ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಕೀಲಿಮಣೆ ಬಿಟ್ಟೆ ಕುಂಚಕ್ಕೆ ಕೈಯಿಟ್ಟೆ...

ಸಂತೆಯಲ್ಲಿ ಕಂಡ ಬಣ್ಣ ಬಣ್ಣದ ಮುಖಗಳು; ಒಂದೊಂದು ಚಿತ್ರದ ಹಿಂದೆ ಒಂದೊಂದು ಕತೆ
Last Updated 6 ಜನವರಿ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ರೊದಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಕೆಲಸ, ಕೈತುಂಬಾ ಸಂಬಳ. ಕೀಲಿಮಣೆ ಬಿಟ್ಟು ಚಿತ್ರ ಕಲಾ ಪರಿಷತ್‌ಗೆ ಬಂದು ಕುಂಚ ಹಿಡಿದೆ. ಮತ್ತೆ ಮಕ್ಕಳ ಜತೆ ಕಲಿಯುವುದರಲ್ಲಿ ಖುಷಿ, ಹೊಸತನ ಇದೆ. ಈಗ ಮನಸ್ಸಿನ ತುಂಬಾ ತೃಪ್ತಿಯಿದೆ...–ಕೇರಳದ ಚಿತ್ರ ಕಲಾವಿದೆ ಶಾನಾ ಗೋಕಲ್‌ ವಿವರಿಸುವಾಗ ಅವರ ಕಣ್ಣುಗಳಲ್ಲಿ ಹೊಳಪು ಇತ್ತು.

ಚಿತ್ರಕಲಾ ಪರಿಷತ್‌ ವತಿಯಿಂದ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ಚಿತ್ರಸಂತೆಯಲ್ಲಿ ಚೌಕಟ್ಟುಗಳ ಹಿಂದಿರುವ ಕಲಾವಿದರು ತಮ್ಮ ಭಾವ ತೆರೆದಿಟ್ಟರು.

‘ಕಲಾ ಆಸಕ್ತರಿಗೆ ವಾರಾಂತ್ಯದಲ್ಲಿ ಕಲಿಸುತ್ತೇನೆ. ಅವರವರ ಭಾವದ ಬಣ್ಣಗಳು ಕ್ಯಾನ್ವಾಸ್‌ನಲ್ಲಿ ಮೂಡುತ್ತವೆ. ನನ್ನ ವೃತ್ತಿ – ಪ್ರವೃತ್ತಿ ಇದೇ. ಇದು ಖುಷಿ ಕೊಟ್ಟಿದೆ’ ಎಂದರು ರಾಜಾಜಿನಗರದ ಚಿತ್ರಕಲಾ ಶಿಕ್ಷಕಿ ಅರುಣಾ ಗಾಂಧಿ.

ಪಶ್ಚಿಮ ಬಂಗಾಳದಿಂದ ಬಂದ ತಪನ್‌ ಕರ್ಮಾಕರ್‌ ಅವರದ್ದು ಇನ್ನೂ ಭಿನ್ನವಾದ ಮಾತು. ‘ನನ್ನದು ವ್ಯಕ್ತಿಚಿತ್ರ ಮಾಧ್ಯಮ. ಹಾಗೆಯೇ ಅಧ್ಯಾತ್ಮ ಚಿಂತನೆ ಹೆಚ್ಚು ಇದೆ. ಮೊದಲು ಭಗವಂತನನ್ನು ತಿಳಿದುಕೊಳ್ಳಬೇಕು. ಅಂಥ ಥೀಮ್‌ಗಳನ್ನು ನಾನು ಬಳಸುತ್ತೇನೆ’ ಎಂದರು ಅವರು.

ಉಡುಪಿಯ ದಾಮೋದರ ಎಲ್‌. ಆಚಾರ್ಯ ಅವರು ಹೈಸ್ಕೂಲ್‌ ಮೇಷ್ಟ್ರಾಗಿ ನಿವೃತ್ತರಾದವರು. ಧ್ಯಾನ ನಿರತ ಬುದ್ಧ, ತೈಯಂ ನೃತ್ಯ, ಯಕ್ಷಗಾನ, ಸುನಾಮಿಯಿಂದ ಉಕ್ಕಿದ ಸಮುದ್ರದ ನೀರು, ಪ್ರಕೃತಿ ಇವು ಅವರ ಚಿತ್ರದ ವಸ್ತುಗಳು.

‘ನಗರ ಪ್ರದೇಶಗಳಲ್ಲಿ ಚಿತ್ರಕಲೆಗೆ ಬೇಡಿಕೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಮುಖ್ಯವಾದ ಕಸುಬಾಗಿ ಮಾಡಿಕೊಳ್ಳುವುದು ಕಷ್ಟ. ಚಿತ್ರಸಂತೆಯಲ್ಲಿ ನನ್ನ ಕೃತಿಗಳಿಗೆ ಸಾಕಷ್ಟು ಬೇಡಿಕೆ ಇದೆ’ ಎಂದರು ಅವರು.

ಹೈದರಾಬಾದ್‌ನ ಕಲಾವಿದೆ ಜಯಶ್ರೀ ಅವರದ್ದು ವಿಷಯಾಧಾರಿತ ಚಿತ್ರಗಳು. ಹೆಣ್ಣು ಮಗು ಉಳಿಸಿ, ಪರಿಸರ ಉಳಿಸಿ, ರೈತರನ್ನು ರಕ್ಷಿಸಿ ಈ ಮೂರು ಧ್ವನಿಗಳ ಮೇಲೆ ಅವರು ತಮ್ಮ ಕೃತಿಗಳನ್ನು ಜಲವರ್ಣದಲ್ಲಿ ಮೂಡಿಸಿದ್ದರು.

ಗಂಜೀಫಾ ಚಿತ್ರಕಲೆ: ನಾಗೇಶ್‌ ಅವರು ಗಂಜೀಫಾ ಚಿತ್ರಕಲೆ ಪ್ರದರ್ಶನಕ್ಕಿಟ್ಟಿದ್ದರು. ₹1 ಸಾವಿರದಿಂದ ₹ 10 ಸಾವಿರದವರೆಗಿನ ಕೃತಿಗಳು ಮಾರಾಟಕ್ಕಿದ್ದವು. ದೇವರು, ಅವತಾರಗಳು, ರಾಜರು, ರಾಜ ಮನೆತನಗಳು ಅವರ ಚಿತ್ರ ಚೌಕಟ್ಟಿನಲ್ಲಿ ಕಂಡ ವಸ್ತುಗಳು. ‘ತಾತನ ಕಾಲದಿಂದ ಬಂದ ಚಿತ್ರಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ’ ಎಂದರು.

‘ಮೊದಲು ಚರ್ಮದ ಮೇಲೆ ಬರೆಯುತ್ತಿದ್ದ ಗಂಜೀಫಾ ಕಲಾ ಚಿತ್ರಗಳು ಈಗ ಡ್ರಾಯಿಂಗ್‌ ಷೀಟ್‌ಗೆ ಬದಲಾಗಿವೆ. ಕಲಾ ಮಾಧ್ಯಮದಲ್ಲಿ ನಾವಿನ್ಯತೆ ಅಳವಡಿಸಿಕೊಂಡಿದ್ದೇನೆ’ ಎಂದರು.

ಸಂತೆಯಲ್ಲಿ ಕಂಡದ್ದು...
ಹಾರುವ ಕುದುರೆ, ಕಥಕ್‌ ನೃತ್ಯ, ಹುರಿ ಮೀಸೆಯಲ್ಲಿ ಕಂಡ ಅಂಬರೀಷ್‌, ಉಬ್ಬು ಶಿಲ್ಪಗಳು, ಆಧುನಿಕ ರೂಪ ಪಡೆದು ಚಿಕ್ಕದಾಗಿ ಅರಳಿದ ತೊಗಲುಗೊಂಬೆಗಳು, ತೊಗಲು ಗೊಂಬೆಯ ವಿನ್ಯಾಸ ಹೊಂದಿದ ಗೂಡುದೀಪ, ಲೋಹಶಿಲ್ಪಗಳು, ಉಬ್ಬು ಶಿಲ್ಪ, ಕೈಯಲ್ಲೇ ರಚಿಸಿದ ಶುಭಾಶಯ ಪತ್ರಗಳು, ಗೋಡೆಯಿಡೀ ಅಳವಡಿಸಬಹುದಾದ ಚಿತ್ರಗಳು, ಗುಜರಿ ವಸ್ತುಗಳಿಂದ ಸಿದ್ಧಪಡಿಸಿದ ಕಲಾಕೃತಿಗಳು ಸಂತೆಯಲ್ಲಿ ಕಂಡುಬಂದವು. ಚಿತ್ರರಚನಾ ಸಾಮಗ್ರಿಗಳೂ ಮಾರಾಟಕ್ಕಿದ್ದವು.

ಕ್ಯಾನ್ವಾಸ್‌, ಸಾಮಾನ್ಯ ಕಾರ್ಡ್‌ಬೋರ್ಡ್‌, ಡ್ರಾಯಿಂಗ್‌ ಷೀಟ್‌ ಎಲ್ಲವೂ ಬಣ್ಣ ಬಳಿದುಕೊಂಡು ಚಿತ್ರಗಳಾಗಿ ಜೀವ ಪಡೆದಿದ್ದವು.

ಹಲವು ಮಕ್ಕಳು ಮುಖದಲ್ಲಿಯೇ ಚಿತ್ರ ಚಿತ್ತಾರ ಬರೆಸಿಕೊಂಡು ಖುಷಿಪಟ್ಟರು. ಚೆನ್ನೈ ಲಲಿತಕಲಾ ಕಾಲೇಜಿನ ವಿದ್ಯಾರ್ಥಿಗಳು ಸ್ಥಳದಲ್ಲೇ ವ್ಯಕ್ತಿಗಳ ಭಾವಚಿತ್ರ ಬರೆದರು.

*
ಮುಂದಿನ ವರ್ಷದಿಂದ ಚಿತ್ರ ಸಂತೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲು ಪ್ರತ್ಯೇಕವಾದ ಸ್ಥಳ ಗುರುತಿಸಿ ಅಲ್ಲಿ ಆಯೋಜಿಸಲಾಗುವುದು.
-ಡಿ.ಕೆ.ಶಿವಕುಮಾರ್‌, ಕನ್ನಡ ಸಂಸ್ಕೃತಿ ಮತ್ತು ಜಲಸಂಪನ್ಮೂಲ ಸಚಿವ

*
ಈ ಪ್ರದರ್ಶನದಲ್ಲಿ ಸೃಜನಶೀಲ ಪ್ರತಿಕ್ರಿಯೆಯೊಂದು ಹೊಸ ತಲೆಮಾರಿಗೆ ತಲುಪಿದೆ. ಇದು ಆಶಾದಾಯಕ ಬೆಳವಣಿಗೆ
-ಎಂ.ಎಚ್‌.ಕೃಷ್ಣಯ್ಯ, ಕಲಾ ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT