ಬುಧವಾರ, ಮೇ 12, 2021
18 °C
ಖಾತಾ ಶುಲ್ಕ, ಅಭಿವೃದ್ಧಿ ಶುಲ್ಕ; ಉದ್ದಿಮೆ ಪರವಾನಗಿ ಶುಲ್ಕ ಪರಿಷ್ಕರಣೆ

ಸಂಪನ್ಮೂಲ ಸಂಗ್ರಹಕ್ಕೆ ಇನ್ನಿಲ್ಲದ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ರಾಜ್ಯ ಸರ್ಕಾರ ಲಭ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಖಾತಾ ಶುಲ್ಕ, ಅಭಿವೃದ್ಧಿ ಶುಲ್ಕ ಹಾಗೂ ಉದ್ದಿಮೆ ಪರವಾನಗಿ ಶುಲ್ಕಗಳನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೂ ಸೂಚನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಧಿಸುತ್ತಿರುವ ವಿವಿಧ ಶುಲ್ಕಗಳನ್ನು 2016ರ ಬಳಿಕದ ಹಣದುಬ್ಬರ ದರದ ಶೇಕಡಾವಾರು ಪ್ರಮಾಣದ ಆಧಾರದಲ್ಲಿ ಪರಿಷ್ಕರಿಸುವಂತೆಯೂ ಸಲಹೆ ನೀಡಿದೆ.

ಆಸ್ತಿ ನೋಂದಣಿ ವೇಳೆ ವಿಧಿಸುವ ಮುದ್ರಾಂಕ ಶುಲ್ಕದ ಮೇಲೆ ಶೇ 2ರಷ್ಟು ಖಾತಾ ಶುಲ್ಕವನ್ನು ಬಿಬಿಎಂಪಿ ವಸೂಲಿ ಮಾಡುತ್ತಿದೆ. ಮುದ್ರಾಂಕ ಶುಲ್ಕವು ಆಯಾ ಜಾಗದ ಮಾರ್ಗಸೂಚಿ ಮೌಲ್ಯದ ಆಧಾರದಲ್ಲಿ ನಿಗದಿಯಾಗಿರುತ್ತದೆ. ಹಾಗಾಗಿ ಈ ದರವು ಕಾಲ ಕಾಲಕ್ಕೆ ಪರಿಷ್ಕರಣೆ ಆಗುತ್ತಲೇ ಇದೆ. ಕೊರೊನಾ ಸೋಂಕು ವ್ಯಾಪಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದನ್ನು ಮತ್ತೆ ಹೆಚ್ಚಿಸುವುದು ಉಚಿತವೇ ಎಂಬ ಇಕ್ಕಟ್ಟಿನಲ್ಲಿ ಬಿಬಿಎಂಪಿ ಸಿಲುಕಿದೆ.

‘ಖಾತಾ ನೋಂದಣಿಗೆ ನಾವು ಈಗಾಗಲೇ ಮುದ್ರಾಂಕ ಶುಲ್ಕದ ಮೇಲೆ ಶೇ 2ರಷ್ಟು ಶುಲ್ಕ ಪಡೆಯುತ್ತಿದ್ದೇವೆ. ಮುದ್ರಾಂಕ ಶುಲ್ಕವನ್ನು ಸರ್ಕಾರ ಪರಿಷ್ಕರಿಸಿದರೆ ಖಾತಾ ಶುಲ್ಕವೂ ತನ್ನಿಂದ ತಾನೇ ಪರಿಷ್ಕರಣೆ ಆಗಲಿದೆ. ಹಾಗಾಗಿ ಸರ್ಕಾರದ ಮಟ್ಟದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು. ಆದರೂ ಮುದ್ರಾಂಕ ಶುಲ್ಕದ ಮೇಲೆ ಶೇ 2ಕ್ಕಿಂತ ಹೆಚ್ಚು ಖಾತಾ ಶುಲ್ಕ ವಸೂಲಿ ಮಾಡುವ ಸಾಧ್ಯತೆ ಬಗ್ಗೆಯೂ ಪರಿಶೀಲಿಸುತ್ತೇವೆ. ಈ ಬಗ್ಗೆ ವಾರದೊಳಗೆ ತೀರ್ಮಾನಕ್ಕೆ ಬರಲಿದ್ದೇವೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ಪ್ರತಿ ಚದರ ಅಡಿಗೆ ವಾಣಿಜ್ಯ ಆಸ್ತಿಗೆ ₹ 600 ಹಾಗೂ ವಸತಿ ಕಟ್ಟಡಗಳಿಗೆ ₹ 500ರಷ್ಟು ಅಭಿವೃದ್ಧಿ ಶುಲ್ಕ ನಿಗದಿಪಡಿಸಿದ್ದೆವು. ಈ ಕುರಿತ ಅರ್ಜಿ ವಿಲೇ ಮಾಡಿದ್ದ ಹೈಕೋರ್ಟ್‌ ಶುಲ್ಕದ ಪ್ರಮಾಣವನ್ನು ತಗ್ಗಿಸುವಂತೆ ನಿರ್ದೇಶನ ನೀಡಿತ್ತು. ಪ್ರಸ್ತುತ ವಸತಿ ಕಟ್ಟಡಕ್ಕೆ ಚದರ ಅಡಿಗೆ ₹ 200 ಹಾಗೂ ವಾಣಿಜ್ಯ ಕಟ್ಟಡಗಳಿಗೆ ₹ 250 ಅಭಿವೃದ್ದಿ ಶುಲ್ಕ ವಿಧಿಸಲಾಗುತ್ತಿದೆ. ಇದನ್ನೂ ಪರಿಷ್ಕರಿಸುವ ಬಗ್ಗೆ ತಜ್ಞರಿಂದ ಸಲಹೆ ಪಡೆದು ತೀರ್ಮಾನಕ್ಕೆ ಬರಲಿದ್ದೇವೆ’ ಎಂದರು.

‘ಉದ್ಯಮಿಗಳಿಗೆ ಹೊರೆ ಆಗದಂತೆ ಶುಲ್ಕ ಪರಿಷ್ಕರಣೆ’
2016ರ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಶುಲ್ಕ ಹೆಚ್ಚಳ ಮಾಡಿಲ್ಲ. ಕೊರೊನಾದಿಂದಾಗಿ ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿವೆ. ಹಾಗಾಗಿ ಉದ್ಯಮಿಗಳು ಹೊಸ ಪರವಾನಗಿ ಶುಲ್ಕ ಹಾಗೂ ನವೀಕರಣ ಶುಲ್ಕ ಕಟ್ಟುವುದಕ್ಕೂ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ, ಸರ್ಕಾರವು ಉದ್ದಿಮೆ ಪರವಾನಗಿ ಶುಲ್ಕ ಪರಿಷ್ಕರಿಸುವಂತೆ ಪಾಲಿಕೆಗೆ ಸೂಚಿಸಿದೆ.

‘ಉದ್ದಿಮೆ ಪರವಾನಗಿ ಶುಲ್ಕ ಪರಿಷ್ಕರಿಸುವಂತೆ ಸರ್ಕಾರದಿಂದ ನಿರ್ದೇಶನ ಬಂದಿರುವುದು ನಿಜ. ಉದ್ದಿಮೆದಾರರಿಗೆ ಹೆಚ್ಚಿನ ಹೊರೆ ಬೀಳದಂತೆ ಹಾಗೂ ಪಾಲಿಕೆಗೂ ವರಮಾನ ಬರುವ ರೀತಿ ಶುಲ್ಕ ಪರಿಷ್ಕರಿಸಲಿದ್ದೇವೆ. ಈ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು