ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ಮಾರಾಟ ಜಾಲ: ಆರೋಪಿಗಳ ನಂಟಿನ ತನಿಖೆ

ಮಕ್ಕಳ ಖರೀದಿಸಿದ್ದ ಪೋಷಕರ ವಿರುದ್ಧ ಸಿಐಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
Published 29 ಜೂನ್ 2024, 20:17 IST
Last Updated 29 ಜೂನ್ 2024, 20:17 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ಹಾಗೂ ಬೆಂಗಳೂರಿನಲ್ಲಿ ಮಕ್ಕಳ ಮಾರಾಟ ಜಾಲದಲ್ಲಿ ಬಂಧಿತ ಆರೋಪಿಗಳ ನಡುವೆ ಪರಸ್ಪರ ನಂಟಿತ್ತೇ ಎಂಬುದನ್ನು ಪತ್ತೆ ಹಚ್ಚಲು ಸಿಐಡಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಕಳ್ಳತನ, ಮಾರಾಟ ಜಾಲ ಸಕ್ರಿಯವಾಗಿದ್ದು ಕಳೆದ ವಾರದ ಐದು ಮಕ್ಕಳನ್ನು ರಕ್ಷಿಸಿ, ಆರೋಗ್ಯ ಇಲಾಖೆ ಫಾರ್ಮಸಿಸ್ಟ್, ಇಬ್ಬರು ಸ್ಟಾಫ್ ನರ್ಸ್ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಕಳೆದ ನವೆಂಬರ್‌ನಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದ ಹಸುಗೂಸುಗಳ ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ 10 ಮಂದಿಯನ್ನು ಬಂಧಿಸಿದ್ದರು. ಈ ಎರಡು ತಂಡಗಳ ನಡುವೆ ನಂಟಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಐಡಿ ಪೊಲೀಸರು ಹೇಳಿದರು.‌

‘ಬೆಂಗಳೂರಿನಲ್ಲಿ ಬಂಧಿಸಿದ್ದ ಆರೋಪಿಗಳು ತಮಿಳುನಾಡಿನ ಕೆಲವು ಆಸ್ಪತ್ರೆಗಳ ವೈದ್ಯರ ಜೊತೆಗೆ ಸಂಪರ್ಕ ಹೊಂದಿದ್ದರು. ಹಣದ ಅವಶ್ಯವಿರುವ ಮಹಿಳೆಯರನ್ನು ಪತ್ತೆ ಮಾಡುತ್ತಿದ್ದರು. ಅವರಿಗೆ ಕೃತಕ ಗರ್ಭಧಾರಣೆಗೆ ಒಳಗಾಗುವಂತೆ ಮನವೊಲಿಸುತ್ತಿದ್ದರು. ಕೃತಕ ಗರ್ಭಧಾರಣೆಗೆ ಒಳಗಾದ ಮಹಿಳೆಯರಿಗೆ ಹಣ ನೀಡುತ್ತಿದ್ದರು. ಗರ್ಭಿಣಿಯರಿಗೆ ಆರೋಪಿಗಳೇ ಆರೈಕೆ ಮಾಡುತ್ತಿದ್ದರು. ನಂತರ, ₹8ರಿಂದ ₹10 ಲಕ್ಷಕ್ಕೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದರು’ ಎಂದು ತನಿಖೆಯಿಂದ ಗೊತ್ತಾಗಿತ್ತು.

ತುಮಕೂರಿನಲ್ಲಿ ಬಂಧಿತ ಆರೋಪಿಗಳು, ವಿವಾಹಿತ ಮಹಿಳೆಗೆ ಜನಿಸಿದ ಮಗುವನ್ನು ಪಡೆದುಕೊಂಡು ಅದನ್ನು ಮಧ್ಯವರ್ತಿಗಳ ಮೂಲಕ ₹2 ಲಕ್ಷದಿಂದ ₹3 ಲಕ್ಷದ ವರೆಗೂ ಮಾರಾಟ ಮಾಡುತ್ತಿದ್ದರು. ಈ ಎರಡು ತಂಡಗಳ ನಡುವೆ ಸಂಪರ್ಕವಿತ್ತೇ ಎಂಬುದನ್ನು ಪತ್ತೆ ಹಚ್ಚಲು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪೋಷಕರ ವಿರುದ್ಧ ಪ್ರಕರಣ:

ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳಿಂದ ಮಕ್ಕಳನ್ನು ಅಕ್ರಮವಾಗಿ ಖರೀದಿಸಿದ್ದ ಆರೋಪದ ಮೇಲೆ ಪೋಷಕರ ವಿರುದ್ಧ ಸಿಐಡಿ ಪೊಲೀಸ್‌ ಠಾಣೆಯಲ್ಲಿ ಇದುವರೆಗೂ ಐದು ಪ್ರಕರಣಗಳು ದಾಖಲಾಗಿವೆ. ಕಳೆದ ನವೆಂಬರ್‌ನಲ್ಲಿ ಆರೋಪಿಗಳಿಂದ ಪೋಷಕರು ಮಕ್ಕಳನ್ನು ಖರೀದಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು.

‘ಮಕ್ಕಳ ಮೂಲ ಪೋಷಕರನ್ನು ವಿಚಾರಣೆ ನಡೆಸಲಾಗಿದೆ. ಮಕ್ಕಳನ್ನು ಖರೀದಿಸಿದ ಪೋಷಕರು, ಮಕ್ಕಳನ್ನು ಚೆನ್ನಾಗಿ ಆರೈಕೆ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಯನ್ನು ಹೇಗೆ ನಡೆಸುವುದು ಎಂದು ಮಕ್ಕಳ ಕಲ್ಯಾಣ ಸಮಿತಿಯ ಸಲಹೆಯನ್ನು ಸಿಐಡಿ ಕೇಳಿದೆ. ಕಾನೂನು ಬದ್ಧವಾಗಿ ಮಕ್ಕಳನ್ನು ದತ್ತು ಪಡೆಯುವುದಕ್ಕೆ ಅವಕಾಶವಿದೆ. ಆದರೆ, ಮಕ್ಕಳ ಕಳ್ಳ ಸಾಗಣೆ ಮಾಡುವ ಆರೋಪಿಗಳಿಂದ ಖರೀದಿಸುವುದು ಅಪರಾಧ ಎಂದು ಸಮಿತಿ ತಿಳಿಸಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT