳತನ ಪ್ರಕರಣಗಳಲ್ಲೂ ಆತ ಪಾಲ್ಗೊಂಡಿದ್ದ. 2018ರಲ್ಲಿ ನಡೆದಿದ್ದ ಎರಡು ಕಳವು ಪ್ರಕರಣಗಳಲ್ಲಿಹೆಣ್ಣೂರು ಪೊಲೀಸರು ಆತನನ್ನು ಬಂಧಿಸಿದ್ದರು. ನಂತರವೂ ಆತ ಸರಗಳವು ಮುಂದುವರಿಸಿದ್ದ. ತನ್ನ ಇರುವಿಕೆಯ ಮಾಹಿತಿ ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ಆಗಾಗ ಮನೆ ಬದಲಿಸುತ್ತಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT