ಭಾನುವಾರ, ಫೆಬ್ರವರಿ 5, 2023
21 °C

ಚಿಲುಮೆ: ವಿಚಾರಣೆಗೆ ಹಾಜರಾದ ಐಎಎಸ್‌ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಲುಮೆ ಸಂಸ್ಥೆ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಹಲಸೂರು ಗೇಟ್ ಠಾಣೆ ಪೊಲೀಸರು, ಐಎಎಸ್ ಅಧಿಕಾರಿಗಳಾದ ಕೆ. ಶ್ರೀನಿವಾಸ್ ಹಾಗೂ ಎಸ್. ರಂಗಪ್ಪ ಅವರನ್ನು ಶನಿವಾರ ವಿಚಾರಣೆ ನಡೆಸಿದರು.

ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಆರೋಪದಡಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಅದನ್ನು ಸ್ವೀಕರಿಸಿದ್ದ ರಂಗಪ್ಪ, ಶನಿವಾರ ಬೆಳಿಗ್ಗೆಯೇ ವಿಚಾರಣೆ ಎದುರಿಸಿದರು. ಮಧ್ಯಾಹ್ನ 3 ಗಂಟೆಗೆ ಶ್ರೀನಿವಾಸ್ ಪ್ರತ್ಯೇಕವಾಗಿ ಠಾಣೆಗೆ ಬಂದು ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದರು.

‘ಅಕ್ರಮವಾಗಿ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅಧಿಕಾರಿಗಳು ಸಹಕಾರ ನೀಡಿದ್ದರು ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಈ ಸಂಬಂಧ ನಾಲ್ವರು ಬಿಬಿಎಂಪಿ ಅಧಿಕಾರಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಅವರೆಲ್ಲರ ಹೇಳಿಕೆ ಆಧರಿಸಿ ಮತ್ತಷ್ಟು ಮಾಹಿತಿ ಕಲೆಹಾಕಲು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವಿಚಾರಣೆ ಎದುರಿಸಿದ ಇಬ್ಬರೂ ಅಧಿಕಾರಿಗಳು, ಕೆಲ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದಾರೆ. ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಅವರಿಬ್ಬರು, ವೈಯಕ್ತಿಕ ಕಾರಣಗಳನ್ನು ನೀಡಿ ಕಾಲಾವಕಾಶ ನೀಡುವಂತೆ ಕೋರಿದ್ದರು. ಹೀಗಾಗಿ, ಬುಧವಾರ (ಡಿ. 7) ಪುನಃ ವಿಚಾರಣೆ ಬರುವಂತೆ ತಿಳಿಸಿ ಅವರನ್ನು ವಾಪಸ್‌ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ಪ್ರಾಥಮಿಕ ಹೇಳಿಕೆ ಪರಿಶೀಲನೆ: ‘ಶ್ರೀನಿವಾಸ್ ಹಾಗೂ ರಂಗಪ್ಪ ಅವರು ಕೃತ್ಯಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ಹೇಳಿಕೆ ನೀಡಿದ್ದಾರೆ. ತಾವು ಯಾವುದೇ ಆದೇಶಗಳನ್ನು ನೀಡಿಲ್ಲ. ಚಿಲುಮೆ ಸಂಸ್ಥೆಗೆ ಸಹಾಯ ಮಾಡಿಲ್ಲವೆಂದು ತಿಳಿಸಿದ್ದಾರೆ. ಹೇಳಿಕೆ ಪರಿಶೀಲನೆ ನಡೆಸಬೇಕಿದೆ’ ಎಂದು ಅಧಿಕಾರಿ ಹೇಳಿದರು.

‘ಇಬ್ಬರೂ ಐಎಎಸ್ ಅಧಿಕಾರಿಗಳು ಮೌಖಿಕವಾಗಿ ಸೂಚನೆ ನೀಡಿದ್ದಾಗಿ ಆರೋಪಿತ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ಈ ಹೇಳಿಕೆಯನ್ನು ಇಬ್ಬರೂ ಐಎಎಸ್ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು