ಬುಧವಾರ, ಡಿಸೆಂಬರ್ 8, 2021
18 °C
‘ಮಹಾತ್ಮರ ಚರಿತಾಮೃತ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೇಳಿಕೆ

ಮಠಾಧೀಶರ ವಿಶ್ವಾಸ, ನಂಬಿಕೆಗೆ ವ್ಯತ್ಯಾಸ‌ ಆಗದಂತೆ ಕೆಲಸ ಮಾಡುತ್ತೇನೆ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಠಾಧೀಶರು ಇಟ್ಟಿರುವ ವಿಶ್ವಾಸ, ನಂಬಿಕೆಗೆ ಕಿಂಚಿತ್ತೂ ವ್ಯತ್ಯಾಸ‌ ಆಗದಂತೆ ಕೆಲಸ ಮಾಡುತ್ತೇನೆ. ನಿಮ್ಮ ಮನೆಗೆ ಹೂವನ್ನು ತರುತ್ತೇನೆಯೇ ಹೊರತು ಹುಲ್ಲನ್ನಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಮೀಜಿಗಳಿಗೆ ಭರವಸೆ ನೀಡಿದರು.   

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗ್ರಂಥ ಲೋಕಾರ್ಪಣೆ ಸ್ವಾಗತ ಸಮಿತಿ ಮತ್ತು ಬಸವ ವೇದಿಕೆಯು ನಗರದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ ‘ಮಹಾತ್ಮರ ಚರಿತಾಮೃತ’ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. 

‘ಕೋವಿಡ್ ಸೇರಿದಂತೆ ಇತರ ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಅವುಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಹೇರಳವಾದ ನೈಸರ್ಗಿಕ ಸಂಪತ್ತುಗಳಿವೆ. ಅವುಗಳು ಸದ್ಬಳಕೆಯಾಗುವಂತೆ ಕ್ರಮಕೈಗೊಳ್ಳುತ್ತೇನೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗುವುದು’ ಎಂದರು.‌ 

‘ಕೋವಿಡ್ ಕಾಣಿಸಿಕೊಂಡ ಬಳಿಕ ಕರ್ಫ್ಯೂ ಸೇರಿದಂತೆ ವಿವಿಧ ಕ್ರಮಗಳಿಂದ ಬದುಕಿನಲ್ಲಿ ಸಾಕಷ್ಟು ವ್ಯತ್ಯಯಗಳಾಗಿವೆ. ಈ ಸಮಾಜದಲ್ಲಿ ಹೊರಗಡೆಯ ಬದುಕು ಏರುಪೇರಾಗಿಬಹುದು. ಆದರೆ, ಒಳಗಿನ ಬದುಕು ನಿರಂತರ ನಡೆಯುತ್ತಿದೆ. ಚಿಂತನೆಗೆ ಸ್ವಲ್ಪ ಸಮಯ ನೀಡಿದಲ್ಲಿ ಒಳ ಧ್ವನಿ ತಿಳಿಯುತ್ತದೆ. ಸಾವಿನ ನಂತರವೂ ಬದುಕುವ ಕಲೆಯನ್ನು ಮಹಾತ್ಮರು ತೋರಿಸಿಕೊಟ್ಟಿದ್ದಾರೆ. ಅವರ ಬದುಕನ್ನು ಇವತ್ತಿಗೂ ನೆನೆಪಿಸಿಕೊಳ್ಳುತ್ತೇವೆ. ಧನ–ಕನಕಗಳಿಲ್ಲದ ಭಾವಗಳ, ಸಂಬಂಧದ ಶ್ರೀಮಂತಿಕೆ ಬಿಟ್ಟು ಹೋಗಿದ್ದಾರೆ. ಮಹಾತ್ಮರು ಸಾಗಿದ ಬದುಕನ್ನು ಅನುಸರಿಸಿ ಹೆಜ್ಜೆ ಹಾಕಿದರೆ ಸಾರ್ಥಕತೆ ದೊರೆಯುತ್ತದೆ’ ಎಂದು ಹೇಳಿದರು. 

ವಸತಿ ಸಚಿವ ವಿ. ಸೋಮಣ್ಣ, ‘ಕೋವಿಡ್ ಸಮಯದಲ್ಲಿ ತಮ್ಮ ಅನುಭವ ಮತ್ತು ತಪಸ್ಸಿನ ಫಲದಿಂದ ಮಹಾತ್ಮರ ಚರಿತ್ರೆಯನ್ನು ಪ್ರಭುಚನ್ನಬಸವ ಸ್ವಾಮೀಜಿ ಕಟ್ಟುಕೊಟ್ಟಿದ್ದಾರೆ. ಇದು ಸರ್ಕಾರದ ಎಲ್ಲ ಗ್ರಂಥಾಲಯಗಳನ್ನು ಸೇರಬೇಕು. ತಪಸ್ವಿಗಳ ಸಂದೇಶ ಪ್ರತಿಯೊಬ್ಬರನ್ನೂ ತಲುಪಬೇಕು’ ಎಂದು ಹೇಳಿದರು. 

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ‘ಸಾವಿರ ಪುಟಗಳ ಬೃಹತ್ ಗ್ರಂಥದಲ್ಲಿ 216 ವಿಶ್ವವಿಭೂತಿಗಳ ಜೀವನ ಕಥನವನ್ನು ಕಟ್ಟಿಕೊಟ್ಟಿದ್ದಾರೆ. ಜಗತ್ತಿನ ಕಲ್ಯಾಣಕ್ಕಾಗಿ ತಾವು ದೀಪದಂತೆ ಉರಿದು, ಬೆಳಕು ನೀಡಿದ ಮಹಾನುಭಾವರ ದರ್ಶನವನ್ನು ಈ ಗ್ರಂಥದಲ್ಲಿ ಮಾಡಿಸಿದ್ದಾರೆ. ಚಿರಕಾಲ ಉಳಿಯುವಂತಹ ಮಹಾನ್ ಸಂಪುಟವನ್ನು ರಚಿಸಿರುವುದು ಒಂದು ಐತಿಹಾಸಿಕ ಸಾಧನೆ. ಒಬ್ಬೊಬ್ಬ ಮಹಾತ್ಮರ ಜೀವನವೂ ಒಂದೊಂದು ರೀತಿಯಲ್ಲಿ ವಿಶಿಷ್ಟವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

‘ಅನ್ಯ ಭಾಷೆಗೆ ಭಾಷಾಂತರಿಸಬೇಕು’
‘ಈ ಗ್ರಂಥವು ಸಮಾಜದಲ್ಲಿ ದೊಡ್ಡ ಪರಿಣಾಮ ಬೀರುವ ವಿಶ್ವಾಸವಿದೆ. ಯುವಕರು ಇಂತಹ ಪುಸ್ತಕಗಳನ್ನು ಓದಬೇಕು. ಆದರೆ, ಈ ಕಾಲದಲ್ಲಿ ದೊಡ್ಡ ದೊಡ್ಡ ಕೃತಿಗಳನ್ನು ಓದಲು ಸಮಯವಿಲ್ಲ. ಈ ಗ್ರಂಥವನ್ನು ವಿದ್ಯಾರ್ಥಿ ಆವೃತ್ತಿಯಲ್ಲಿ ಹೊರತಂದು, ವಿತರಿಸಿದರೆ ಶ್ರಮ ಸಾರ್ಥಕವಾಗುತ್ತದೆ. ಈ ಪುಸ್ತಕವು ಬೇರೆ ಬೇರೆ ಭಾಷೆಗಳಲ್ಲಿಯೂ ಭಾಷಾಂತರವಾಗಬೇಕು. ಕೆಲವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಪಂಚಾಯಿತಿ ಮಟ್ಟದ ಗ್ರಂಥಾಲಯವನ್ನೂ ತಲುಪಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಒತ್ತಾಯಿಸಿದರು.  

‘ನೈತಿಕತೆ ಹಾಳಾಗಿದೆ, ಮೌಲ್ಯಗಳು ಕುಸಿಯುತ್ತಿದೆ. ಶಾಲೆಗಳಲ್ಲಿ ಮಕ್ಕಳಿಗೆ ಇಂತಹ ಕೃತಿಗಳನ್ನು ಒದಗಿಸಬೇಕು. ಪುಸ್ತಕಗಳಿಗೆ ಕ್ರಾಂತಿ ಮಾಡುವ ಶಕ್ತಿಯಿದೆ. ಜೀವನವು ಆದರ್ಶಕ್ಕೆ ಹೊರತೇ, ಆಡಂಬರಕ್ಕೆ ಅಲ್ಲ ಎನ್ನುವುದು ಮಹಾತ್ಮರ ಚರಿತಾಮೃತ ಸವಿದಾಗ ತಿಳಿಯಲಿದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು