ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಶಾಸ್ತ್ರೀಯ ತೋಟ, ವೃಕ್ಷೋದ್ಯಾನ, ಕೆರೆ ಅಭಿವೃದ್ಧಿಗೆ ಚಾಲನೆ

ಹಸಿರು ಬೆಂಗಳೂರು ಸೃಷ್ಟಿಗೆ ಹೊಸ ಹೆಜ್ಜೆ: ಯಡಿಯೂರಪ್ಪ
Last Updated 30 ಜೂನ್ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ‘ಹಸಿರು ಬೆಂಗಳೂರು’ ಸೃಷ್ಟಿಯ ನಿಟ್ಟಿನಲ್ಲಿ ಹಲವು ಕಾರ್ಯಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.

‘ಕನ್ನಮಂಗಲದ 70 ಎಕರೆ ಪ್ರದೇಶದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸಸ್ಯಶಾಸ್ತ್ರೀಯ ತೋಟ, ಕೆ.ಆರ್. ಪುರ ವಲಯದ ಕಾಡುಗೋಡಿಯಲ್ಲಿ ವೃಕ್ಷೋದ್ಯಾನ ಉದ್ಘಾಟಿಸಿರುವುದಲ್ಲದೆ, ಕನ್ನಮಂಗಲ ಮುಳ್ಳಿನ ಕೆರೆ ಹಾಗೂ 500 ಎಕರೆ ವಿಸ್ತೀರ್ಣದ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಬೆಂಗಳೂರು ಪೂರ್ವ ಭಾಗವನ್ನು ಹಸಿರುಮಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ’ ಎಂದು ಯಡಿಯೂರಪ್ಪ ಹೇಳಿದರು.

‘ಕನ್ನಮಂಗಲದಲ್ಲಿ 18 ಎಕರೆ ವಿಸ್ತೀರ್ಣದಲ್ಲಿರುವ ಮುಳ್ಳು ಕೆರೆಯನ್ನು ಅತಿಕ್ರಮಣ ಮಾಡಿಕೊಳ್ಳಲಾಗುತ್ತಿತ್ತು. ಈಗ ಸುತ್ತಲೂ ಬೇಲಿ ಹಾಕಿಸಿ ಕೆರೆಯ ರಕ್ಷಣೆಗೆ ಒತ್ತು ನೀಡಲಾಗಿದೆ. ಈ ಕೆರೆ ಅಭಿವೃದ್ಧಿಯಾಗಿರುವುದು ಸುತ್ತ–ಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೂ ಕಾರಣವಾಗಲಿದೆ’ ಎಂದು ಅವರು ಹೇಳಿದರು.

‘508 ಎಕರೆ ಪ್ರದೇಶದಲ್ಲಿನ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ಬೆಂಗಳೂರು ಮಿಷನ್-2022ರ ಅಡಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯೊಂದಿಗೆ ಶೀಘ್ರವಾಗಿ ಕೆಲಸ ಪ್ರಾರಂಭಿಸಲಾಗುತ್ತದೆ’ ಎಂದು ಅವರು ಹೇಳಿದರು.

‘ನಗರದಲ್ಲಿ ಬೆಳ್ಳಂದೂರು ಕೆರೆ ಬಿಟ್ಟರೆ, ಎಲೆ ಮಲ್ಲಪ್ಪ ಶೆಟ್ಟಿ ಕೆರೆಯೇ ದೊಡ್ಡದು. ಇದರ ಅಭಿವೃದ್ಧಿಗೆ ಪೂರಕವಾದ ಅನುದಾನ ಶೀಘ್ರ ಬಿಡುಗಡೆ ಮಾಡಿದರೆ, ಈ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೂ ಸಫಲವಾಗಲಿದೆ’ ಎಂದು ಅರಣ್ಯ ಸಚಿವ, ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದರು.

‘ಬಿಜೆಪಿ ಅಧಿಕಾರದಲ್ಲಿದ್ದಾಗಲೆಲ್ಲ ಬೆಂಗಳೂರು ಪೂರ್ವ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈಗ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌, ವೈಟ್‌ಫೀಲ್ಡ್ ಮಾರ್ಗಗಳಲ್ಲಿಯೂ ಮೆಟ್ರೊ ಕಾಮಗಾರಿ ಚುರುಕಿನಿಂದ ನಡೆಯುತ್ತಿದ್ದು, ಮೆಟ್ರೊ ರೈಲು ಸಂಚಾರ ಆರಂಭವಾದರೆ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದರು.

ತೋಟಗಾರಿಕೆ ಸಚಿವ ಆರ್.ಶಂಕರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ,ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಉಪಸ್ಥಿತರಿದ್ದರು.

ತಿರುಗು ರಂಗಮಂಚದ ರಂಗಮಂದಿರ
* ನಿಂಬೆಕಾಯಿಪುರದಲ್ಲಿ ಜನಪದರು ರಂಗಮಂದಿರ ಉದ್ಘಾಟನೆ
* 1 ಎಕರೆ ವಿಸ್ತೀರ್ಣದಲ್ಲಿ, ₹3.5 ಕೋಟಿ ವೆಚ್ಚದಲ್ಲಿ ನಿರ್ಮಾಣ
* 20 ಅಡಿ ವ್ಯಾಸದ ತಿರುಗು ರಂಗಮಂಚದ (ರಿವಾಲ್ವಿಂಗ್ ಸ್ಟೇಜ್‌) ಆಕರ್ಷಣೆ
* ಮುಖ್ಯವೇದಿಕೆಯ ಮುಂಭಾಗ ಗ್ರೀಕ್ ಮಾದರಿಯ ಕಿರುವೇದಿಕೆ ನಿರ್ಮಾಣ
* ಹವಾನಿಯಂತ್ರಿತ ಗ್ರೀನ್‌ ರೂಮ್‌ಗಳು
* ನಿರಂತರ ರಂಗಚಟುವಟಿಕೆ ಹಮ್ಮಿಕೊಳ್ಳುವ ಗುರಿ

ವಾಜಪೇಯಿ ಸಸ್ಯಶಾಸ್ತ್ರೀಯ ತೋಟವೆಂಬ ‘ಮಿನಿ ಲಾಲ್‌ಬಾಗ್‌‘
* ಕನ್ನಮಂಗಲದ 70 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ
* ಸಸ್ಯಶಾಸ್ತ್ರೀಯ ತೋಟಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಹೆಸರು
* ಉತ್ಕೃಷ್ಟ ತೆಂಗಿನ ತಳಿಯ ಮರಗಳು ಇಲ್ಲಿನ ವಿಶೇಷ
* ಗೋಡಂಬಿ, ಹಲಸು, ನೇರಳೆ ಮರಗಳು
* ಔಷಧಿ, ಸುಗಂಧಿತ ಗಿಡಗಳು ಮತ್ತು ಅರಣ್ಯ ಜಾತಿ ಮರಗಳು
* ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಲಭ್ಯ ವ್ಯವಸ್ಥೆ
* ನಡಿಗೆ ಪಥ, ಕೃಷಿ ಹೊಂಡ ನಿರ್ಮಾಣ

ಕಾಡುಗೋಡಿಯಲ್ಲಿ ವೃಕ್ಷೋದ್ಯಾನ ಆಕರ್ಷಣೆ
* ಕೆ.ಆರ್. ಪುರ ವಲಯದಲ್ಲಿನ 22 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿ
* ಚಿಣ್ಣರ ಉದ್ಯಾನ, ವಾಯುವಿಹಾರ ನಡಿಗೆ ಪಥ, ಮಿನಿ ಜಿಮ್ ವ್ಯವಸ್ಥೆ
* ಕುಡಿಯುವ ನೀರು, ಶೌಚಾಲಯ ಸೌಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT